ಚಾರ್ಲಿ 777 ಚಲನಚಿತ್ರದ ಶ್ವಾನ ಉತ್ಸವದ ಕೇಂದ್ರ ಬಿಂದು ।
‘ಚಾರ್ಲಿ 777’ ಎರಡನೇ ಬಾರಿ ಕಾಫಿನಾಡು ಚಿಕ್ಕಮಗಳೂರಿನ ಜನ ಮನ ಗೆದ್ದಿದ್ದು, ಶ್ವಾನ ಪ್ರಿಯರಿಗೆ ಮಂಗಳವಾರ ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಶ್ವಾನ ಉತ್ಸವ ಮೆಚ್ಚಿಗೆ ಪಾತ್ರವಾಯಿತು.
ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಪಶು ವೈದ್ಯಕೀಯ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಚೈತ್ರೋತ್ಸವದಲ್ಲಿ ಮಂಗಳವಾರ ಶ್ವಾನ ಉತ್ಸವದಲ್ಲಿ ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ 26 ವಿವಿಧ ತಳಿಯ ಬರೋಬ್ಬರಿ 126 ಶ್ವಾನಗಳ ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದವು.ಇದರೊಂದಿಗೆ ಪೊಲೀಸ್ , ಅರಣ್ಯ ಇಲಾಖೆ ಹಾಗೂ ಚಾರ್ಲಿ 777 ಚಲನಚಿತ್ರದಲ್ಲಿ ಭಾವನಾತ್ಮಕ ಪಾತ್ರ ನಿರ್ವಹಿಸಿ ಇಡೀ ನಾಡಿನ ಮೆಚ್ಚಿಗೆ ಪಾತ್ರವಾಗ ಶ್ವಾನ ಉತ್ಸವದ ಕೇಂದ್ರ ಬಿಂದುವಾಗಿತ್ತು.
ಮೂಕ ಪ್ರಾಣಿಗಳ ಬಗ್ಗೆ ಅನುಕಂಪ ಮೂಡಿಸುವುದು ಹಾಗೂ ಹೆಣ್ಣು ನಾಯಿಗಳನ್ನು ಬೀದಿಗೆ ಬಿಡುವವರಿಗೆ ತಿಳಿ ಹೇಳುವ ಉದ್ದೇಶದಿಂದ ಈ ಉತ್ಸವ ಆಯೋಜಿಸಲಾಗಿದೆ. ಜತೆಗೆ, ಸಾಕು ನಾಯಿಗಳನ್ನು ಮನೆಯಲ್ಲಿ ಚೆನ್ನಾಗಿ ಆರೈಕೆ ಮಾಡಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದು ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಮೋಹನ್ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.ಉತ್ಸವದಲ್ಲಿ ಭಾಗವಹಿಸಿದ 26 ತಳಿಯ ಶ್ವಾನಗಳಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ವಿಭಾಗದ ಬಹುಮಾನ ನೀಡ ಲಾಯಿತು. ಉಳಿದಂತೆ ಎಲ್ಲ ತಳಿಯಲ್ಲಿ ಪ್ರಥಮ ಬಹುಮಾನ ಪಡೆದ ಶ್ವಾನಗಳಿಗೆ ಅಂತಿಮ ಸ್ಪರ್ಧೆ ಸಹ ನಡೆಸಲಾಯಿತು. ಶ್ವಾನ ಉತ್ಸವದೊಂದಿಗೆ ವಿವಿಧ ತಳಿಯ ಜಾನುವಾರು, ಕುರಿ, ಕೋಳಿ, ಹಂದಿ ಪ್ರದರ್ಶನ ಚೈತ್ರೋತ್ಸವಕ್ಕೆ ಮರಗು ತಂದಿತ್ತು.
ಶ್ವಾನ ಉತ್ಸವಕ್ಕೆ ಚಾಲನೆ ನೀಡಿದ ಮಾತನಾಡಿದ ಜಿಲ್ಲಾಧಿಕಾರಿ ಎಂ.ಎನ್. ನಾಗರಾಜ್, ಗಣರಾಜ್ಯೋತ್ಸವ ಅಂಗವಾಗಿ 3 ದಿನಗಳ ಕಾಲ ಚೈತ್ರೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಜನರಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಬೆಳೆಗಾರರು ಫಲಪುಷ್ಪ ಪ್ರದರ್ಶನ ಹಾಗೂ ಚೈತ್ರೋತ್ಸವದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಜಿಲ್ಲೆಯಲ್ಲಿ ಅತೀ ಹೆಚ್ಚು ಕೃಷಿಕರು, ರೈತರು, ಬೆಳೆಗಾರರು, ರೈತಕಾರ್ಮಿಕರಿದ್ದು, ಅವರಿಗೆ ಈ ಚೈತ್ರೋತ್ಸವದ ಮೂಲಕ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತಿದೆ. ಈ ವರೆಗೆ 2 ಲಕ್ಷ ಜನ ಪ್ರದರ್ಶನ ವೀಕ್ಷಣೆ ಮಾಡಿದ್ದಾರೆ. ಕನಿಷ್ಠ 3.50 ಲಕ್ಷ ಜನರು ವೀಕ್ಷಣೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಅಭಿಪ್ರಾಯ ಪಟ್ಟರು.ಜಿಲ್ಲೆಯ ಜನರಿಗೆ ಪ್ರವಾಸೋದ್ಯಮ ಚಟುವಟಿಕೆಗಳ ಬಗ್ಗೆ ಅತಿ ಹೆಚ್ಚಿನ ಮಾಹಿತಿ ನೀಡಲಾಗುವುದು. ಇದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದು ಹೇಳಿದರು.ಜಿ.ಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಮಾತನಾಡಿ, ಡಾಗ್ ಶೋ ಮತ್ತು ಪಶುಗಳ ಪ್ರದರ್ಶನದಲ್ಲಿ ಹೊರರಾಜ್ಯಗಳ ಪ್ರಾಣಿಗಳು ಪ್ರದರ್ಶಿಸಲ್ಪಡುತ್ತಿವೆ. ಆಸ್ಟ್ರೇಲಿಯದ ಶ್ವಾನ ಹಾಗೂ ಹಳ್ಳಿಕಾರ್, ಅಮೃತ್ ಮಹಲ್‌ಕಾವಲ್ ತಳಿಗಳು ನೋಡುಗರ ನಿಬ್ಬೆರಗಾಗಿಸುತ್ತಿವೆ ಎಂದು ಹೇಳಿದರು.ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ.ಮೋಹನ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ತಿರುಮಲೇಶ್, ಡಾ. ಲೋಕೇಶ್, ಡಾ.ನಾಗರಾಜ್, ಮಾದವರಾವ್, ಪ್ರಮೋದ್ ಮೊದಲಾದವರಿದ್ದರು.
----ಬಾಕ್ಸ್---ಮುಗಿಬಿದ್ದ ಜನಸಾಗರ
ಚೈತ್ರೋತ್ಸವದಲ್ಲಿ ಹೂವಿನಿಂದ ನಿರ್ಮಾಣಗೊಂಡಿರುವ ಕಲಾಕೃತಿಗಳನ್ನು ವೀಕ್ಷಿಸಲು ಪುಷ್ಪಪ್ರಿಯರು ಮುಗಿಬಿದ್ದರು. ಸುಂದರವಾಗಿ ಮೂಡಿಬಂದಿರುವ ತೆಂಗಿನ ಗರಿಗಳ ಆರ್ಚ್ ಇದನ್ನು ದಾಟಿ ಮುಂದೆ ಸಾಗಿದರೆ ಲವ್ ಸಂಕೇತದ ಕೆಳಗೆ ನಮ್ಮ ಚಿಕ್ಕಮಗಳೂರು ಹೆಸರು ಹೂವಿನಿಂದ ಕೂಡಿದ್ದು, ಇದು ಸೆಲ್ಫಿಪಾಯಿಂಟ್ ಆಗಿದೆ. ಪುಷ್ಪಪ್ರಿಯರು ಇದರ ಬಳಿ ನಿಂತುಕೊಂಡು ಪೊಟೋ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿದೆ.ಇದರಿಂದ ಎಡಕ್ಕೆಹೊರಳಿದರೆ ಸಂವಿಧಾನ ಪೀಠಿಕೆ ಇದೆ ಇದರ ಪಕ್ಕದಲ್ಲಿ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್, ಸಾಲುಮರದ ತಿಮ್ಮಕ್ಕ, ಸರಸ್ವತಿ ಸಿರಿಧಾನ್ಯಗಳಿಂದ ಮೂಡಿಬಂದಿದ್ದಾರೆ.
ಕಾಫಿ ಎಲೆ, ಕಾಫಿ ಹೂವು ಅರಳಿರುವ, ಕಾಫಿ ಹ ಣ್ಣುಗಳು ಸ್ವಾಗತ ಕೋರುತ್ತವೆ. ಮುಂದೆ ಸಾಗಿದರೆ ಪುಷ್ಪಲೋಕವೇ ತೆರದು ಕೊಳ್ಳುತ್ತಿದೆ. ಬಣ್ಣಬಣ್ಣದ ಸೇವಂತಿಗೆ, ಗುಲಾಬಿ ಹೂವುಗಳಿಂದ ಪಿಯಾನೋ, ವೀಣೆ, ಗಿಟಾರ್, ತಬಲ, ಡಾಲ್ಫಿನ್‌ಗಳ ಕಲಾಕೃತಿಗಳು ಮೂಡಿಬಂದಿವೆ. ಗಂಡಗಟ್ಟ ಸರ್ಕಾರಿ ಶಾಲೆ ಹೂವಿನಿಂದ ನಿರ್ಮಾಣಗೊಂಡಿದೆ. ಭದ್ರಬಾಲ್ಯದಿಂದ ಸಾಧನೆ ಶಿಖರಕ್ಕೆ ಶೀರ್ಷಿಕೆಯಡಿ ಭದ್ರಬಾಲ್ಯ ಯೋಜನೆ ಅನಾವರಣಗೊಂಡಿದೆ.ದೇವೀರಮ್ಮಹೂವಿನ ದೇಗುಲ, ಇತ್ತೀಚೆಗೆ ಮಹಿಳಾ ವಿಶ್ವಕಪ್ ವಿಜೇತರ ಭಾವಚಿತ್ರವಿದೆ. ಹೂವಿನಿಂದ ಟ್ರೋಫಿಯನ್ನು ನಿರ್ಮಿಸಲಾಗಿದೆ. ಹೂವಿನಿಂದ ಮಾಡಿರುವ ಕಲಾಕೃತಿಗಳನ್ನು ವೀಕ್ಷಿಸಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಜತೆಗೆ ಚಲನ ಚಿತ್ರನಟರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಸುಂದರವಾಗಿ ಮೂಡಿಬಂದಿದ್ದಾರೆ. ಕಲ್ಲಂಗಡಿಯಲ್ಲಿ ರಾಷ್ಟ್ರ ಕವಿಕುವೆಂಪು, ದ.ರಾ.ಬೇಂದ್ರೆ, ಶಿವರಾಮಕಾರಂತರು, ಗಿರೀಶ್‌ಕಾರ್ನಾರ್ಡ್, ಕಂಬಾರ, ಮಾಸ್ತಿವೆಂಕಟೇಶ್ ಅಯ್ಯಂಗಾರ್, ಚಲನಚಿತ್ರ ನಟರಾದ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್‌ನಾಗ್, ಪುನೀತ್‌ರಾಜ್‌ಕುಮಾರ್, ಸಂಚಾರಿ ವಿಜಯ್ ಅವರನ್ನು ಬಿಡಿಸಲಾಗಿದೆ.