ಜಡೇಕುಂಟೆ ಮಂಜುನಾಥ್
ಚಳ್ಳಕೆರೆ ತಾಲೂಕಿನ ವಿವಿಧ ಕಡೆಗಳಲ್ಲಿ ಇರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಅಡಿಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿರುವ ವಸತಿ ಶಾಲೆಗಳಲ್ಲಿ ಈ ಬಾರಿಯ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿವೆ.
ತಾಲೂಕಿನಲ್ಲಿ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಇಂದಿರಾಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಸೇರಿದಂತೆ ಒಟ್ಟು 6 ವಸತಿ ಶಾಲೆಗಳಿವೆ. ಇದರಲ್ಲಿ 5 ಪರಿಶಿಷ್ಟ ಪಂಗಡ, ಒಂದು ಪರಿಶಿಷ್ಟ ಜಾತಿಗೆ ಸೇರಿವೆ. ಈ 6 ಶಾಲೆಗಳಲ್ಲೂ ಶೇ.100ರಷ್ಟು ಫಲಿತಾಂಶ ಬಂದಿರುವುದು ಸರ್ಕಾರಿ ವಸತಿ ಶಾಲೆಗಳ ಬೋಧನಾ ಗುಣಮಟ್ಟ ಹಾಗೂ ಅಲ್ಲಿನ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹಾಗೂ ಶಿಕ್ಷಕರ ಪರಿಶ್ರಮ ಎಲ್ಲವೂ ಎದ್ದು ಕಾಣಿಸುತ್ತಿವೆ.ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಷ್ತಿಯ 5 ವಸತಿ ಶಾಲೆಗಳಲ್ಲಿ ಪರೀಕ್ಷೆಗೆ ಹಾಜರಾದ 236 ವಿದ್ಯಾರ್ಥಿಗಳಲ್ಲಿ 78 ವಿದ್ಯಾರ್ಥಿಗಳು. ಅತ್ಯುನ್ನತ ಶ್ರೇಣಿ, 124 ವಿದ್ಯಾರ್ಥಿಗಳು ಪ್ರಥಮ ದರ್ಜೆ, 28ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ಸರ್ಕಾರಿ ವಸತಿ ಶಾಲೆಗಳಲ್ಲಿ ವ್ಯವಸ್ಥೆ ಸರಿಯಿರುವುದಿಲ್ಲ. ಮಕ್ಕಳ ಶಿಕ್ಷಣ ಅಷ್ಟಕಷ್ಟೇ ಎಂದೆಲ್ಲಾ ಅನೇಕ ಆರೋಪಗಳನ್ನು ಮಾಡುತ್ತಾ ಮೂದಲಿಸುವವರಿಗೇನೂ ಕಡಿಮೆ ಇಲ್ಲ. ಆದರೆ, ಕ್ರೈಸ್ ಶಾಲೆಗಳಲ್ಲಿ ಅತ್ಯುತ್ತಮ ಬೋಧನಾ ಸಾಮಾಗ್ರಿ, ಬೋಧಕ ಸಿಬ್ಬಂದಿ, ಉಚಿತ ಊಟ ವಸತಿ, ಪಠ್ಯಪುಸ್ತಕ ಲೇಖನ ಸಾಮಾಗ್ರಿ ಸಮವಸ್ತ್ರ, ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್, ಸಂಗೀತ ಶಿಕ್ಷಣ ಮುಂತಾದ ಸೌಲಭ್ಯಗಳಿರುವುದನ್ನು ಕಾಣಬಹುದು.
*ಎಲ್ಲೆಲ್ಲಿ ವಸತಿ ಶಾಲೆ: ಚಳ್ಳಕೆರೆ ತಾಲೂಕಿನ ಬಾಲೇನಹಳ್ಳಿಯ ಗುಡ್ಡದಲ್ಲಿ, ಚಳ್ಳಕೆರೆ ಪಾವಗಡ ರಸ್ತೆಯಲ್ಲಿ, ಬೊಮ್ಮಸಮುದ್ರ ರಸ್ತೆಯಲ್ಲಿ, ಬೇಡರೆಡ್ಡಿಹಳ್ಳಿಯಲ್ಲಿ, ಎನ್. ಮಹದೇವಪುರ ಈ ಕಡೆಗಳಲ್ಲಿ ಪರಿಶಿಷ್ಟ ಪಂಗಡದ ವಸತಿ ಶಾಲೆಗಳಿವೆ. ತಾಲೂಕಿನ ಪರಶುರಾಂಪುರದಲ್ಲಿ ಮಾತ್ರ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿಗೆ ಸೇರಿದ ವಸತಿ ಶಾಲೆಯಿದೆ. ಬಹುಸಂಖ್ಯಾತ ಸಮುದಾಯಕ್ಕೆ ಒಂದೇ ವಸತಿ ಶಾಲೆ: ಪರಿಶಿಷ್ಟ ಜಾತಿಯ ಜನಸಂಖ್ಯೆ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಇದ್ದರೂ ಒಂದೇ ಒಂದು ವಸತಿ ಶಾಲೆ ಇರುವುದು ಆಶ್ಚರ್ಯ ತರಿಸಿದೆ. ತಾಲೂಕಿನಲ್ಲಿ ಪರಿಶಿಷ್ಟ ಜಾತಿಯ ಮಾದಿಗ, ಹೊಲಯ, ಬೋವಿ, ಲಂಬಾಣಿ, ಸಮುದಾಯಗಳು ಇದ್ದರೂ ಈ ತಾಲೂಕಿನಲ್ಲಿ ಕೇವಲ ಒಂದೇ ಒಂದು ವಸತಿ ಶಾಲೆ ಇರುವುದರ ಕುರಿತು ಅನೇಕರು ಅಸಮಾಧಾನ ವ್ಯಕ್ತ ಪಡಿಸುತ್ತಾರೆ. ಪರಿಶಿಷ್ಟ ಜಾತಿಗೆ ಕನಿಷ್ಟ ಎರಡಾದರೂ ವಸತಿ ಶಾಲೆ ಬೇಕಿತ್ತು. ಶಾಲೆಗೆ ಸೇರಿಸುವ ಸಮಯದಲ್ಲಿ ಸೀಟು ಸಿಗದೇ ಪರದಾಡುವ ಪರಿಸ್ಥಿತಿ ಉಂಟಾಗುತ್ತದೆ. ಪರಿಶಿಷ್ಟ ಜಾತಿಗೆ ಮೀಸಲಿರುವ ಶಾಲೆಯಲ್ಲಿ ಶೇ75ರಷ್ಟು ದಾಖಲಾತಿ ಇರುತ್ತದೆ. ಉಳಿದಂತೆ ಓಬಿಸಿ ಸೇರಿದಂತೆ ಇತರೆ ಸಮುದಾಯಗಳಿಗೆ ಶೇ.25 ಮೀಸಲಿರುತ್ತವೆ.
ಒಟ್ಟಾರೆ, ಚಳ್ಳಕೆರೆ ತಾಲೂಕಿನ ಸರ್ಕಾರಿ ವಸತಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂಬುದಕ್ಕೆ ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶ ಸಾಬೀತು ಪಡಿಸಿದೆ.