ಹನೂರು ಎನ್ಕೌಂಟರ್‌ಗೆ ಅರಣ್ಯ ಸಿಬ್ಬಂದಿ ‘ಜಿಂಕೆ ಮಾಂಸ’ ಸಾಕ್ಷ್ಯ

Published : Aug 17, 2026, 04:50 AM IST
Chamarajanagar Forest Encounter

ಸಾರಾಂಶ

ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ಸಂಬಂಧ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ.

ಹನೂರು (ಚಾಮರಾಜನಗರ) : ಕಾವೇರಿ ವನ್ಯಜೀವಿ ವಿಭಾಗದ ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟ ಘಟನೆಯ ಸಂಬಂಧ ಉಪವಿಭಾಗಧಿಕಾರಿ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. ತನಿಖೆಗೆ ಬಂಧ ಅಧಿಕಾರಿಯ ಮುಂದೆ ಅರಣ್ಯ ಇಲಾಖೆಯು ಬೇಟೆಗಾರರಿಂದ ವಶಕ್ಕೆ ಪಡೆದ ಮಾಂಸ, ಬಂದೂಕು ಸೇರಿದಂತೆ ಇನ್ನಿತರ ವಸ್ತುಗಳನ್ನು ಹಾಜರು ಪಡಿಸಿದ್ದಾರೆ. ಈ ಮೂಲಕ ಇದು ನಕಲಿ ಎನ್‌ಕೌಂಟರ್‌ ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನಿಸಿದೆ.

ಕೊಳ್ಳೇಗಾಲದ ಉಪವಿಭಾಗಧಿಕಾರಿ ದಿನೇಶ್‌ ಕುಮಾರ್‌ ಮೀನಾ ಅವರಿಗೆ ಜಿಲ್ಲಾಧಿಕಾರಿ ತನಿಖೆ ನಡೆಸಿ ವರದಿ ನೀಡಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾನುವಾರ ಎನ್‌ಕೌಂಟರ್‌ ನಡೆದ ಕಾವೇರಿ ವನ್ಯಜೀವಿ ವಿಭಾಗದ ಶಾಗ್ಯ ಅರಣ್ಯ ಪ್ರದೇಶ, ಹನೂರಿನ ಅರಣ್ಯ ಕಚೇರಿ, ಕಳ್ಳಬೇಟೆ ನಿಗಾ ಶಿಬಿರಗಳಿಗೆ ದಿನೇಶ್‌ ಭೇಟಿ ನೀಡಿದ್ದರು ಎಂದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್‌ಕೌಂಟರ್‌ ಕಾರ್ಯಾಚರಣೆ ವೇಳೆ ಅರಣ್ಯ ಇಲಾಖಾ ಸಿಬ್ಬಂದಿ ವಶಕ್ಕೆ ಪಡೆದಿರುವ 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸವನ್ನು ದಿನೇಶ್‌ ಅವರ ಮುಂದೆ ಹಾಜರು ಪಡಿಸಿದ್ದಾರೆ. ಅಲ್ಲದೆ 4 ಜೊತೆ ಪ್ಯಾರಾಗನ್ ಚಪ್ಪಲಿ, 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರಗಳನ್ನು ಹಾಜರು ಪಡಿಸಿದ್ದೇವೆ. ವಶಪಡಿಸಿಕೊಂಡ ಮಾಂಸದ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಅಪಾರ ನಷ್ಟ:

ಈ ನಡುವೆ ಇದು ನಕಲಿ ಎನ್‌ಕೌಂಟರ್‌ ಎಂದು ಆರೋಪಿಸಿದ ಉದ್ರಿಕ್ತ ಜನರು 7 ಕಳ್ಳಬೇಟೆ ತಡೆ ಶಿಬಿರಗಳು ಮತ್ತು 9 ವಸತಿ ಗೃಹಗಳಿಗೆ ಹಾನಿ ಮಾಡಿದ್ದಾರೆ. ಪೀಠೋಪಕರಣ, ಸಾಮಾನುಗಳನ್ನು ಧ್ವಂಸಗೊಳಿಸಿದ್ದಾರೆ. ಜೊತೆಗೆ 1 ಇಲಾಖಾ ನಾಲ್ಕು ಚಕ್ರದ ವಾಹನ ಮತ್ತು 4 ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಇದರಿಂದ ಸರ್ಕಾರ ಮತ್ತು ಅರಣ್ಯ ಇಲಾಖೆಗೆ ಅಪಾರ ನಷ್ಟವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲು ಅರಣ್ಯ ಇಲಾಖೆ ನಿರ್ಧರಿಸಿದೆ. ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ವಿವರ ಬಹಿರಂಗಪಡಿಸಲಾಗುವುದು ಎಂದು ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

7 ದಿನದಲ್ಲಿ ವರದಿ ಸಲ್ಲಿಕೆ

ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಮೂವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದಾರೆ. ತನಿಖಾ ವರದಿಗೆ ಸಲ್ಲಿಕೆಗೆ 7 ದಿನ ಅವಕಾಶ ನೀಡಿದ್ದಾರೆ. ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ.‌ ಈಗಾಗಲೇ ತನಿಖೆ ಆರಂಭವಾಗಿದೆ, ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದೇನೆ.‌ ಗುಂಡೇಟಿಗೆ ಬಲಿ ಆದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ಕೊಳ್ಳೇಗಾಲ ಉಪ ವಿಭಾಗಧಿಕಾರಿ ದಿನೇಶ್ ಕುಮಾರ್ ಮೀನಾ ಹೇಳಿದ್ದಾರೆ.

ತನಿಖಾ ಟೀಂಗೆ ಏನು ಹಸ್ತಾಂತರ?

- 2 ಚೀಲದಲ್ಲಿನ ಸುಮಾರು 20 ರಿಂದ 30 ಕೆ.ಜಿ. ವನ್ಯಪ್ರಾಣಿ ಮಾಂಸ

- ಬೇಟೆಗಾರರು ಬಳಸಿದ್ದಾರೆ ಎನ್ನಲಾದ ಗನ್‌, 4 ಪ್ಯಾರಾಗನ್ ಚಪ್ಪಲಿ

- 2 ಲೀಟರ್ ಮೆರಿಂಡಾ ಬಾಟಲಿನಲ್ಲಿ ಕಾಲು ಲೀಟರ್ ನೀರು, ಪರಿಕರ

- ವಶಪಡಿಸಿಕೊಂಡ ಮಾಂಸ ಶೀಘ್ರ ಪರೀಕ್ಷೆಗೆ ರವಾನೆಗೆ ನಿರ್ಧಾರ

- ಇದು ನಕಲಿ ಎನ್‌ಕೌಂಟರ್‌ ಅಲ್ಲ ಎಂದು ಸಾಬೀತಿಗೆ ಇಲಾಖೆ ಯತ್ನ

PREV
Get the latest news from Chamarajanagar district (ಚಾಮರಾಜನಗರ ಸುದ್ದಿ) — covering local developments, environment and wildlife, civic issues, politics, culture, tourism, agriculture and community stories. Stay updated with timely headlines and in-depth coverage from Chamarajanagar on Kannada Prabha.
Read more Articles on

Recommended Stories

ಸ್ಮಾರ್ಟ್‌ ಪಬ್ಲಿಕ್‌ ಶಾಲೇಲಿ ಕನ್ನಡ ಗೀತೆಗಳ ಭಾವಯಾನದಲ್ಲಿ ಕಲರವ
ಸಮಾಜದ ಉದ್ಧಾರಕ್ಕೆ ರೋಟರಿ ಕೊಡುಗೆ ಅಪಾರ: ಅಶ್ವಥ್‌