ಅಂಕೋಲಾ: ಇಲ್ಲಿನ ಶಕ್ತಿದೇವತೆ ಎಂದೇ ಖ್ಯಾತಿ ಪಡೆದಿರುವ ಐತಿಹಾಸಿಕ ಮಹತ್ವವುಳ್ಳ ಗ್ರಾಮದೇವತೆ ಭೂಮ್ತಾಯಿ(ಶಾಂತಾದುರ್ಗಾ) ದೇವರ ಬಂಡಿಹಬ್ಬ ಉತ್ಸವಕ್ಕೆ ಅಕ್ಷಯ ತೃತೀಯ ದಿನವಾದ ಶುಕ್ರವಾರ ಸಂಜೆ ವಿಧ್ಯುಕ್ತ ಚಾಲನೆ ದೊರೆಯಿತು.
ಬಂಡಿಹಬ್ಬದ ಕಳಸವು ಸಮೀಪದ ಕುಂಬಾರಕೇರಿ ಮೂಲ ಕಳಸ ದೇವಸ್ಥಾನದಿಂದ ಅಲಂಕಾರ ಭೂಷಿತವಾದ ಕಳಸವು ಛತ್ರ ಚಾಮರದ ಸೊಬಗು, ಸಾಂಪ್ರದಾಯಿಕ ವಾದ್ಯದೊಂದಿಗೆ ಹೊತ್ತುಕೊಂಡು ನಗರದಲ್ಲಿ ಸಂಚರಿಸಿ ಶಾಂತಾದುರ್ಗಾ(ಭೂಮ್ತಾಯಿ) ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಯಿತು.
ದೇವಿಯ ಕಳಸ ಸ್ವಾಗತಿಸಲು ನಗರದ ತುಂಬೆಲ್ಲ ತಳಿರು- ತೋರಣಗಳಿಂದ ಸಿಂಗರಿಸಿ ರಂಗೋಲಿ ಹಾಕಿದ್ದರು. ದೇವರ ಕಳಸವನ್ನು ಉದಯ ಗಣಪತಿ ಗುನಗಾ ಹೊತ್ತು ಸಾಗಿದರು. ಅರ್ಚಕ ಗಣಪತಿ ಭಟ್ ಹಾಗೂ ಶ್ಯಾಮ್ ಭಟ್ ಅವರು ಪೂಜಾ ಕೈಂಕರ್ಯವನ್ನು ನಡೆಸಿಕೊಟ್ಟರು.ನಗರದ ಕಾಳಮ್ಮ ದೇವಸ್ಥಾನದ ಎದರು ಮೇ ೨೦ರಂದು(ದೇವರ ಅಣ್ಣನಾದ ಬೊಮ್ಮಯ್ಯ ದೇವರನ್ನು ಕರೆಯುವ ಧಾರ್ಮಿಕ ಪದ್ಧತಿ.) ಕಿರು ಬಂಡಿಹಬ್ಬ ನಡೆಯಲಿದೆ. ಮೇ ೨೧ರ ರಾತ್ರಿ ಮಾಸ್ತಿ ಅಗ್ನಿಪ್ರವೇಶ, ಮೇ ೨೩ರಂದು ದೊಡ್ಡ ಬಂಡಿಹಬ್ಬ ಹಾಗೂ ಮೇ ೨೪ರಂದು ಸಂಕಲ್ಪಿತ ಹರಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಕಳಸ ದೇವಸ್ಥಾನದ ಬಿಡಿ ಗುನಗರಾದ ವಾಸುದೇವ ನೀಲಪ್ಪ ಗುನಗಾ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಂತಾದುರ್ಗಾ ದೇವಸ್ಥಾನದ ಆಡಳಿತ ಮಂಡಳಿಯ ಟ್ರಸ್ಟಿಗಳು ದೇವಸ್ಥಾನದ ಹಕ್ಕುದಾರರು, ಕಟಗಿದಾರರು ಹಾಜರಿದ್ದು ಉತ್ಸವದ ಮೆರುಗನ್ನು ಹೆಚ್ಚಿಸಿದರು.