ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿ: ಛಲವಾದಿ ಮಹಾಸಭಾ ಒತ್ತಾಯ

KannadaprabhaNewsNetwork |  
Published : Sep 04, 2025, 01:01 AM IST
2ಎಚ್‌ಪಿಟಿ1- ಹೊಸಪೇಟೆಯಲ್ಲಿ ದಲಿತ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಕೆ ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತರ ಋಣ ತೀರಿಸಬೇಕು.

ಕನ್ನಡಪ್ರಭ ವಾರ್ತೆ ಹೊಸಪೇಟೆ

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾವಣೆ ಸಂದರ್ಭ ಒದಗಿ ಬಂದರೆ, ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ದಲಿತರ ಋಣ ತೀರಿಸಬೇಕು. ಇಲ್ಲವಾದಲ್ಲಿ ಮುಂದಿನ ಚುನಾವಣೆಯಲ್ಲಿ ದಲಿತರು ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ದಲಿತ ಛಲವಾದಿ ಮಹಾಸಭಾದ ರಾಜ್ಯಾಧ್ಯಕ್ಷ ಎಚ್.ಕೆ. ಬಸವರಾಜ್ ಎಚ್ಚರಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ದಲಿತರು, ವಿಶೇಷವಾಗಿ ಬಲಗೈ ಸಂಬಂಧಿತ ಛಲವಾದಿ ಸಮುದಾಯಗಳು ಸಾಂಪ್ರದಾಯಿಕ ಮತಗಳಾಗಿವೆ. ಆರಂಭದಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಆಸ್ತಿಯಾಗಿ, ಪಕ್ಷದ ಬೆನ್ನೆಲುಬಾಗಿ ನಿಂತಿವೆ. ಅದರಲ್ಲಿಯೂ ಬಲಗೈ ಸಂಬಂಧಿತ ಛಲವಾದಿ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಕೊಡುಗೆಯಾಗಿ ನೀಡಿದೆ.

ಕಳೆದ 50 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಹಗಲಿರುಳು ದುಡಿಯುತ್ತಿರುವ ರಾಜಕೀಯ ಭೀಷ್ಮ ಮಲ್ಲಿಕಾರ್ಜುನ ಖರ್ಗೆ, ಗೃಹಮಂತ್ರಿ ಡಾ. ಜಿ ಪರಮೇಶ್ವರ, ಡಾ. ಎಚ್. ಸಿ ಮಹದೇವಪ್ಪ, ಕೆ. ಎಚ್. ಮುನಿಯಪ್ಪ ಹಾಗೂ ವಾಲ್ಮೀಕಿ ಸಮುದಾಯದ ಪ್ರಭಾವಿ ನಾಯಕ ಸತೀಶ್ ಜಾರಕಿಹೊಳಿ ಸೇರಿದಂತೆ ಇವರೆಲ್ಲರೂ ಮುಖ್ಯಮಂತ್ರಿ ಸ್ಥಾನವನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಇವರಲ್ಲಿ ಒಬ್ಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿ ದಲಿತರ ಋಣ ತೀರಿಸಬೇಕು ಎಂದರು.

ಈ ಹಿನ್ನೆಲೆ ದಲಿತ ಛಲವಾದಿ ಮಹಾಸಭಾ, ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ದಲಿತ ಸಮುದಾಯಗಳನ್ನು ಜಾಗೃತಿಗೊಳಿಸಲಾಗುವುದು.

ಈ ಮೂಲಕ ದಾವಣಗೆರೆ ಅಥವಾ ಚಿತ್ರದುರ್ಗದಲ್ಲಿ ಪ್ರಮುಖ ದಲಿತ ಸಮುದಾಯದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಒಳಗೊಂಡಂತೆ ಬೃಹತ್ ಸಮಾವೇಶ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ. ಐದು ಲಕ್ಷಕ್ಕಿಂತ ಹೆಚ್ಚು ದಲಿತ ಸಮಾಜದ ಬಾಂಧವರನ್ನು ಸೇರುವ ನಿರೀಕ್ಷೆ ಇದೆ. ಸಮಾವೇಶದ ಮೂಲಕ ದಲಿತರಿಗೆ ಮುಖ್ಯಮಂತ್ರಿ ಸ್ಥಾನವನ್ನು ನೀಡಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಮೀನಮೇಷ ಎಣಿಸಿದರೆ, ಮುಂದಿನ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದರು.

ಈ ವೇಳೆ ಅಲೆಮಾರಿ ಸಮುದಾಯಕ್ಕೆ ನಿಗದಿಗೊಳಿಸಿರುವ ಶೇ.1ರಷ್ಟನ್ನು ಸಿ ವರ್ಗಕ್ಕೆ ಸೇರಿಸಿರುವ ಕ್ರಮದಿಂದ ಅಲೆಮಾರಿ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯವಾಗುತ್ತದೆ. ಆದ್ದರಿಂದ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ.1 ರಷ್ಟನ್ನು ಮೀಸಲಾತಿಯನ್ನು ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಡಾ. ಈರಮ್ಮ, ಎಂ.ಸಿ. ಓಂಕಾರಪ್ಪ, ಸಿ.ನಾರಾಯಣ ಸ್ವಾಮಿ, ನಿರಂಜನ ಮೂರ್ತಿ, ವೀರಭದ್ರಪ್ಪ, ರಮೇಶ, ಸಿ.ಡಿ. ವೀರಣ್ಣ, ಜೆ.ಸಿ. ವೀರಣ್ಣ, ರವಿ, ವೆಂಕಟೇಶ, ಸಿ.ಕೆ. ಹನುಮಂತಪ್ಪ ಮತ್ತಿತರರಿದ್ದರು.

PREV

Recommended Stories

.ಜಮಖಂಡಿಯಲ್ಲಿ ವಿನಾಕನಿಗೆ ಅದ್ಧೂರಿ ವಿದಾಯ
ರೈತರ ಹಿತ ಕಾಪಾಡುವುದು ಮುಖ್ಯ: ಹನಮಂತ ನಿರಾಣಿ