ಶಿಗ್ಗಾಂವಿ: ಬಂಕಾಪುರ ಪಟ್ಟಣದಲ್ಲಿ ಹಾಯ್ದು ಹೋಗಿರುವ ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿ ಮದ್ಯದಲ್ಲಿರುವ ದರ್ಗಾ ತೆರವಿಗೆ ಆಗ್ರಹಿಸಿ ಚಲೋ ಬಂಕಾಪುರ ಹೋರಾಟ ನಡೆಸಲಾಗುವುದು ಎಂದು ಶ್ರೀರಾಮಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣ ಸಮಯದಲ್ಲಿ ಅಡ್ಡಲಾಗಿರುವ ದೇವಸ್ಥಾನ, ಮಸೀದಿ, ಚರ್ಚ್, ಅಂಗಡಿಗಳನ್ನು ತೆರವುಗೊಳಿಸದೆ ಹಾಗೆಯೇ ಬಿಟ್ಟಿದೆ. ಇದು ಸುಪ್ರಿಂ ಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆ. ಹೀಗಾಗಿ ಶ್ರೀ ರಾಮಸೇನೆ ಇದರ ವಿರುದ್ಧ ಚಲೋ ಬಂಕಾಪುರ ಎಂಬ ಹೋರಾಟ ಇದೇ ತಿಂಗಳು ಪ್ರಾರಂಭಿಸಲಿದೆ. ಸುಪ್ರಿಂ ಕೋರ್ಟ್ ಆದೇಶ ಪಾಲನೆಯಾಗುವ ವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.ತಮ್ಮ ರಾಜಕೀಯ ಲಾಭಕ್ಕಾಗಿ ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿ ಮದ್ಯದಲ್ಲಿರುವ ದರ್ಗಾವನ್ನು ತಮ್ಮ ಆಡಳಿತಾವಧಿಯಲ್ಲಿ ತೆರವುಗೊಳಿಸಲು ಬೊಮ್ಮಾಯಿ ಮುಂದಾಗಲಿಲ್ಲ ಎಂದು ಆರೋಪಿಸಿದರು.
ನೇಹಾ ಹಿರೇಮಠ ಹಾಗೂ ಇತರ ಹತ್ಯೆ ಪ್ರಕರಣವನ್ನು ಶ್ರೀರಾಮ ಸೇನೆ ಗಂಭೀರವಾಗಿ ತೆಗೆದುಕೊಂಡು ಕೂಡಲೇ ರಾಜ್ಯಮಟ್ಟದ ಸಭೆ ಮಾಡಿ, ನಾಲ್ಕು ಕಡೆ ಸಹಾಯವಾಣಿ ತೆರೆಯಲಾಯಿತು. ಸಹಾಯವಾಣಿ ಆರಂಭಿಸಿದ ನಾಲ್ಕು ದಿನಗಳಲ್ಲಿ ಲವ್ ಜಿಹಾದ್‌ಗೆ ಸಂಬಂಧಿಸಿದ ಸುಮಾರು ೩೦೦ ಕರೆಗಳು ಬಂದಿವೆ. ಅದರಲ್ಲಿ ಸುಮಾರು ನೂರಕ್ಕೂ ಹೆಚ್ಚು ಬೆದರಿಕೆ ಕರೆಗಳಾಗಿವೆ. ೭೦ಕ್ಕೂ ಹೆಚ್ಚು ಜಿಹಾದ್ ಪ್ರಕರಣಗಳಲ್ಲಿ ೩೨ ಹುಡುಗಿಯರನ್ನು ಮರಳಿ ಕರೆತರಲಾಗಿದೆ ಎಂದರು.ಇಡೀ ದೇಶದಲ್ಲಿ ಮುಸ್ಲಿಂ ಸಮುದಾಯದವರು ತಮ್ಮ ಜನಸಂಖ್ಯೆ ಹೆಚ್ಚಳಕ್ಕಾಗಿ ಲವ್ ಜಿಹಾದ್‌ನಂತಹ ತಂತ್ರಗಾರಿಕೆಯಲ್ಲಿ ತೊಡಗಿಸಿದ್ದಾರೆ. ಅದರ ವಿರುದ್ಧ ರಾಜ್ಯದ್ಯಾಂತ ಹೋರಾಟವನ್ನು ಮಾಡುತ್ತಿದ್ದೇವೆ ಎಂದು ಮುತಾಲಿಕ್ ಹೇಳಿದರು.
ಹಾವೇರಿಯಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಧಾರವಾಡದಲ್ಲಿಯೂ ಲವ್ ಜಿಹಾದ್ ಪ್ರಕರಣ ಹೆಚ್ಚಾಗುತ್ತಿವೆ. ಹೀಗಾಗಿ ನಾವು ಮಹಿಳೆಯರಿಗೆ ಧೈರ್ಯ ತುಂಬುವ ಸಲುವಾಗಿ ಧಾರವಾಡದಲ್ಲಿ ಸುಮಾರು ೫೦ ವಿದ್ಯಾರ್ಥಿನಿಯರಿಗೆ ತ್ರಿಶೂಲ ದೀಕ್ಷೆ ನೀಡಿದ್ದೇವೆ. ಈ ಕಾರ್ಯಕ್ರಮ ಯಶಸ್ವಿಯಾದ ಆನಂತರ ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ತ್ರಿಶೂಲ ದೀಕ್ಷೆ ಪಡೆಯಲು ಮುಂದೆ ಬಂದಿದ್ದಾರೆ. ರಾಜ್ಯಾದ್ಯಂತ ಸುಮಾರು ೧೦೦ ಸ್ಥಳಗಳಲ್ಲಿ ತ್ರಿಶೂಲ ದೀಕ್ಷಾ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.ಗದಿಗೆಪ್ಪ ಕುರುವತ್ತಿ, ಶ್ರೀರಾಮ ಸೇನಾ ಧಾರವಾಡ ವಿಭಾಗ ಅಧ್ಯಕ್ಷ ಮುದುಕಣ್ಣ ವನಹಳ್ಳಿ, ರಾಕೇಶ್ ರಾಯಣ್ಣ, ವಿನಾಯಕ್ ಇಚ್ಚಂಗಿ, ಸಿದ್ಧಾರೂಢ ವಿಭೂತಿ ಮಠ, ಬಸವರಾಜ್ ಕಲ್ಲಪ್ಪನವರ್, ರಾಜು ಪೂಜಾರ್, ಫಕೀರೇಶ ಕಾಳೆ ಇದ್ದರು.