ಕೇಂದ್ರ ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ : ಸಿದ್ದರಾಮಯ್ಯ

KannadaprabhaNewsNetwork |  
Published : Jul 26, 2025, 12:30 AM ISTUpdated : Jul 26, 2025, 07:39 AM IST
Karnataka CM Siddaramaiah (Photo/ANI)

ಸಾರಾಂಶ

ದೇಶದಲ್ಲಿ ಜಾತಿಗಣತಿಗೆ ಒತ್ತಾಯಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅವರ ನಿರಂತರ ಒತ್ತಡದಿಂದ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ಈಗ ಕೇಂದ್ರ ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

  ನವದೆಹಲಿ :  ದೇಶದಲ್ಲಿ ಜಾತಿಗಣತಿಗೆ ಒತ್ತಾಯಿಸಿದ್ದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಅವರ ನಿರಂತರ ಒತ್ತಡದಿಂದ ಕೇಂದ್ರ ಸರ್ಕಾರ ಈ ಕೆಲಸಕ್ಕೆ ಮುಂದಾಗಿದೆ. ಈಗ ಕೇಂದ್ರ ನ್ಯಾಯಯುತವಾಗಿ ಜಾತಿಗಣತಿ ನಡೆಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ನಡೆದ ‘ಭಾಗಿದಾರ್‌ ನ್ಯಾಯ್‌ ಸಮ್ಮೇಳನ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಷ್ಟ್ರವ್ಯಾಪಿ ಜಾತಿಗಣತಿ ನಡೆಸಬೇಕು ಎಂಬುದು ರಾಜಕೀಯ ಬೇಡಿಕೆಯಲ್ಲ. ಸಾಂವಿಧಾನಿಕ ಅಗತ್ಯವಾಗಿದೆ. ಸತ್ಯಾಂಶವಿಲ್ಲದೆ ಯಾರೂ ಕಾಣುವುದಿಲ್ಲ. ಗೋಚರತೆ ಇಲ್ಲದೆ ನ್ಯಾಯವೂ ಇಲ್ಲ. ಸಾಮಾಜಿಕ ನ್ಯಾಯಕ್ಕೆ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ. ಕೇಂದ್ರ ಸರ್ಕಾರ ನ್ಯಾಯಯುತವಾಗಿ ಜಾತಿಗಣತಿ ನಡೆಸಬೇಕು ಎಂದು ಅವರು ಒತ್ತಾಯಿಸಿದರು.

ರಾಹುಲ್ ಗಾಂಧಿಯವರು ನಿಜವಾದ ನ್ಯಾಯ ಯೋಧರಾಗಿ ಹೊರಹೊಮ್ಮಿದ್ದಾರೆ. ಭಾರತ ಜೋಡೋ ಯಾತ್ರೆ ಮತ್ತು ಭಾರತ ಜೋಡೋ ನ್ಯಾಯ ಯಾತ್ರೆಯ ಸಮಯದಲ್ಲಿ ದೇಶದಾದ್ಯಂತ ಅವರು ಪ್ರಯಾಣಿಸಿದ್ದಾರೆ. ಅವರ ಯಾತ್ರೆ ಅಧಿಕಾರಕ್ಕಾಗಿ ಆಗಿರಲಿಲ್ಲ. ಬದಲಿಗೆ ಜನರ ಧ್ವನಿಗಳನ್ನು ಆಲಿಸಲು ಯಾತ್ರೆ ಮಾಡಿದರು. ಶೋಷಣೆಯ ಅಂಚಿನಲ್ಲಿರುವ ಜನರಿಗೆ ಧ್ವನಿಯನ್ನು ನೀಡಿದರು. ಜಾತಿಗಣತಿಗಾಗಿ ಮತ್ತು ಸಮಾನತೆಗಾಗಿ ಅವರು ನಡೆಸಿದ ನಿರಂತರ ಹೋರಾಟ, ಬಿಜೆಪಿಯನ್ನು ಒಳನಿಷ್ಠೆಯಿಂದಲ್ಲದಿದ್ದರೂ ಒತ್ತಡದಿಂದ ಪ್ರತಿಕ್ರಿಯಿಸುವಂತೆ ಮಾಡಿದೆ ಎಂದರು.

ಎಲ್ಲರೂ ಧೈರ್ಯದಿಂದ ಮಾತನಾಡುವ, ನ್ಯಾಯಕ್ಕಾಗಿ ಸವಾಲು ಹಾಕುವ, ನ್ಯಾಯವನ್ನು ಚರ್ಚಾತೀತವಾಗಿ ಖಾತರಿಪಡಿಸುವ ಭಾರತದ ನಿರ್ಮಾಣದ ಕನಸು ರಾಹುಲ್‌ ಅವರಿದು. ಇದು ಕಾಂಗ್ರೆಸ್ ನ ಗ್ಯಾರಂಟಿ ಕೂಡ ಆಗಿದೆ ಎಂದು ಹೇಳಿದರು.

ಡಾ.ಅಂಬೇಡ್ಕರ್ ಹೇಳಿದಂತೆ, ‘ನ್ಯಾಯವು ರಾಷ್ಟ್ರದ ಆತ್ಮವಾಗಿದೆ.’ ಇಂದು ಆ ಆತ್ಮವು ತಾರತಮ್ಯ ಮತ್ತು ಅಸಮಾನತೆಯ ವಿರುದ್ಧ ಕೂಗುತ್ತಿದೆ. ಈ ಸಮ್ಮೇಳನವು ನಮ್ಮ ಉತ್ತರವಾಗಿರುವುದಲ್ಲದೆ , ಎಲ್ಲ ಜಾತಿ-ವರ್ಗದವರಿಗೂ ಸಮಾನ ಭಾಗವಹಿಸುವಿಕೆಯ ಸ್ಥಾನ ಸಿಗುವವರೆಗೆ ನಾವು ವಿಶ್ರಾಂತಿ ಪಡೆಯುವುದಿಲ್ಲ ಎಂಬ ಪ್ರತಿಜ್ಞೆಯೂ ಆಗಿದೆ ಎಂದರು.

ಮಹಾತ್ಮ ಗಾಂಧೀಜಿಯವರಿಂದ ಹಿಡಿದು, ರಾಹುಲ್ ಗಾಂಧಿಯವರೆಗೆ ಕಾಂಗ್ರೆಸ್ ಪಕ್ಷವು ಯಾವಾಗಲೂ ಶೋಷಿತರ ಪರವಾಗಿ ನಿಂತಿದೆ. ನ್ಯಾಯವು ಕೇವಲ ಘೋಷಣೆಯಲ್ಲ, ಇದು ಸಾಂವಿಧಾನದ ಭರವಸೆಯಾಗಿದೆ ಮತ್ತು ಭಾಗಿದಾರಿಯು ಜನತಂತ್ರದ ಜೀವನಾಡಿಯಾಗಿದೆ ಎಂದರು.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗಳು ಶತಮಾನಗಳಿಂದ ಆಚರಿಸಿಕೊಂಡು ಬರುತ್ತಿರುವ ಸಾಮಾಜಿಕ ಅಸಮಾನತೆಯನ್ನು ಹೊಸ ರೂಪಗಳಲ್ಲಿ ಬಲಪಡಿಸಲು ಯತ್ನಿಸುತ್ತಿವೆ. ಇದನ್ನು ನಾವಿಂದು ಧೈರ್ಯವಾಗಿ ಎದುರಿಸಬೇಕಿದೆ ಎಂದರು.

ಆರ್‌ಎಸ್‌ಎಸ್‌, ಬಿಜೆಪಿಯವರದು ಮನುವಾದಿ ದೃಷ್ಟಿಕೋನ ಹೊಂದಿದ್ದಾರೆ. ಅಲ್ಲಿ ಕೇವಲ ಪ್ರಬಲರು ಮಾತ್ರ ಘನತೆಗೆ ಅರ್ಹರಾಗಿರುತ್ತಾರೆ. ಆದರೆ, ನಮ್ಮ ಸಂವಿಧಾನ ಬಲಿಷ್ಠರ ಬದುಕಿಗೆ ಭರವಸೆ ನೀಡುವುದಿಲ್ಲ. ಬದಲಿಗೆ ದುರ್ಬಲರಿಗೆ ನ್ಯಾಯ ಹಾಗೂ ಭರವಸೆ ನೀಡುತ್ತದೆ. ಆದ್ದರಿಂದ, ನಾನು ನಮ್ಮ ಸಂವಿಧಾನದ ರಕ್ಷಣೆಗಾಗಿ ಕರೆ ನೀಡುತ್ತೇನೆ. ಸಂವಿಧಾನದ ರಕ್ಷಣೆಯ ಮೂಲಕ ಮಾತ್ರ ನಾವು ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಬಹುದು ಎಂದು ಹೇಳಿದರು.

ಮಹಾತ್ಮ ಗಾಂಧಿಯವರ ಸರ್ವೋದಯ ಮತ್ತು ಕುವೆಂಪು ಅವರ ‘ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು’ ನಿಜವಾದ ಒಳಗೊಳ್ಳುವಿಕೆಯನ್ನು ಪ್ರೇರೇಪಿಸಿತು. ಆದರೆ, ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂಬ ಘೋಷಣೆಗಾಗಿ ಪದಗಳನ್ನು ಎರವಲು ಪಡೆದರಾದರೂ, ಆ ಚೇತನವನ್ನು ತೊರೆದರು ಎಂದು ಆರೋಪಿಸಿದರು.

1990ರಲ್ಲಿ ಮಂಡಲ್‌ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಾಗ, ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಅದನ್ನು ವಿರೋಧಿಸಿತು. ಗಲಭೆಗಳನ್ನು ಉತ್ತೇಜಿಸಿದ ಪರಿಣಾಮ, 200ಕ್ಕೂ ಹೆಚ್ಚು ಸಾವುಗಳು ಅಂದು ಸಂಭವಿಸಿದವು. ಆದರೆ, ಪಿ.ವಿ.ನರಸಿಂಹ ರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಶೇ.27% ರಷ್ಟು ಮೀಸಲಾತಿಯನ್ನು ಜಾರಿಗೆ ತಂದು, ಕ್ರೌರ್ಯದ ಎದುರು ಧೈರ್ಯ ತೋರಿತು. 1993ರಲ್ಲಿ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗವನ್ನು ರಚಿಸಿ, ಲಕ್ಷಾಂತರ ಜನರಿಗೆ ಕಾಂಗ್ರೆಸ್‌ ಸಾಂಸ್ಥಿಕ ಧ್ವನಿ ನೀಡಿತು ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಜಾತಿಗಣತಿ ನಡೆಸಿತು. ಆದರೆ, ಬಿಜೆಪಿ ದತ್ತಾಂಶವನ್ನು ತಡೆಹಿಡಿದು, ಜಾತಿಗಣತಿಯನ್ನು ತಡೆಗಟ್ಟಿತು ಎಂದು ಅವರು ಆರೋಪಿಸಿದರು.

ಕೇಂದ್ರ ಸರ್ಕಾರದ ಸೇವೆಗಳಲ್ಲಿ ಒಬಿಸಿಯ ಪ್ರಾತಿನಿಧ್ಯ ಶೇ 22% ಕ್ಕಿಂತ ಕಡಿಮೆ ಇದೆ. ಬಿಜೆಪಿ ಸರ್ಕಾರ, ಅಗ್ನಿಪಥದಿಂದ ಹಿಡಿದು ಖಾಸಗೀಕರಣದವರೆಗೆ ಮೀಸಲಾತಿಗಳನ್ನು ತಪ್ಪಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.

PREV
Read more Articles on

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ