ಕನ್ನಡಪ್ರಭ ವಾರ್ತೆ ಚಡಚಣ
ಸುಮಾರು ₹450 ಕೋಟಿ ವೆಚ್ಚದ ಚಡಚಣ ಏತ ನೀರಾವರಿ ಯೋಜನೆಯ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಪ್ರಾಯೋಗಿಕವಾಗಿ ನೀರು ಹರಿಸಲಾಗುತ್ತಿದೆ. ಈ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ ಎಂದು ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.ಪಟ್ಟಣದಲ್ಲಿ ಸುಮಾರು ₹50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ನೂತನ ಕಟ್ಟಡದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕೆರೆ ತುಂಬುವ ಯೋಜನೆ, ಮನೆ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಅಮೃತ್ ಜಲ 0.2 ಯೋಜನೆ ಹಾಗೂ ಮತಕ್ಷೇತ್ರದ ಎಲ್ಲ ಹಳ್ಳಿಗಳಿಗೂ ಉತ್ತಮ ರಸ್ತೆ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಅನುದಾನ ಒದಗಿಸಲಿದೆ ಎಂದ ಅವರು, ಚಡಚಣ ಭಾಗದ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ಒಬ್ಬ ಸಾಲಗಾರನು ಯಾವುದೇ ಖಟಬಾಕಿ ಹೊಂದದೇ ಸುಮಾರು ₹25 ಕೋಟಿ ದುಡಿಯುವ ಬಂಡವಾಳ ಹೊಂದಿರುವುದು ರಾಜ್ಯದಲ್ಲಿ ಮಾದರಿಯಾಗಿದೆ. ಈ ಒಳ್ಳೆ ಸುದ್ದಿಯನ್ನು ಮಾಧ್ಯಮದವರು ದಪ್ಪ ಅಕ್ಷರದಲ್ಲಿ ಪ್ರಕಟಿಸಬೇಕು ಎಂದರು.
ಶಿಕ್ಷಕರ ಸೊಸೈಟಿ ನಿರ್ದೇಶಕ ಗುರು ಜೇವೂರ ಪ್ರಾಸ್ತಾವಿಕ ಮಾತನಾಡಿ, ಸುಮಾರು 15 ರು. ಬಂಡವಾಳದೊಂದಿಗೆ ಆರಂಭಗೊಂಡ ಈ ಪತ್ತಿನ ಸಂಘ ಇಂದು ₹25 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ಶಿಕ್ಷಕರು ಅರ್ಜಿ ಸಲ್ಲಿಸಿದ ಒಂದು ಗಂಟೆಯಲ್ಲಿ ₹15 ಲಕ್ಷ ಸಾಲವನ್ನು ಶೇ.11 ಬಡ್ಡಿ ದರದಲ್ಲಿ ನೀಡಿ ರಾಜ್ಯದಲ್ಲಿ ಒಂದು ಸದೃಢ ಹಾಗೂ ಮಾದರಿ ಸಂಘ ಎಂದು ಹೆಸರುವಾಸಿಯಾಗಿದೆ ಎಂದರು.ಕಾತ್ರಾಳ ಗುರುದೇವ ಆಶ್ರಮದ ಅಮೃತಾನಂದ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಯದಂತೆ ಚಡಚಣ ಭಾಗದ ನಿರಾವರಿ ಯೋಜನೆಗಳನ್ನು ಮಾನ್ಯ ಶಾಸಕರು ಅನುಷ್ಠಾನಗೊಳಿಸುತ್ತಿರುವುದು ಹೆಮ್ಮೆಯ ವಿಷಯ. ಯೋಜನೆಗಳು ಪೂರ್ಣಗೊಂಡ ಬಳಿಕ ನಾವೆಲ್ಲ ಅವರನ್ನು ಸನ್ಮಾನಿಸೋಣ ಎಂದರು.
ರಾಜಯೋಗಿನಿ ಬೃಹ್ಮಕುಮಾರಿ ಶ್ರೀದೇವಿ ಅಕ್ಕನವರು ಆಶಿರ್ವಚನ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೊಸೈಟಿ ಅಧ್ಯಕ್ಷ ಎಸ್.ಎಸ್.ಪಾಟೀಲ ಮಾತನಾಡಿದರು. ವೇದಿಕೆ ಮೇಲೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಮಜ್ಜಗಿ, ಕಾರ್ಯದರ್ಶಿ ಐ.ಎಂ.ಬೇದ್ರೆಕರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಸ್.ಸೊನಗಿ, ಕಾರ್ಯದರ್ಶಿ ವಿ.ಐ.ಕಾಂಬಳೆ, ಬಿಇಓ ಸುಜಾತಾ ಹುನೂರ, ಮುಖಂಡ ಕಾಂತುಗೌಡ ಪಾಟೀಲ, ಡಾ.ವಿ.ಎಸ್.ಪತ್ತಾರ, ವಿ.ಜಿ.ಮುತ್ತಿನ, ದೇವೀಂದ್ರಪ್ಪ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರು, ಶಿಕ್ಷಕರು ಇದ್ದರು.