ಸಹಕಾರಿ ಕ್ಷೇತ್ರದಲ್ಲಿ ಹಿಂದುಳಿದ, ಸಣ್ಣ ಸಣ್ಣ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರಕಿಲ್ಲ: ವಿ. ರಾಜು

KannadaprabhaNewsNetwork | Published : Feb 26, 2024 1:34 AM

ಸಾರಾಂಶ

ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿರುವುದರ ಆಧಾರದಲ್ಲಿ ಸ್ಟಾಂಪ್‌ ವೆಂಡರ್‌ ಗಳಿಗೆ ಕಮಿಷನ್‌ ಮೊತ್ತವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಬೇಕು. ಶುಲ್ಕ ಹೆಚ್ಚಳದಿಂದ ಆಗಿರುವ ಏರಿಳಿತಗಳ ಬಗ್ಗೆ ಈಗಾಗಲೇ ನಮ್ಮ ಮಂಡಳದ ವತಿಯಿಂದ ಕೆಲವು ಕಡೆ ಸ್ಟಾಂಪ್‌ ವೆಂಡರ್‌ ಗಳಿಗೆ ಆನ್‌ ಲೈನ್‌ ಮೂಲಕ ಅರಿವು ಮೂಡಿಸಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸುವ ಆಲೋಚನೆ ಇದೆ

ಕನ್ನಡಪ್ರಭ ವಾರ್ತೆ ಮೈಸೂರು

ಸಹಕಾರಿ ಕ್ಷೇತ್ರವು ಈಗಲೂ ಪ್ರಬಲರ ಕೈಯಲ್ಲೇ ಇದೆ. ಹಿಂದುಳಿದವರು, ಸಣ್ಣ ಸಣ್ಣ ಜಾತಿಗಳಿಗೆ ಹೆಚ್ಚು ಪ್ರಾತಿನಿಧ್ಯ ದೊರಕಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಪತ್ತಿನ ಸಂಘಗಳ ಮಹಾಮಂಡಳದ ಅಧ್ಯಕ್ಷ ವಿ. ರಾಜು ತಿಳಿಸಿದರು.

ನಗರದ ಇಂಜಿನಿಯರುಗಳ ಸಂಸ್ಥೆಯ ಸಭಾಂಗಣದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಧರ್ಮ ಪರಿಪಾಲನಾ ಸಂಘವು ಭಾನುವಾರ ಆಯೋಜಿಸಿದ್ದ ಈಡಿಗ ಸಮಾಜದ 26 ಒಳಪಂಗಡಗಳ ಸಹಕಾರ ಸಂಘಗಳ ಪ್ರಮುಖರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಪ್ರಯತ್ನಪಟ್ಟರೆ ಅಧಿಕಾರವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

ಮುದ್ರಾಂಕ ಶುಲ್ಕವನ್ನು ಹೆಚ್ಚಳ ಮಾಡಿರುವುದರ ಆಧಾರದಲ್ಲಿ ಸ್ಟಾಂಪ್‌ ವೆಂಡರ್‌ ಗಳಿಗೆ ಕಮಿಷನ್‌ ಮೊತ್ತವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಬೇಕು. ಶುಲ್ಕ ಹೆಚ್ಚಳದಿಂದ ಆಗಿರುವ ಏರಿಳಿತಗಳ ಬಗ್ಗೆ ಈಗಾಗಲೇ ನಮ್ಮ ಮಂಡಳದ ವತಿಯಿಂದ ಕೆಲವು ಕಡೆ ಸ್ಟಾಂಪ್‌ ವೆಂಡರ್‌ ಗಳಿಗೆ ಆನ್‌ ಲೈನ್‌ ಮೂಲಕ ಅರಿವು ಮೂಡಿಸಲಾಗಿದೆ. ಮುಂದೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸುವ ಆಲೋಚನೆ ಇದೆ ಎಂದರು.

ಸಹಕಾರರತ್ನ ಪ್ರಶಸ್ತಿ ಪ್ರದಾನ

ಇದೇ ವೇಳೆ ಭಾರತ್‌ಕೋ ಆಪರೇಟಿವ್‌ ಬ್ಯಾಂಕ್‌, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರ ಸಂಘ, ಸುಧಾ ಕೋ ಆಪರೇಟಿವ್‌ ಬ್ಯಾಂಕ್‌ ಹಾಗೂ ಉದ್ಯಮಿಗಳಾದ ಎನ್‌.ವಿ. ಕುಮಾರ್‌, ಅಶೋಕ್‌ ಪೂಜಾರ್‌ ಅವರಿಗೆ ಜೆ.ಪಿ. ನಾರಾಯಣಸ್ವಾಮಿ ಸಹಕಾರ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾರಾಯಣ ಗುರುಗಳ ಭಾವಚಿತ್ರಕ್ಕೆ ಕುಳಾಯಿ ಫೌಂಡೇಶನ್‌ ಅಧ್ಯಕ್ಷೆ ಪ್ರತಿಭಾ ಕುಳಾಯಿ ಪುಷ್ಪಾರ್ಚನೆ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಸಂಘದ ರಾಜ್ಯಾಧ್ಯಕ್ಷ ಸೈದಪ್ಪ ಕೆ. ಗುತ್ತೇದಾರ್‌, ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತರಾಜ್ ಆರ್ಯ, ಉಪಾಧ್ಯಕ್ಷ ಇ. ಮಂಜುನಾಥ್‌, ನವೀನ್‌ಚಂದ್ರ ಪೂಜಾರಿ, ರಂಗಕರ್ಮಿ ರಾಜಶೇಖರ ಕದಂಬ, ಉದ್ಯಮಿಗಳಾದ ವಸಂತಕುಮಾರ್‌, ಶ್ರೀಕಾಂತ್‌ವಿರಾಜ್‌ ಮೊದಲಾದದವರು ಇದ್ದರು.

ನಮ್ಮ ಸಮಾಜದವರು ಧ್ವನಿ ಎತ್ತುವುದನ್ನು ರೂಢಿಸಿಕೊಳ್ಳಬೇಕು. ನಮ್ಮ ಒಳಪಂಗಡಗಳ ಆಗು ಹೋಗುಗಳಿಗೆ ಹೆಗಲು ಕೊಡುವಂತಹ ಕೆಲಸ ಮಾಡಬೇಕು. ಆಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ.

- ಪ್ರತಿಭಾ ಕುಳಾಯಿ, ಅಧ್ಯಕ್ಷೆ, ಕುಳಾಯಿ ಫೌಂಡೇಶನ್‌

Share this article