ಚಾಮರಾಜನಗರ ಜಿಲ್ಲೆ ರೈಲು ಕಾಮಗಾರಿ ವೀಕ್ಷಿಸಿದ ಸೋಮಣ್ಣ

KannadaprabhaNewsNetwork |  
Published : Aug 30, 2026, 01:30 AM IST
ರೈಲು ನಿಲ್ದಾಣ ಕಾಮಗಾರಿಯನ್ನು ಸೆ. 26ರೊಳಗೆ ಮುಗಿಸುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ | Kannada Prabha

ಸಾರಾಂಶ

ಚಾಮರಾಜನಗರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 22.31 ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿರುವ ರೈಲು ನಿಲ್ದಾಣ ಕಾಮಗಾರಿಯನ್ನು ಸೆ.26ರೊಳಗೆ ಮುಗಿಸುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಚಾಮರಾಜನಗರ ರೈಲು ನಿಲ್ದಾಣವನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ 22.31 ಕೋಟಿ ರು. ವೆಚ್ಚದಲ್ಲಿ ಅಭಿವೃದ್ದಿ ಪಡಿಸಲಾಗುತ್ತಿರುವ ರೈಲು ನಿಲ್ದಾಣ ಕಾಮಗಾರಿಯನ್ನು ಸೆ.26ರೊಳಗೆ ಮುಗಿಸುವಂತೆ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶನಿವಾರ ಸೂಚನೆ ನೀಡಿದರು.

ಹೊಸ ನಿಲ್ದಾಣ ಕಟ್ಟಡ, ಅಗಲೀಕರಣ ಮಾಡುತ್ತಿರುವ ಫ್ಲಾಟ್ ಫಾರಂ, ಶೆಲ್ಟರ್, ಪ್ರಯಾಣಿಕರ ಸಂಚಾರಕ್ಕೆ ನಿರ್ಮಿಸಲಾಗುತ್ತಿರುವ ಪಾದಚಾರಿ ಮೇಲ್ಸೇತುವೆ, ಲಿಫ್ಟ್‌ಗಳು, ಎಸ್ಕಲೇಟರ್ ಕಾಮಗಾರಿಗಳನ್ನು ವೀಕ್ಷಿಸಿದರು.

ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿ ನಿರ್ಮಿಸಲಾಗಿರುವ ನಿರೀಕ್ಷಣಾ ಕೊಠಡಿ, ಉಪಹಾರ ಮಂದಿರವನ್ನು ವೀಕ್ಷಣೆ ಮಾಡಿದರು. ನಿಲ್ದಾಣದ ಸುತ್ತಮುತ್ತಲಿನ ಪ್ರದೇಶ, ಪಾರ್ಕಿಂಗ್ ಸ್ಥಳ, ಸುಧಾರಿತ ಪ್ರದೇಶ ಸೌಲಭ್ಯ ಸೇರಿದಂತೆ ಪ್ರಗತಿಯಲ್ಲಿರುವ ವಿವಿಧ ಕಾಮಗಾರಿಯನ್ನು ಸಚಿವರು ಪರಿಶೀಲಿಸಿದರು.

ಹಾಲಿ ಇರುವ ಟಿಕೆಟ್ ಕೌಂಟರ್ ಬಳಿ ತೆರಳಿ ಅಲ್ಲಿಯೂ ವೀಕ್ಷಣೆ ಮಾಡಿ ಪ್ರಯಾಣಿಕರಿಗೆ ಶೀಘ್ರವಾಗಿ ಟಿಕೆಟ್ ವಿತರಿಸಲು ಅನುಕೂಲವಾಗುವಂತೆ ವ್ಯವಸ್ಥೆಗಳನ್ನು ಕಲ್ಪಿಸಲು ಸೂಚಿಸಿದರು. ಇದೇ ವೇಳೆ ರೈಲ್ವೆ ಸೌಲಭ್ಯಗಳ ಬಗ್ಗೆ ಪ್ರಯಾಣಿಕರಿಂದಲೂ ಅಹವಾಲುಗಳನ್ನು ಆಲಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಚಿವ ವಿ. ಸೋಮಣ್ಣ, ಇಡೀ ರಾಜ್ಯದಲ್ಲಿ ರೈಲ್ವೆ ಮೇಲ್ಸೇತುವೆ, ಕೆಳ ಸೇತುವೆ ಸೇರಿದಂತೆ ನನೆಗುದಿಗೆ ಬಿದ್ದಿದ್ದ ಹಲವು ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸುತ್ತಿದ್ದೇವೆ. ಪ್ರಧಾನಿಯವರು ತಂದಿರುವ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು ಹಾಗೂ ಪ್ರಮುಖ ತಾಲೂಕುಗಳು, ರಾಜಧಾನಿಯಲ್ಲಿರುವ ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ ಚಾಮರಾಜನಗರ ರೈಲು ನಿಲ್ಧಾಣದಲ್ಲಿಯೂ ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಮೈಸೂರು ಜಿಲ್ಲೆ ಹಾಗೂ ಚಾಮರಾಜನಗರ ಭಾಗದಲ್ಲಿ ಮೇಲ್ಸೆತುವೆ, ಕೆಳ ಸೇತುವೆ, ಎಲ್.ಸಿ ಗೇಟ್ ಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿಯಾಗಿದೆ. ಅಧಿಕಾರಿಗಳೊಂದಿಗೆ ಈಗಾಗಲೇ ವೀಕ್ಷಿಸಿ ಚರ್ಚಿಸಲಾಗಿದೆ. ಇನ್ನು ೧೫ ದಿನದೊಳಗೆ ಯೋಜನೆ ಯಾವ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ಇನ್ನೂ ೨ ವರ್ಷದಲ್ಲಿ ಎಲ್ಲವನ್ನು ಪೂರ್ಣಗೊಳಿಸುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿಪ್ ಮಿತ್ತಲ್, ಮುಖ್ಯ ಯೋಜನಾ ವ್ಯವಸ್ಥಾಪಕ ಗತಿಶಕ್ತಿ, ಮುಖ್ಯ ಯೋಜನಾ ವ್ಯವಸ್ಥಾಪಕ ಆನಂದ ಭಾರತಿ ಹಾಗೂ ಇಲಾಖೆಯ ವಿಭಾಗೀಯ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಾಲ್ಮೀಕಿ ಹಣ ವಾಪಾಸ್‌ವರೆಗೂ ಹೋರಾಟ: ಬಿವೈವಿ
ಮುಂದಿನ ವಾರದಲ್ಲಿ ಕೇಂದ್ರಕ್ಕೆ ಬರ ವರದಿ ಸಲ್ಲಿಕೆ: ಡಾ। ಪರಂ