ಡ್ರಾಪ್ ನೆಪದಲ್ಲಿ ಸರಗಳವು, ಓರ್ವನ ಹಿಡಿದ ಟ್ರಿಪಲ್‌ ಸಿಸ್ಟರ್ಸ್!

KannadaprabhaNewsNetwork |  
Published : Feb 08, 2025, 12:31 AM IST
5ಕೆಡಿವಿಜಿ6-ಚನ್ನಗಿರಿ ತಾ. ಚಿಕ್ಕಬೆನ್ನೂರು ಗ್ರಾಮದ ಬಳಿ ಸರಗಳ್ಳನಿಂದ ತೀವ್ರ ಹಲ್ಲೆಗೊಳಗಾದರೂ, ಆತನನ್ನು ಪೊಲೀಸರಿಗೆ ಹಿಡಿದುಕೊಟ್ಟು, ಧೈರ್ಯ, ಸಾಹಸ ಮೆರೆದ ಸಹೋದರಿಯರಾದ ರತ್ನಮ್ಮ, ಗೌರಮ್ಮ, ಶಾಂತಮ್ಮ. ...............5ಕೆಡಿವಿಜಿ7-ಚನ್ನಗಿರಿ ತಾ. ಚಿಕ್ಕಬೆನ್ನೂರು ಗ್ರಾಮದಲ್ಲಿ ಸರಗಳ್ಳತನವಾದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲಿಸಿದರು. | Kannada Prabha

ಸಾರಾಂಶ

ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಮಹಿಳೆಯ ಸರ ಕಳವಿಗೆ ಯತ್ನಿಸಿದ ಇಬ್ಬರಲ್ಲಿ ಒಬ್ಬನನ್ನು ಸಹೋದರಿಯರೇ ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಕಳ್ಳ ಹಲ್ಲೆ ಮಾಡಿದರೂ ಧೈರ್ಯ, ಸಾಹಸ ಮೆರೆದ ರತ್ನಮ್ಮ, ಗೌರಮ್ಮ, ಶಾಂತಮ್ಮ

ಕನ್ನಡಪ್ರಭ ವಾರ್ತೆ ದಾವಣಗೆರೆ

ಬೈಕ್‌ನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿ ಮಹಿಳೆಯ ಸರ ಕಳವಿಗೆ ಯತ್ನಿಸಿದ ಇಬ್ಬರಲ್ಲಿ ಒಬ್ಬನನ್ನು ಸಹೋದರಿಯರೇ ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಚನ್ನಗಿರಿ ತಾಲೂಕಿನ ಚಿಕ್ಕಬೆನ್ನೂರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸುರೇಶ ಸೆರೆಸಿಕ್ಕ ಆರೋಪಿಯಾಗಿದ್ದು, ಸಹಚರ ಹೊಸದುರ್ಗ ತಾಲೂಕಿನ ಕನ್ಗಂದಿ ಗ್ರಾಮದ ಸೋಮಶೇಖರ ತಲೆಮರೆಸಿಕೊಂಡಿದ್ದಾನೆ.

ಆಗಿದ್ದೇನು?:

ಚಿಕ್ಕಬೆನ್ನೂರು ಗ್ರಾಮದ ಸಹೋದರಿಯರಾದ ರತ್ನಮ್ಮ, ಗೌರಮ್ಮ, ಶಾಂತಮ್ಮ ಕಳ್ಳನ ಹಿಡಿದ ವೀರನಾರಿಯರು. ಕೊರಟಿಕೆಗೆ ಗ್ರಾಮದಲ್ಲಿ ಕೆಲಸ ಮುಗಿಸಿಕೊಂಡು, ಕಾಕನೂರು ಕಿತ್ತೂರು ರಾಣಿ ಚನಮ್ಮ ಶಾಲೆ ಬಳಿ ನಡೆದು ಬರುತ್ತಿದ್ದರು. ಇದೇ ವೇಳೆ ಆ ದಾರಿಯಲ್ಲಿ ಬಂದ ಬೈಕ್ ಸವಾರರಿಬ್ಬರು ತಾವೂ ಚಿಕ್ಕಬೆನ್ನೂರಿಗೆ ಹೊರಟಿದ್ದವೆ, ಬೈಕಿನಲ್ಲಿ ಕುಳಿತುಕೊಳ್ಳಿ, ಡ್ರಾಪ್‌ ಕೊಡುತ್ತೇವೆಂದು ಕರೆದಿದ್ದಾರೆ.

ಕಳ್ಳರೆಂದು ತಿಳಿಯದ ಸಹೋದರಿಯರ ಪೈಕಿ ರತ್ನಮ್ಮ ಮಾತ್ರ ಬೈಕ್‌ ಏರಿದ್ದಾರೆ. 200 ಮೀಟರ್ ದಾಟುತ್ತಿದ್ದಂತೆಯೇ ಬೈಕ್ ನಿಲ್ಲಿಸಿದ ಅಪರಿಚಿತರು ರತ್ನಮ್ಮನ ಕೊರಳಲ್ಲಿದ್ದ 40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಸರ ಕಿತ್ತುಕೊಂಡವನನ್ನು ಹಿಡಿದುಕೊಂಡ ರತ್ನಮ್ಮ, ತನ್ನ ರಕ್ಷಣೆಗಾಗಿ ಜೋರಾಗಿ ಕೂಗಿದ್ದಾರೆ. ಸರವನ್ನು ಕಿತ್ತುಕೊಂಡು ರತ್ನಮ್ಮನ ಕೈಯಲ್ಲಿ ಸಿಲುಕಿದ್ದ ಕಳ್ಳ, ಬೈಕ್‌ನಲ್ಲಿದ್ದವನಿಗೆ ಕೊಟ್ಟು, ಅಲ್ಲಿಂದ ಪರಾರಿಯಾಗುವಂತೆ ಕೂಗಿದ್ದಾನೆ.

ರತ್ನಮ್ಮನ ಕೂಗಾಟ ಕೇಳಿದ ಗೌರಮ್ಮ, ಶಾಂತಮ್ಮ ಸಹ ನೆರವಿಗೆ ಧಾವಿಸಿದ್ದಾರೆ. ದುರುಳ ಸರಗಳ್ಳ ಮೂವರೂ ಸಹೋದರಿಯರ ಮೇಲೂ ಹಲ್ಲೆ ಮಾಡಿದ್ದಾನೆ. ಆದರೂ, ಧೈರ್ಯಗುಂದದ ಸಹೋದರಿಯರು ಕಳ್ಳನ ವಿರುದ್ಧ ಹೋರಾಡಿ, ನೆಲಕ್ಕೆ ಕೆಡವಿದ್ದಾರೆ. ದಾರಿಯಲ್ಲಿ ಹೋಗುತ್ತಿದ್ದ ಯುವಕರು ವಿಷಯ ತಿಳಿದು, ಆರೋಪಿಗೆ ಧರ್ಮದೇಟು ನೀಡಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ರತ್ನಮ್ಮನ ಸರ ಕಿತ್ತುಕೊಂಡಿದ್ದ ಮತ್ತೊಬ್ಬ ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಆರೋಪಿ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಸುರೇಶನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ತಲೆಮರೆಸಿಕೊಂಡ ಬೈಕ್ ಸವಾರ ಸರಗಳ್ಳನನ್ನು ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾ. ಕನ್ಗಂದಿ ಗ್ರಾಮದ ಸೋಮಶೇಖರ ಎನ್ನಲಾಗಿದೆ. ಆತನಿಗಾಗಿ ಪೊಲೀಸರು ತೀವ್ರ ಶೋಧ ಕೈಗೊಂಡಿದ್ದಾರೆ. ಸರಗಳ್ಳನ ಹಲ್ಲೆಯಿಂದ ತಲೆ, ಮೈಗೆ ತೀವ್ರ ಪೆಟ್ಟಾಗಿದ್ದ ರತ್ನಮ್ಮ ಸಹೋದರಿಯರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಮೂವರೂ ಸಹೋದರಿಯರ ಧೈರ್ಯ, ಸಾಹಸವನ್ನು ಗ್ರಾಮಸ್ಥರು ಕೊಂಡಾಡಿದರು.

ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ತಲೆಮರೆಸಿಕೊಂಡ ಮತ್ತೊಬ್ಬನನ್ನು ಶೀಘ್ರವೇ ಬಂಧಿಸುತ್ತೇವೆ. ಸರಗಳವು ಪ್ರಕರಣಗಳ ತಡೆಯಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಸರಗಳ್ಳನ ವಿರುದ್ಧ ಸೆಣಸಾಡಿ, ಒಬ್ಬನನ್ನು ಹಿಡಿದು, ಯುವಕರ ಸಹಾಯದಿಂದ ಪೊಲೀಸರ ವಶಕ್ಕೆ ಒಪ್ಪಿಸಿದ ರತ್ನಮ್ಮ, ಗೌರಮ್ಮ, ಶಾಂತಮ್ಮ ಅವರ ಧೈರ್ಯ ಮೆಚ್ಚುವಂಥದ್ದು.

ಉಮಾ ಪ್ರಶಾಂತ, ಜಿಲ್ಲಾ ಎಸ್‌ಪಿ

PREV

Recommended Stories

79 ವರ್ಷಗಳ ನಂತ್ರ ಅಥಣಿಗೆ ಸರ್ಕಾರಿ ಪ್ರೌಢಶಾಲೆ!
ಪ್ರಜಾಪ್ರಭುತ್ವ ಉಳಿವಿಗೆ ಹೋರಾಟ ಅನಿವಾರ್ಯ