ಸಿರಿಧಾನ್ಯ ಖಾದ್ಯ ಸವಿದ ಡಿಸಿ, ಸಿಇಒ

KannadaprabhaNewsNetwork | Published : Dec 15, 2024 2:02 AM

ಸಾರಾಂಶ

ಸಿರಿಧಾನ್ಯ, ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಗೆ ಚಾಲನೆ ನೀಡಿದ ಡಿಸಿ, ಸಿಇಒ ಖಾದ್ಯ ಕೂಡ ಸವಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ನವನಗರದ ಎಪಿಎಂಸಿ ಹತ್ತಿರವಿರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಸಾವಯವ ಮೇಳದ ಅಂಗವಾಗಿ ಹಮ್ಮಿಕೊಂಡ ಸಿರಿಧಾನ್ಯ ಮತ್ತು ಮರೆತುಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಪಂ ಸಿಇಒ ಶಶಿಧರ ಕುರೇರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ವಿವಿಧ ಬಗೆಯ ಖಾದ್ಯ ಸವಿದರು.

ಗುರುವಾರ ಜಿಲ್ಲಾಡಳಿತ, ಜಿಪಂ, ಧಾರವಾಡ ಕೃಷಿ ವಿಶ್ವವಿದ್ಯಾಲಯ, ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ತಂತ್ರಜ್ಞಾನ ಸಂಸ್ಥೆ ಸಹಯೋಗದಲ್ಲಿ ನಡೆದ ಪಾಕ ಸ್ಪರ್ಧೆ ನಡೆಯಿತು. ಬಗೆಯ ಖಾದ್ಯಗಳು ರುಚಿಕರವಾಗಿದ್ದು, ಇವುಗಳನ್ನು ತಯಾರಿಸುವವರು ಮುನ್ನಲೆಗೆ ಬರೆಯಬೇಕಾಗಿದೆ. ಈ ಎಲ್ಲ ಬಗೆಯ ಅಪಾರ ಪದಾರ್ಥಗಳ ಮಾಹಿತಿಯನ್ನು ಪುಸ್ತಕದ ರೂಪದಲ್ಲಿ ಹೊರತಂದು ಪ್ರತಿಯೊಬ್ಬರೂ ತಯಾರಿಸಿ ಅದರ ರುಚಿ ಪಡೆಯುವಂತಬೇಕು. ಇಂಥ ಸಿರಿಧಾನ್ಯ ಅಧಿಕ ಪ್ರಮಾಣದಲ್ಲಿ ಬೆಳೆಯುವಂತಾಗಬೇಕು ಎಂದರು.

ಪಾಕ ಸ್ಪರ್ಧೆಯಲ್ಲಿ ಸಮೃದ್ಧ ಪೋಷಕಾಂಶಕ್ಕೆ ಪೂರಕವಾಗಿರುವ ಆಧುನಿಕ ಜೀವನ ಶೈಲಿಗೆ ಅನಿವಾರ್ಯವಾಗಿರುವ ಸಿರಿಧಾನ್ಯಗಳ ಬಗೆ ಬಗೆಯ ಭಕ್ಷ ಭೋಜನಗಳು ಬಾಯಲ್ಲಿ ನೀರೂರಿಸುವಂತಾಗಿದ್ದವು. ಸಿರಿಧಾನ್ಯದಿಂದ ತಯಾರಿಸಿದ ಖಾರ ಖಾದ್ಯ, ಸಿಹಿ ಖಾದ್ಯ ಹಾಗೂ ಮರೆತು ಹೋದ 100ಕ್ಕೂ ಹೆಚ್ಚು ಖಾದ್ಯಗಳನ್ನು ಸ್ಪರ್ಧೆಗಳಲ್ಲಿ ಇಡಲಾಗಿದ್ದು, ಮುಖ್ಯವಾಗಿ ಸಜ್ಜೆರೊಟ್ಟಿ, ಹುಣಸೆ, ರಾಗಿ ಶಂಕರಪಾಳೆ, ತಾಲಿಪಟ್ಟು, ಜೋಳದ, ಸಜ್ಜೆಯ ಚಕ್ಕುಲಿ, ರಾಗಿ ನಮಕಿನ್, ಜೋಳದ ಕಿಚಡಿ, ವಡೆ, ದೋಸೆ, ಕಡಬು, ಇಡ್ಲಿ, ಉಪ್ಪಿಟ್ಟು, ನುಚ್ಚು, ಖಾರದ ವಡೆ ಖಾರದ ಖಾದ್ಯಸ್ಪರ್ಧೆಗೆ ಇಡಲಾಗಿತ್ತು.

ಸಿಹಿ ಖಾದ್ಯದಲ್ಲಿ ನವಣೆ ಹೋಳಿಗೆ, ಉಂಡೆ, ಸಜ್ಜೆ ಮಾದಲಿ, ರಾಗೆ ಹಾಲುಬಾಯಿ, ರಾಗಿ ಹಲ್ವಾ, ಸಜ್ಜೆ ಸಿಹಿ ಕಡಬು, ಸಾಮೆ ಹಿಟ್ಟಿನ ಹಲ್ವಾ, ನೆವಣಕ್ಕಿ ಹೋಳಿಗೆ, ನವಣೆಯ ಬಾದಾಮಿ ಪುರಿ ಹಾಗೂ ಮರೇತು ಹೋದ ಖಾದ್ಯಗಳಾದ ಅಕ್ಕಿ ಉಂಡೆ, ಕುಂಬಳಕಾಯಿ ಹಲ್ವಾ, ಕಜ್ಜಾಯ, ಹುರುಳಿ ಸಂಗಟಿ, ಹೆಸರು ಬೆಳೆ ಖಾರದ ಹೋಳಿಗೆ, ಅಲಸಂದಿ ಸೆಂಡಿಗೆ, ಗೆಣಸಿನ ಹೋಳಿಗೆ, ಗುಲಕಂದ ರೋಜ, ಬಳವಲಕಾಯಿ ಹಣ್ಣಿನ ರಸ, ಕೊಬ್ಬರಿ ಕಡಬು, ಕುಂಬಳಕಾಯಿ ಗಾರ್ಗಿ, ಬದನೆಕಾಯಿ ರೊಟ್ಟಿ ಸಿಹಿ ತಿಂಡಿ ಸೇರಿದಂತೆ ಇತರೆ ಬಗೆಯ ಖಾದ್ಯಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಪ್ರತ್ಯೇಕವಾಗಿ ಮೂರು ವಿಭಾಗದಲ್ಲಿ ಪ್ರತ್ಯೇಕ ಬಹುಮಾನ ನೀಡಲಾಗುತ್ತದೆ. ಆಯ್ಕೆಯಾದವರಿಗೆ ಡಿ.14ರಂದು ನವನಗರದ ಕಲಾಭವನದಲ್ಲಿ ಜರಗುವ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ ಬಹುಮಾನ ನೀಡಲಾಗುವುದೆಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪನಿರ್ದೇಶಕ ರೂಢಗಿ, ಜಿಪಂ ಮುಖ್ಯ ಯೋಜನಾಧಿಕಾರಿ ಪುನಿತ್.ಆರ್, ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಮೇಶ್ವರ ಉಕ್ಕಲಿ ಸೇರಿ ಕೃಷಿ ಇಲಾಖೆಯ ತಾಲೂಕು ಅಧಿಕಾರಿಗಳು ಸೇರಿದಂತೆ ಇತರರು ಇದ್ದರು.-----

----------ಏನಿತ್ತು ಸ್ಪರ್ಧೆಯಲ್ಲಿ?

ಸಿರಿಧಾನ್ಯದಿಂದ ತಯಾರಿಸಿದ ಖಾರ ಖಾದ್ಯ, ಸಿಹಿ ಖಾದ್ಯ ಹಾಗೂ ಮರೆತು ಹೋದ 100ಕ್ಕೂ ಹೆಚ್ಚು ಖಾದ್ಯಗಳನ್ನು ಸ್ಪರ್ಧೆಗಳಲ್ಲಿ ಇಡಲಾಗಿತ್ತು. ಮುಖ್ಯವಾಗಿ ಸಜ್ಜೆರೊಟ್ಟಿ, ಹುಣಸೆ, ರಾಗಿ ಶಂಕರಪಾಳೆ, ತಾಲಿಪಟ್ಟು, ಜೋಳದ, ಸಜ್ಜೆಯ ಚಕ್ಕುಲಿ, ರಾಗಿ ನಮಕಿನ್, ಜೋಳದ ಕಿಚಡಿ, ವಡೆ, ದೋಸೆ, ಕಡಬು, ಇಡ್ಲಿ, ಉಪ್ಪಿಟ್ಟು, ನುಚ್ಚು, ಖಾರದ ವಡೆ ಖಾರದ ಖಾದ್ಯಸ್ಪರ್ಧೆಗೆ ಇಡಲಾಗಿತ್ತು.

Share this article