ಕನ್ನಡಪ್ರಭ ವಾರ್ತೆ ಮಂಗಳೂರು
2025ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಏ.16, 17ರಂದು ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22,525 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಜಿಲ್ಲೆಯ 43 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.ಏ.16ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ, ಏ.17ರಂದು ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆಗಳು ನಡೆಯಲಿದ್ದು, ಸರ್ವ ಸಿದ್ಧತೆಗಳನ್ನು ನಡೆಸಲಾಗಿದೆ. ಮಂಗಳೂರಿನಲ್ಲಿ 27 ಪರೀಕ್ಷಾ ಕೇಂದ್ರಗಳು, ಮೂಡುಬಿದಿರೆ- 8, ಬೆಳ್ತಂಗಡಿ- 4, ಪುತ್ತೂರಿನ 4 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.
ಅಕ್ರಮ ತಡೆಗೆ ಬಿಗಿ ವ್ಯವಸ್ಥೆ:ಈ ಬಾರಿ ಪರೀಕ್ಷೆಯಲ್ಲಿನ ಅಕ್ರಮ ತಡೆಗಟ್ಟಲು ಕಟ್ಟೆಚ್ಚರ ವಹಿಸಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ವೆಬ್ ಕಾಸ್ಟಿಂಗ್ ಮೂಲಕ ಎಲ್ಲ ಪರೀಕ್ಷಾ ಕೇಂದ್ರಗಳ ಮೇಲೆ ನಿಗಾ ಇಡಲಾಗುತ್ತದೆ. ಒಂದು ತಂಡವು ಜಿಲ್ಲೆಯ ಎಲ್ಲ ಕೇಂದ್ರಗಳಲ್ಲಿನ ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್‌ನಲ್ಲಿ ನೀಡಿದ ಕ್ಯೂಆರ್ ಕೋಡ್, ಫೇಸ್ ರೆಕಗ್ನಿಶನ್ ಪರಿಶೀಲನೆ ನಡೆಸಿದರೆ, ಇನ್ನೊಂದು ತಂಡ ಪರೀಕ್ಷಾ ಕೇಂದ್ರದ ಎಲ್ಲ ಕ್ಯಾಮರಾಗಳ ಮೇಲೆ ನಿಗಾ ಇರಿಸಲಿದೆ.ಡ್ರೆಸ್ ಕೋಡ್:
ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಡ್ರೆಸ್‌ಕೋಡ್ ನಿಯಮ ಮಾಡಲಾಗಿದೆ. ಪುರುಷ/ ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಪುರುಷರು ಜೇಬು ಇಲ್ಲದ/ ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್‌ಗೆ ಅವಕಾಶವಿಲ್ಲ. ಶೂ ನಿಷೇಧಿಸಲಾಗಿದೆ. ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಸಂಪೂರ್ಣ ನಿಷೇಸಲಾಗಿದೆ. ಕೆಇಎ ವೆಬ್‌ಸೈಟ್‌ನಲ್ಲಿ ವಸ್ತ್ರ ಸಂಹಿತೆಯ ಸಂಪೂರ್ಣ ವಿವರಗಳನ್ನು ನೀಡಲಾಗಿದೆ.ಈ ಬಾರಿ ವಿದ್ಯಾರ್ಥಿಗಳನ್ನು ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ತಪಾಸಣೆ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಬಿಡಲಿದ್ದಾರೆ. ಹೀಗಾಗಿ ಕನಿಷ್ಠ ಒಂದೂವರೆ ಗಂಟೆ ಮುಂಚಿತವಾಗಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ತಪಾಸಣೆಗೆ ಒಳಗಾಗಬೇಕು ಎಂದು ಕೆಇಎ ಸೂಚನೆ ನೀಡಿದೆ.
ಕನ್ನಡ ಪರೀಕ್ಷೆಗೆ 106 ಗೈರುಸಿಇಟಿ ಪರೀಕ್ಷೆಗೆ ನೋಂದಣಿ ಮಾಡಿರುವ ಹೊರನಾಡ ಕನ್ನಡಿಗರಿಗೆ ಮಂಗಳವಾರ ಕನ್ನಡ ಭಾಷಾ ಪರೀಕ್ಷೆ ಮಂಗಳೂರಿನಲ್ಲಿ ನಡೆಯಿತು. ಒಟ್ಟು 655 ವಿದ್ಯಾರ್ಥಿಗಳಲ್ಲಿ 549 ಮಂದಿ ಹಾಜರಾಗಿದ್ದು, 106 ಮಂದಿ ಗೈರು ಹಾಜರಾಗಿದ್ದರು.