ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಂಘಟಿಸುವ, ಪ್ರೀತಿಸುವ ಗುಣ ರಂಗಕರ್ಮಿ ಸಿ.ಜಿ.ಕೃಷ್ಣಮೂರ್ತಿ ಅವರಲ್ಲಿತ್ತು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ರಂಗಪ್ರಯೋಗ ಶಾಲೆಯಲ್ಲಿ ಜರುಗಿದ ಸಿಜಿಕೆಯ 18ನೇ ವರ್ಷದ ನೆನಪು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಿಜಿಕೆ ಎನ್ನುವ ಮೂರಕ್ಷರ ಚೈತನ್ಯ ತುಂಬುವಂಥದ್ದು, ಜಾತಿಯಿಂದ ನಾಯಕನಾಗಿದ್ದರೂ ಎಂದೂ ಜಾತಿಯ ಮನೋಭಾವನೆ ಬೆಳೆಸಿಕೊಂಡವರಲ್ಲ. ಮಠ ಪರಂಪರೆಯಿಂದ ದೂರವಿದ್ದು, ಸ್ವಾಮಿಗಳೆಂದರೆ ಮಾರುದ್ದ ಇದ್ದಂಥವರು ಎಂದೂ ಹಣಕ್ಕಾಗಿ ಆಸೆಪಟ್ಟವರಲ್ಲ. ಸಂಗ್ರಹ ಪ್ರವೃತ್ತಿ ಅವರಲ್ಲಿರದೇ ದಾಸೋಹ ಪ್ರಜ್ಞೆ ಇತ್ತು. ಸಾಣೇಹಳ್ಳಿಗೆ ಬಂದ ಮೇಲೆ ಎಲ್ಲಾ ದುಶ್ಚಟಗಳಿಂದ ದೂರವಾಗಿ ರಂಗಭೂಮಿ ಹುಲುಸಾಗಿ ಬೆಳೆಸುವ ಕ್ರಿಯೆಯಲ್ಲಿ ತೊಡಗಿಕೊಂಡರು ಎಂದರು.ಮೊದಲ ವರ್ಷದ ತಂಡದಲ್ಲಿ ಶೋಕಚಕ್ರ, ಮಹಾಬೆಳಕು, ಉರಿಲಿಂಗಪೆದ್ದಿ ನಾಟಕಗಳು ಇಡೀ ಕರ್ನಾಟಕದಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು ತುಂಬ ಮೆಚ್ಚುಗೆಗೆ ಪಾತ್ರವಾದವು. ಆಗ ಶಿವಸಂಚಾರದಲ್ಲಿದ್ದ ಕಲಾವಿದರು ತರಬೇತಿ ಪಡೆದವರಲ್ಲ. ಆದರೆ ಪ್ರತಿಭಾವಂತರಾಗಿದ್ದರು. ಸಿಜಿಕೆಯಲ್ಲಿದ್ದ ಒಂದು ವಿಶಿಷ್ಟ ಗುಣ ಪ್ರತಿದಿನ ಒಬ್ಬೊಬ್ಬ ಹೊಸ ವಿದ್ವಾಂಸರನ್ನು, ಕಲಾವಿದ, ನಿರ್ದೇಶಕ, ಸಾಹಿತಿ, ಚಿಂತಕರನ್ನು ಪರಿಚಯಿಸುವ ಚಾಕಚಕ್ಯತೆ ಅವರಲ್ಲಿತ್ತು ಎಂದರು.
ಸಿಜಿಕೆ ಒಡನಾಡಿ ಐ.ಜಿ.ಚಂದ್ರಶೇಖರಯ್ಯ ಮಾತನಾಡಿ, ಸಿಜಿಕೆ ಇವತ್ತಿನವರೆಗೂ ಇದ್ದಿದ್ದರೆ ರಂಗಭೂಮಿ ಇನ್ನಷ್ಟು ಬೆಳವಣಿಗೆಯಾಗುತ್ತಿತ್ತು. ಅವರಲ್ಲಿ ದಾಸೋಹ ಪ್ರಜ್ಞೆ ಬಲವಾಗಿತ್ತು. ನೆರವಿನ ಅಗತ್ಯ ಇರುವವರಿಗೆ, ಅಸಹಾಯಕರಿಗೆ, ನಿರ್ಗತಿಕರಿಗೆ ರಂಗಭೂಮಿಗೆ ಜೀವನವನ್ನು ಸವೆಸಿದರು. ಅವರೊಬ್ಬ ರಂಗಭೂಮಿಯ ಧೃವತಾರೆ. ದೈಹಿಕವಾಗಿ ವಿಕಲಚೇತನರಾಗಿದ್ದರೂ ಅವರಲ್ಲಿನ ಸಾಮರ್ಥ್ಯ ಅಪರಿಮಿತವಾಗಿತ್ತು. ನಾಟಕ ರಂಜನೆಯ ಮಾಧ್ಯಮವನ್ನಾಗಿಸದೇ ಪ್ರತಿಭಟನೆ ಮಾಧ್ಯಮವನ್ನಾಗಿ ಮಾಡಿಕೊಂಡರು ಎಂದರು.ಸಿಜಿಕೆ ತಮ್ಮ ಕುಟುಂಬಕ್ಕೆ ಏನೂ ಬಿಟ್ಟು ಹೋಗಿಲ್ಲ. ರಂಗಭೂಮಿಗೆ ಹೆಸರನ್ನು ಮಾತ್ರ ಬಿಟ್ಟು ಹೋಗಿದ್ದಾರೆ. ಅವರ ಸೃಜನಶೀಲ ಚಟುವಟಿಕೆಗಳಿಂದ ಇಂದಿಗೂ ನಾಡಿನಲ್ಲಿ ಅವರ ಹೆಸರು ಜೀವಂತವಾಗಿದೆ. ಬದುಕು ಒಂದು ಕಲೆಯಾಗಿತ್ತು. ರಂಗಭೂಮಿ ಇರುವವರೆಗೂ ಸಿಜಿಕೆ ಹೆಸರು ಅಮರವಾಗಿರುತ್ತದೆ ಎಂದರು.
ರಂಗಶಾಲೆಯ ಪ್ರಾಂಶುಪಾಲ ನಟರಾಜ್ ಹೊನ್ನಾವಳ್ಳಿ ಮಾತನಾಡಿದರು. ಕಾರ್ಯಕ್ರಮಕ್ಕೆ ಮೊದಲು ಸಿಜಿಕೆ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಲಾಯಿತು. ಮೈಸೂರಿನ ಚಂದ್ರಶೇಖರಾಚಾರ್ ರಂಗಗೀತೆಗಳನ್ನು ಹಾಡಿದರು.