ಕನ್ನಡಪ್ರಭವಾರ್ತೆ ಚಳ್ಳಕೆರೆ
ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸಹಯೋಗದಲ್ಲಿ ಪ್ರತಿಷ್ಠಾಪಿಸಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಶೋಭಾಯಾತ್ರೆಯು ಸೋಮವಾರ ಸೆ.23ರಂದು ಅದ್ಧೂರಿಯಾಗಿ ನೆರೆವೇರಲಿದೆ. ಈ ಮೆರವಣಿಗೆಯಲ್ಲಿ 10 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಳ್ಳುವರು ಎಂದು ಶೋಭಾಯಾತ್ರೆ ಸಮಿತಿ ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ತಿಳಿಸಿದರು.ಅವರು, ಶನಿವಾರ ಗಣಪತಿ ಮಂಟಪದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಮಹಾಗಣಪತಿ ಮಹೋತ್ಸವ ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚು ವಿಭಿನ್ನವಾಗಿ ನಡೆಯಲಿದೆ. ಈಗಾಗಲೇ ಶೋಭಾಯಾತ್ರೆಗೆ ಹೆಚ್ಚಿನ ಭಕ್ತರು ಆಗಮಿಸುವಂತೆ ಭಜರಂಗದಳ, ವಿಶ್ವ ಹಿಂದೂ ಪರಿಷತ್, ಇತರೆ ಹಿಂದೂಪರ ಸಂಘಟನೆಗಳು ಸಾರ್ವಜನಿಕರಲ್ಲಿ ಮನವಿ ಮಾಡಿವೆ. ಮೆರವಣಿಗೆ ಹಿನ್ನೆಲೆಯಲ್ಲಿ ಈಗಾಗಲೇ ಕೈಗೊಳ್ಳಬೇಕಾದ ಪೂರ್ವಸಿದ್ದತೆಗಳು ಪೂರ್ಣಗೊಂಡಿವೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ. ಡಿ.ಎನ್. ಮಂಜುನಾಥ ಮಾತನಾಡಿ, ಶೋಭಾಯಾತ್ರೆ ಸೋಮವಾರ ಬೆಳಗ್ಗೆ 12 ಗಂಟೆಗೆ ವಾಲ್ಮೀಕಿ ವೃತ್ತದಿಂದ ಆರಂಭವಾಗಲಿದೆ. ಶೋಭಾಯಾತ್ರೆಯಲ್ಲಿ ಪಕ್ಷ ಬೇಧ ಮರೆತು ಎಲ್ಲಾ ಚುನಾಯಿತ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್, ಶಾಸಕರಾದ ಟಿ. ರಘುಮೂರ್ತಿ, ಕೆ.ಸಿ.ವೀರೇಂದ್ರ(ಪಪ್ಪಿ), ಎಂ.ಚಂದ್ರಪ್ಪ, ಸಂಸದ ಗೋವಿಂದ ಕಾರಜೋಳ ಮುಂತಾದ ಗಣ್ಯರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.ವಿವಿಧ ಸಂಘಟನೆಗಳ ಮುಖಂಡರು, ಮಹಿಳಾ ಸಂಘಗಳು, ಯುವ ಸಂಘಟನೆಗಳು ಪಾಲ್ಗೊಳ್ಳುವಂತೆ ಮನವಿ ಮಾಡಲಾಗಿದೆ. ಶೋಭಾಯಾತ್ರೆ ಯಶಸ್ವಿಗೊಳಿಸಲು ಗಣೇಶೋತ್ಸವ ಸಮಿತಿಯೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಮನವಿ ಮಾಡಿದರು.
ಪ್ರಧಾನ ಕಾರ್ಯದರ್ಶಿ ಕೆ.ಎಂ. ಯತೀಶ್ ಮಾತನಾಡಿ, ವಾಲ್ಮೀಕಿ ವೃತ್ತ, ಅಂಬೇಡ್ಕರ್ ವೃತ್ತ, ನೆಹರೂ, ಬಸವೇಶ್ವರ ಸರ್ಕಲ್, ಬಳ್ಳಾರಿ ರಸ್ತೆಯ ಮೂಲಕ ಶೋಭಾಯಾತ್ರೆ ತೆರಳಿದೆ. ಶೋಭಾಯಾತ್ರೆಯಲ್ಲಿ ಭಾಗವಹಿಸುವ ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಎಲ್ಲಾ ವ್ಯವಸ್ಥೆಯನ್ನು ಸಂಘ ಸಂಸ್ಥೆಗಳ ನೆರವಿನಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.ವೀರಶೈವ ಕಲ್ಯಾಣ ಮಂಟಪದ ಮುಂಭಾಗದಲ್ಲಿ ವೀರಶೈವ ಸಮಾಜ ಸಂಘ, ಬಸವೇಶ್ವರ ವೃತ್ತದಲ್ಲಿ ಜೈನ್ ಯುವಕ ಸಂಘ, ಬಳ್ಳಾರಿ ರಸ್ತೆಯಲ್ಲಿ ಎಸ್‌ಜೆಎಂ ಶಾಲೆ, ಬಳ್ಳಾರಿ ರಸ್ತೆಯ ಮಸೀದಿ ಮುಂಭಾಗದಲ್ಲಿ ಮುಸ್ಲಿಂ ಸಮಾಜದ ಬಂಧುಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆಯನ್ನು ಮಾಡಲಿದ್ದಾರೆ ಎಂದರು.
ಭಜರಂಗದಳದ ತಾಲೂಕು ಸಂಯೋಜಕ ಎಚ್. ಉಮೇಶ್ ಮಾಹಿತಿ ನೀಡಿ, ಶೋಭಾಯಾತ್ರೆ ಸಂಚರಿಸುವ ಮಾರ್ಗದುದ್ದಕ್ಕೂ ಈಗಾಗಲೇ ಕೇಸರಿ ಧ್ವಜ ಹಾಗೂ ಬಂಟಿಂಗ್ಸ್ ಅಲಂಕಾರ ಮಾಡಲಾಗಿದೆ. ಪ್ರಮುಖ ರಸ್ತೆಗಳಲ್ಲಿ ಕೇಸರಿ ಧ್ವಜ ರಾರಾಜಿಸುತ್ತಿವೆ. ವಿವಿಧ ಕಲಾತಂಡಗಳು ಶೋಭಾಯಾತ್ರೆಯಲ್ಲಿ ಭಾಗವಹಿಸುವವು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಉತ್ಸವ ಸಮಿತಿ ಉಪಾಧ್ಯಕ್ಷ ಪಿ. ರಾಘವೇಂದ್ರರೆಡ್ಡಿ, ಸಂಘಟನಾ ಕಾರ್ಯದರ್ಶಿ ಸಿ. ಶ್ರೀನಿವಾಸ್, ಸಂಯೋಜಕ ಬಾಲಕೃಷ್ಣ, ಶೋಭಾಯಾತ್ರೆ ಗೌರಸಮಿತಿ ಅಧ್ಯಕ್ಷ ಶಿವಪುತ್ರಪ್ಪ, ಉಪಾಧ್ಯಕ್ಷ ಬೇಕರಿ ಮಂಜುನಾಥ, ಎಸ್. ಶ್ರೀಧರಚಾರ್, ಜೆ.ಪಿ. ಜಯಪಾಲಯ್ಯ, ಎಂ. ಮಹಂತೇಶ್, ಜಿ. ಬಾಲಕೃಷ್ಣ, ಮರಿಸ್ವಾಮಿ, ಸಿದ್ದೇಶ್, ಭರತ್, ಪಿ. ಮೋಹನ್, ವಿ. ಮಂಜುನಾಥ, ಶಿವು, ಮಾರುತಿ, ಜ್ಯೋತಿಪ್ರಕಾಶ್, ಪ್ರಸನ್ನ ಆಚಾರ್, ಆಟೋ ಓಬಣ್ಣ ಮುಂತಾದವರು ಉಪಸ್ಥಿತರಿದ್ದರು.