ಶೇಷಮೂರ್ತಿ ಅವಧಾನಿ
ಯುವ ಬ್ರಿಗೇಡ್ ಸಂಸ್ಥಾಪಕ, ವಾಗ್ಮೀ ಚಕ್ರವರ್ತಿ ಸೂಲಿಬೆಲಿ ಚಿತ್ತಾಪುರ ಸೇರಿದಂತೆ ಕಲಬುರಗಿಯ ಯಾವ ತಾಲೂಕುಗಳಲ್ಲಿಯೂ ಸುಳಿಯದಂತೆ ಜಿಲ್ಲಾಡಳಿತ ಫೆ.28ರ ರಾತ್ರಿ ತರಾತುರಿಯಲ್ಲಿ ಹೊರಡಿಸಿದ್ದ ಆದೇಶವನ್ನು ಇಲ್ಲಿನ ಹೈಕೋರ್ಟ್ ಹೊಡೆದು ಹಾಕಿದ್ದಲ್ಲದೆ, ಸೂಲಿಬೇಲಿ ಇವರ ಚಿತ್ತಾಪುರ ಸಮಾರಂಭಕ್ಕೆ ಸೂಕ್ತ ಬಂದೋಬಸ್ತ್ ಒದಗಿಸುವಂತೆ ನೀಡಿದ ತೀರ್ಪು ಜಿಲ್ಲಾಡಳಿತದ ನಡೆಯನ್ನೇ ಸಾರ್ವಜನಿಕರು ಶಂಕೆಯಿಂದ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಪರಾಮರ್ಶೆ ಮಾಡುವಂತೆ ಮಾಡಿದೆ.
ಆತುರದಲ್ಲಿ ಹೊರಡಿಸಿದ ಆದೇಶದಲ್ಲಿ ಜಿಲ್ಲಾಡಳಿತ ತಾನೇ ಸಿಲುಕಿ ಫಜೀತಿ ಪಟ್ಟಿದ್ದಲ್ಲದೆ, ಯಾರನ್ನು ನಿರ್ಬಂಧಿಸಲು ಜಿಲ್ಲಾಡಳಿತ ಹೊರಟಿತ್ತೋ ಅದಂತೂ ಕೈಗೂಡದೆ, ಅವರ ಉಪನ್ಯಾಸ ಸಮಾರಂಭಕ್ಕೇ ಬಿಗಿ ಬಂದೋಬಸ್ತ್ ನೀಡುವಂತಾಯ್ತು, ರಾಜಕೀಯವಾಗಿ ಕಾಣದ ಕೈಗಳಲ್ಲಿ ಬೊಂಬೆ ನಾವೆಂದು ಜಿಲ್ಲಾಡಳಿತವೇ ಸಾರಿ ಸುದ್ದಿಗೆ ಗ್ರಾಸವಾಯ್ತೆಂದು ಜನರೇ ಆಡಿಕೊಳ್ಳುತ್ತಿದ್ದಾರೆ.ನಮೋ ಬ್ರಿಗೇಡ್ ಸಮಾರಂಭದಲ್ಲಿ ಚಿಕ್ಕಮಗಳೂರು, ರಾಯಚೂರಲ್ಲಿ ಚಕ್ರವರ್ತಿ ಸೂಲಿಬೇಲಿಯವರು ಖರ್ಗೆ ಕುರಿತಂತೆ ಆಡಿದ ಮಾತುಗಳು ಸುದ್ದಿಯಾಗಿದ್ದಲ್ಲದೆ ವಿವಾದಕ್ಕೂ ಕಾರಣವಾಗಿದ್ದು ಗುಟ್ಟೇನಲ್ಲ. ಅವರ ಮೇಲೆ ಪ್ರಕರಣ ಕೂಡ ದಾಖಲಿಸು ವ ಪ್ರಯತ್ನಗಳಾದವು. ಇವೆಲ್ಲದರ ನಡುವೆಯೇ ಚಿತ್ತಾಪುರಕ್ಕೆ ಬನ್ನಿರೆಂದು ನಮೋ ಬ್ರಿಗೇಡ್ ಬುಲಾವ್ ನೀಡಿದ್ದರಿಂದ ಅಲ್ಲಿಗೆ ಹೊರಟುನಿಂತ ಸೂಲಿಬೆಲೆಯವರ ಈ ಭೇಟಿ ತಪ್ಪಿಸಲೇಬೇಕು ಎಂಬ ಸಂಕಲ್ಪ ತೊಟ್ಟಂತಿದ್ದ ಪೊಲೀಸ್, ಜಿಲ್ಲಾಡಳಿತ ಆತುರಾತುರವಾಗಿ ಫೆ. 28 ರಂದು ಆದೇಶ ಹೊರಡಿಸಿತ್ತು.
ತನ್ನ ಆದೇಶ ಜಾರಿಗೆ ತರಲು ಫೆ.28ರ ಮಧ್ಯರಾತ್ರಿ ಬೀದರ್, ಕಲಬುರಗಿ ಗಡಿಯಲ್ಲಿ ಭಾರಿ ಪೊಲೀಸ್ ಬಲ ನಿಯೋಜಿಸಿ ಚಕ್ರವರ್ತಿ ಕಲಬುರಗಿ ಪ್ರವೇಶ ತಡೆಯಲಾಯ್ತಲ್ಲದೆ ಅವರನ್ನು ವಶಕ್ಕೂ ಪಡೆಯಲಾಗಿತ್ತು. ತಮ್ಮ ವಿರುದ್ಧದ ಜಿಲ್ಲಾಡಳಿತದ ಈ ಕ್ರಮಕ್ಕೆ ಸಿಡಿದೆದ್ದ ಚಕ್ರವರ್ತಿ ಇದನ್ನು ಹೈಕೋರ್ಟ್ ಕಲಬುರಗಿಯಲ್ಲಿ ದಾವೆ ಹೂಡಿ ಪ್ರಶ್ನಿಸಿದ್ದಲ್ಲದೆ ನಿರ್ಬಂಧ ತೆರವಿಗೂ ಕೋರಿದ್ದರು.
ಜಿಲ್ಲಾಡಳಿತದ ಈ ನಡೆಯನ್ನು ಜನತೆ ರಾಜಕೀಯ ಪ್ರೇರಿತ ನಡೆ ಎಂದೂ, ಕಾಣದ ಕೈಗಳ ಕೈಗೊಂಬೆ ರೀತಿಯಲ್ಲಿ ಪೊಲೀಸರು, ಜಿಲ್ಲಾಡಳಿತ ನಡೆದುಕೊಳ್ಳುತ್ತಿದೆ ಎಂಬುದಾಗಿಯೂ ತೀವ್ರ ಟೀಕೆಗೆ ಗುರಿಯಾಗಿದೆ.
ಜಿಲ್ಲಾದ್ಯಂತ ಕಾನೂನು ಸುವ್ಯವಸ್ಥೆ ಕಾಪಾಡಬೇಕದ್ದು ಜಿಲ್ಲಾಡಳಿತ ಮೊದಲ ಕರ್ತವ್ಯವಾದರೂ ಇಂಚಹ ಸೂಕ್ಷ್ಮ ಸಂದರ್ಭಳಲ್ಲಿ ಆಡಳಿತ ಯಾರ ಮಾತನ್ನೂ ಆಲಿಸದೆ ತಾನೆ ಸಮಯ- ಸಂದರ್ಭಗಳ ಅವಲೋಕನ ಮಾಡಿಕೊಂಡು ಜನರ ಹಿತಾಸಕ್ತಿ ಕಾಪಡುವಂತಹ ನಡೆಗಳೊಂದಿಗೆ ಮುಂದಡಿ ಇಟ್ಟಿದ್ದರೆ ಚೆಂದಾಗಿರುತ್ತಿತ್ತು. ಅದೆಲ್ಲ ಬಿಟ್ಟು ಆತುರದಲ್ಲಿ ಏನೋ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದು ಸಾರ್ವಜನಿಕವಾಗಿ ಎಲ್ಲರ ಗಮನಕ್ಕೂ ಬರುವಂತಾಯ್ತು ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಪ್ರಿಯಾಂಕ್ ಖರ್ಗೆ ಒಬ್ಬ ಫೈಟರ್, ಆದರೆ ಆದರೆ ಅವರು ನಿಜವಾದ ಹಿಟ್ ಆ್ಯಂಡ್ ರನ್ ಮಾಸ್ಟರ್ ಅಂತ ನಾನು ಭಾವಿಸಿದ್ದೇನೆ, ಕೂಟದ ಮುಂದೆ ಮತನಾಡುವುದು ಸುಲಭ, ,ಮೂಹವನ್ನು ಎದುರಿಸುವುದು ಕಷ್ಟ ಎಂದು ಸೂಲಿಬೆಲೆ ಎಕ್ಸ್ ಖಾತೆಯಲ್ಲಿ ಸಂದೇಶ ಹಾಕಿ ತಿವಿದಿದ್ದಾರೆ.
ಉಪ ವಿಭಾಧಿಕಾರಿ ಕೌರ್ ಆದೇಶದಲ್ಲಿ ಏನಿತ್ತು?: ಸೂಲಿಬೇಲಿಯವರು ಫೆ.29ರಂದು ಚಿತ್ತಾಪುರ ನಗರದ ಬಾಪುರಾವ್ ಪಾಟೀಲ್ ಕಲ್ಯಾಣ್ ಮಂಟಪದಲ್ಲಿ ಅಯೋಜಿಸಿರುವ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಲು ಕಲ್ಬುರ್ಗಿಗೆ ಬರುತ್ತಿದ್ದಾರೆ, ಇವರ ಮಾತುಗಳಿಂದ ಶಾಂತಿಗೆ ಭಂಗ ಬರಬಹುದು, ಇವರ ಕಲಬುರಗಿ ಪ್ರವೇಶ ನಿಷೇಧಿಸಿರಿ ಎಂದು ಜಿಲ್ಲಾ ಎಸ್ಪಿಯವರು ನೀಡಿದ ಪತ್ರದ ಹಿನ್ನೆಲೆಯಲ್ಲಿ ಮಾ.4ರ ವರೆಗೂ ಸೂಲಿಬೇಲಿಯವರ ಕಲಬುರಗಿ ಜಿಲ್ಲೆ ಪ್ರವೇಶದ ಮೇಲೆ ನಿರ್ಬಂಧ ಹೇರಿ ಕಲಬುರಗಿ ಉಪ ವಿಭಾಗಾಧಿಕಾರಿ ರೂಪೇಂದ್ರ ಕೌರ್ ಫೆ.28ಕ್ಕೆ ಆದೇಶ ಹೊರಡಿಸಿದ್ದರು. ಹಿಂದೆಲ್ಲಾ ನಮೋ ಬ್ರಿಗೇಡ್ ಸಮಾರಂಭಗಳಲ್ಲಿ ಆಕ್ಷೇಪಾರ್ಹ, ಅಸಂಸದೀಯ ಪದಗಳನ್ನೆಲ್ಲ ಬಳಸಿ ಸೂಲಿಬೆಲೆ ಮಾತನಾಡಿದ್ದಿದೆ, ಅನೇಕ ಕಡೆ ಪ್ರಕರಣ ದಾಖಲಾಗಿರೋದು ಇದೆ. ಸುಳ್ಳು ಹೇಳಿ ಜನರ ದಾರಿ ತಪ್ಪಿಸೋದು, ಸಾಮಾಜಿಕ ಜಾಲ ತಾಣಗಳಲ್ಲಿ ಅಸಂಸದೀಯ ಪದಗಳನ್ನು ಬಳಸಿರೋದು ಕೂಡಾ ಇದೆ.