ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಜಿಲ್ಲಾ ವರದಿಗಾರರ ಕೂಟದ 3ನೇ ವರ್ಷದ ಪಿಪಿಎಲ್-2ಕೆ24 ಕ್ರಿಕೆಟ್ ಪಂದ್ಯಾವಳಿ ರಣ ರೋಚಕ ಪಂದ್ಯದಲ್ಲಿ ಚಾಲುಕ್ಯ ತಂಡವು 18 ರನ್‌ಗಳಿಂದ ಕದಂಬ ತಂಡದ ವಿರುದ್ಧ ಭರ್ಜರಿ ಜಯಗಳಿಸಿತು. ನಗರದ ಜಿಲ್ಲಾ ಪೊಲೀಸ್ ಕವಾಯಿತು ಮೈದಾನದಲ್ಲಿ ಕಳೆದ 3 ದಿನಗಳಿಂದ ನಡೆದ ಪಿಪಿಎಲ್-2ಕೆ24 ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸುವರ್ಣ ನ್ಯೂಸ್‌ನ ಡಾ.ಸಿ. ವರದರಾಜ ನೇತೃತ್ವದ ಚಾಲುಕ್ಯ ಹಾಗೂ ಪ್ರಜಾವಾಣಿಯ ಸಿದ್ದಯ್ಯ ಹಿರೇಮಠ ನೇತೃತ್ವದ ಕದಂಬ ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚಾಲುಕ್ಯ ತಂಡವು ನಿಗದಿತ 6 ಓವರ್‌ನಲ್ಲಿ 4 ವಿಕೆಟ್ ನಷ್ಟಕ್ಕೆ 59 ರನ ಕಲೆ ಹಾಕಿತು. ತಂಡದ ಪರ ಆರಂಭಿಕರಾದ ಮಹದೇವ 11 ರನ್, ರಾಮಪ್ರಸಾದ 6 ರನ್, ಪರಶುರಾಮ 20 ರನ್, ವರದರಾಜ, ಮಂಜುರ ಉತ್ತಮ ಬ್ಯಾಟಿಂಗ್ ನಿಂದಾಗಿ ಉತ್ತಮ ಮೊತ್ತ ಕೂಡಿ ಹಾಕಿತು. ಗುರಿ ಬೆನ್ನು ಹತ್ತಿದ ಕದಂಬ ತಂಡ 3 ವಿಕೆಟ್ ಗೆ ಕೇವಲ 41 ರನ್ ಮಾತ್ರ ಗಳಿಸಿ, 18 ರನ್‌ಗಳ ಸೋಲನುಭವಿಸಿತು.ಇಡೀ ಟೂರ್ನಿಯಲ್ಲಿ ಮಿಂಚಿದ್ದ ಪ್ರವೀಣ ಬಾಡ ಫೈನಲ್‌ನಲ್ಲಿ ನಿರಾಸೆ ಮೂಡಿಸಿದರು. ಹನುಮಂತ ಕಂಚಿಕೇರಿ 10 ರನ್, ಸಿದ್ದಯ್ಯ ಹಿರೇಮಠ 8, ಪ್ರಮೋದ 6 ರನ್ ಮಾತ್ರ ಗಳಿಸಿ, ಗುರಿ ತಲುಪಲು ಇನ್ನಿಲ್ಲದ ಪ್ರಯತ್ನ ನಡೆಸಿದರು. ಅಂತಿಮವಾಗಿ ಚಾಲುಕ್ಯ ತಂಡ ಪ್ರಶಸ್ತಿ ಮುಡಿಗೇರಿಸಿಕೊಂಡು ಬೀಗಿತು. ಚಾಲುಕ್ಯ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿ ಪಿಪಿಎಲ್-2ಕೆ24 ಟ್ರೋಫಿ ಹಾಗೂ 10 ಸಾವಿರ ನಗದು ಬಹುಮಾನ ಪಡೆಯಿತು. ಹಿರಿಯರೇ ಹೆಚ್ಚಾಗಿದ್ದ ಕದಂಬ ತಂಡ ದ್ವಿತೀಯ ಸ್ಥಾನಕ್ಕೆ ಟ್ರೋಫಿ ಹಾಗೂ 5 ಸಾವಿರ ನಗದು ಬಹುಮಾನಕ್ಕೆ ತೃಪ್ತಿಪಡಬೇಕಾಯಿತು. ಸರಣಿ ಶ್ರೇಷ್ಠ ಅಲ್‌ರೌಂಡರ್ ಹಗ್ಗಳಿಕೆ ಕದಂಬ ತಂಡದ ಪ್ರವೀಣ ಬಾಡಾ ಪಾಲಾಯಿತು. ಫೈನಲ್ ಪಂದ್ಯದಲ್ಲಿ ಸತತ 3 ಸಿಕ್ಸ್ ಬಾರಿಸಿ, ಪಂದ್ಯ ಪುರುಷೋತ್ತಮನಾಗಿ ಪರಶುರಾಮ, ಟೂರ್ನಿಯ ಬೆಸ್ಟ್ ಬ್ಯಾಟ್ಸಮನ್ ಆಗಿ ನೂರುಲ್ಲಾ, ಬೆಸ್ಟ್ ಬೌಲರ್ ಆಗಿ ಎಚ್.ಬಿ. ಮಂಜಪ್ಪ, ಬೆಸ್ಟ್ ಅಲ್ ರೌಂಡರ್ ಹನುಮಂತ ಕಂಚಿಕೆರೆ ವೈಯಕ್ತಿಕ ಟ್ರೋಫಿ ಜೊತೆಗೆ ತಲಾ ₹2 ಸಾವಿರ ರು. ನಗದು ಬಹುಮಾನ ಪಡೆದರು. ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ, ನಿಕಟ ಪೂರ್ವ ಅಧ್ಯಕ್ಷ ಬಸವರಾಜ ದೊಡ್ಮನಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಟ್ರೋಫಿ ಹಾಗೂ ನಗದು ಬಹುಮಾನ ಪ್ರಾಯೋಜಕರಾದ ಸುರೇಶ ಕುಣಿಬೆಳಕೆರೆ, ಆರ್. ರವಿ, ಮಾಗನೂರು ಮಂಜಪ್ಪ, ಅನಿಲಕುಮಾರ ಎಂ.ಭಾವಿ, ಡಾ.ಕೆ. ಜೈಮುನಿ ಬಹುಮಾನ ವಿತರಿಸಿ, ಶುಭಾರೈಸಿದರು. .............
ಬಾಕ್ಸ್ವರದಿಗಾರ ಕೂಟಕ್ಕೆ ಕೆಟ್ಟ ಕಣ್ಣು ಬೀಳದಿರಲಿ: ಮಲ್ಲೇಶ
ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದ ಪಿಪಿಎಲ್ ಕ್ರಿಕೆಟ್ ಪಂದ್ಯಾವಳಿ ಎಲ್ಲರನ್ನೂ ಒಗ್ಗೂಡಿಸುವ ಮೂಲಕ ಕೂಟಕ್ಕೆ ಮತ್ತಷ್ಟು ಬಲ ತಂದಿದೆ ಎಂದು ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ ತಿಳಿಸಿದರು.ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಪದಾಧಿಕಾರಿಗಳ, ಸದಸ್ಯರ ಸಾಂಘಿಕ ಪ್ರಯತ್ನದಿಂದ ಪಂದ್ಯಾವಳಿ ಯಶಸ್ವಿಯಾಗಿದೆ. ಕೂಟಕ್ಕೆ, ಕೂಟದ ಸದಸ್ಯರಿಗೆ ಯಾರ ಕೆಟ್ಟ ಕಣ್ಣುಗಳೂ ಬೀಳದಿರಲಿ. ಪದಾಧಿಕಾರಿಗಳು, ಸದಸ್ಯರು ಪರಸ್ಪರ ವಿಶ್ವಾಸದಿಂದ ಮಾದರಿ ಪಂದ್ಯಾವಳಿ ಆಯೋಜನೆ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಶ್ಲಾಘಿಸಿದರು.
ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮಾತನಾಡಿ, ಪಂದ್ಯಾವಳಿಯು ಹಿರಿಯರು, ಕಿರಿಯರ ಸಮ್ಮಿಲನವಾಗಿದೆ. ಎಲ್ಲಾ ಒಳ್ಳೆಯ ಮನಸ್ಸುಗಳು ಒಂದುಗೂಡಿ, ಮಾಡಿರುವ ಟೂರ್ನಿ ಅತ್ಯಂತ ಯಶಸ್ವಿಯಾಗಿದೆ. ನೀವೆಲ್ಲಾ ಆಡುವುದನ್ನು ನೋಡಿದರೆ ನಮಗೂ ಆಟವಾಡುವ ಆಸೆಯಾಗುತ್ತಿದೆ ಎಂದರು.ಕೂಟದ ಅಧ್ಯಕ್ಷ, ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ ಮಾತನಾಡಿ, ಪಂದ್ಯಾವಳಿ ಯಶಸ್ವಿಯಾಗಲು ಕೂಟದ ಎಲ್ಲಾ ಸದಸ್ಯರು, ಪದಾಧಿಕಾರಿಗಳು, ಪ್ರಾಯೋಜಕರು, ಪ್ರೋತ್ಸಾಹಕರೇ ಕಾರಣ. ಬೇಸಿಗೆ ರಜೆ ವೇಳೆ ಕೂಟದ ಸದಸ್ಯರು, ಕುಟುಂಬ ವರ್ಗ, ಮಕ್ಕಳಿಗಾಗಿ ಒಳಾಂಗಣದ ಕ್ರೀಡಾ ಸ್ಪರ್ಧೆ, ಮನರಂಜನಾ ಸ್ಪರ್ಧೆಗಳನ್ನು ಆಯೋಜಿಸುವುದಾಗಿ ಘೋಷಿಸಿದರು.