-ಹೋರಾಟಕ್ಕೆ ಜಿಲ್ಲಾಡಳಿತ ಸ್ಪಂದನೆ : ಉಮೇಶ ಮುದ್ನಾಳ್ ಹರ್ಷ
-----ಕನ್ನಡಪ್ರಭ ವಾರ್ತೆ ಯಾದಗಿರಿ
ಸಾಂಕ್ರಾಮಿಕ ರೋಗದ ಭೀತಿಯ ಅಬ್ಬೆತುಮಕೂರು ಗ್ರಾಮದಲ್ಲಿ ಜಿಟಿ ಜಿಟಿ ಮಳೆಯಲ್ಲಿ ಕೈಯಲ್ಲಿ ಛತ್ರಿ ಹಿಡಿದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.ಸ್ಥಳಕ್ಕೆ ಯಾದಗಿರಿ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಕುರಿತು ಪರಿಶೀಲಿಸಿದರು. ಜಿಲ್ಲಾ ಪಂಚಾಯತ ಸಿಇಒ ಲವೀಶ ಅವರು ಮಾತನಾಡಿ, ವಿದ್ಯುತ್ ಸಮಸ್ಯೆ ಬಗೆಹರಿಸಿ, ರಸ್ತೆಯಲ್ಲಿನ ತಗ್ಗುಗುಂಡಿಗೆ ಮೊರಮ್ ಹಾಕಿ ಕಲುಷಿತ ನೀರು ನಿಲ್ಲದಂತೆ ಸರಿಪಡಿಸಿ ಎಂದರು.
ಸೊಳ್ಳೆಗಳ ಉತ್ಪತ್ತಿ ಯಾಗದಂತೆ ನಿಯಂತ್ರಿಸಲು ಕ್ರಮವಹಿಸಬೇಕು. ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ವಾರದೊಳಗೆ ಎಲ್ಲ ಸಮಸ್ಯೆಯನ್ನು ಸರಿಪಡಿಸಿ ಎಂದು ಸೂಚನೆ ನೀಡಿದರು.ಉಮೇಶ ಕೆ ಮುದ್ನಾಳ ಮಾತನಾಡಿ, ಈ ಗ್ರಾಮಕ್ಕೆ ಅಭಿವೃದ್ಧಿಗಾಗಿ ಬಂದ ಅನುದಾನ ಎಲ್ಲಿಗೆ ಹೋಯಿತು? ಮೂಲಭೂತ ಸೌಕರ್ಯಗಳಿಂದ ಗ್ರಾಮ ವಂಚಿತವಾಗಲು ಕಾರಣ ಯಾರು? ಕಲುಷಿತ ನೀರು ನಿಂತು ಡೆಂಘೀ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಸೊಳ್ಳೆಗಳ ಹಾವಳಿಗೆ ಜನ ಜಾನುವಾರುಗಳು ತತ್ತರಿಸಿವೆ. ಚರಂಡಿ , ಸಿ.ಸಿ ರಸ್ತೆ ನಿರ್ಮಾಣವನ್ನು ಪೂರ್ಣ ಪ್ರಮಾಣದಲ್ಲಿ ಮಾಡದಿದ್ದರೆ ಪ್ರತಿಭಟನೆ ಮುಂದುವರೆಸುವುದಾಗಿ ಎಚ್ಚರಿಸಿದರು.
ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಗ್ರಾಮದ ಮುಖಂಡರು ಮತ್ತು ಮಹಿಳೆಯರು ಉಪಸ್ಥಿತರಿದ್ದರು.22ವೈಡಿಆರ್6 : ಯಾದಗಿರಿ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಒರಡಿಯಾ ಅವರು ಗ್ರಾಮಕ್ಕೆ ಭೇಟಿ ನೀಡಿದರು.