ಚಂದನವನ, ಶಿವಮೊಗ್ಗದ ದೇವರ ಕಾಡು : ಅನಂತ ಹೆಗಡೆ ಆಶೀಸರ

KannadaprabhaNewsNetwork |  
Published : Jun 08, 2025, 04:30 AM ISTUpdated : Jun 08, 2025, 12:23 PM IST
ಪೋಟೋ: 07ಎಸ್‌ಎಂಜಿಕೆಪಿ02ಶಿವಮೊಗ್ಗದ ಚಂದನವನದಲ್ಲಿ ವೃಕ್ಷಲಕ್ಷ ಆಂದೋಲನ, ಕರ್ನಾಟಕ ಹಾಗೂ ಪರ್ಯಾವರಣ ಟ್ರಸ್ಟ್, ಶಂಕರವಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಜಾಗತಿಕ ಪರಿಸರ ದಿನಾಚರಣೆಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಮಾತನಾಡಿದರು.  | Kannada Prabha

ಸಾರಾಂಶ

ಇಲ್ಲಿಯ ಆಲ್ಕೋಳದ ಅರಣ್ಯ ವಿಶ್ರಾಂತಿ ಗೃಹದ ಆವರಣದಲ್ಲಿರುವ ಚಂದನವನ ಶಿವಮೊಗ್ಗದ ದೇವರ ಕಾಡು ಆಗಿದ್ದು, ಸರ್ಕಾರ, ನಾಗರಿಕರು ಇದನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಲೇಬಾರದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

  ಶಿವಮೊಗ್ಗ : ಇಲ್ಲಿಯ ಆಲ್ಕೋಳದ ಅರಣ್ಯ ವಿಶ್ರಾಂತಿ ಗೃಹದ ಆವರಣದಲ್ಲಿರುವ ಚಂದನವನ ಶಿವಮೊಗ್ಗದ ದೇವರ ಕಾಡು ಆಗಿದ್ದು, ಸರ್ಕಾರ, ನಾಗರಿಕರು ಇದನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಲೇಬಾರದು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.

ನಗರದ ಚಂದನವನದಲ್ಲಿ ವೃಕ್ಷಲಕ್ಷ ಆಂದೋಲನ, ಕರ್ನಾಟಕ ಹಾಗೂ ಪರ್ಯಾವರಣ ಟ್ರಸ್ಟ್, ಶಂಕರವಲಯ, ಅರಣ್ಯ ಇಲಾಖೆ ಸಹಯೋಗದಲ್ಲಿ ಶನಿವಾರ ನಡೆದ ಜಾಗತಿಕ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿ, ಗ್ರಾಮ ನೈಸರ್ಗಿಕ ಭೂಮಿ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಅಭಿಯಾನದ ನಿಮಿತ್ತ ಗಿಡ ನೆಡುವ ಕಾರ್ಯಕ್ರಮದ ಬಳಿಕ ಮಾತನಾಡಿದರು.

ಕಾನು, ಕೆರೆ, ಗೋಮಾಳ ಭೂಮಿಗಳನ್ನು ಹೇಗಾದರೂ ಮಾಡಿ ಅರಣ್ಯ ಇಲಾಖೆ ರಕ್ಷಿಸಿಕೊಳ್ಳಬೇಕು. ನಗರದ ಹೊರವಲಯದ ಅರಣ್ಯ ಪ್ರದೇಶಗಳಲ್ಲಿ ಅತಿಕ್ರಮಿತ ಭೂಮಿಯನ್ನು ಬಿಟ್ಟು ಉಳಿದ ಭೂಮಿಯನ್ನು ಬೇಲಿ, ಕಾಲುವೆ ತೋಡಿ ರಕ್ಷಿಸಿಕೊಳ್ಳಬೇಕು. ರಾಜ್ಯದಲ್ಲಿಯೇ ಶಿವಮೊಗ್ಗ ಜಿಲ್ಲೆ ಅತಿ ಹೆಚ್ಚು ಅರಣ್ಯ ನಾಶವಾದ ಜಿಲ್ಲೆಯಾಗಿದ್ದು, ಈ ಜಾಗೃತಿ ಅಭಿಯಾನ ಮಹತ್ವ ಪಡೆದಿದೆ. ಈಗಾಗಲೇ ನಾನು ರಾಗಿಗುಡ್ಡದ ಕುರಿತು ಶಿವಮೊಗ್ಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಅವರ ಜೊತೆ ಚರ್ಚಿಸಿದ್ದು, ಹಾಲಿ ಬೇರೆ ಬೇರೆ ಉದ್ದೇಶಗಳಿಗೆ ಅಲ್ಲಿಯ ಜಾಗಗಳನ್ನು ಗುರುತು ಮಾಡಿದ್ದನು ಹೊರತುಪಡಿಸಿ, ಉಳಿದ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ. ಜಿಲ್ಲಾಧಿಕಾರಿಗಳಿಂದ ಉತ್ತರ ಬಂದ ನಂತರ ರಾಗಿಗುಡ್ಡದಲ್ಲಿ ಸಂಪೂರ್ಣ ರಕ್ಷಣಾಕಾರ್ಯ ಕೈಗೊಳ್ಳಲಾಗುವುದು ಎಂದು ಶಿವಶಂಕರ್ ತಿಳಿಸಿದ್ದಾಗಿ ಅಶೀಸರ ಮಾಹಿತಿ ನೀಡಿದರು.

ಪರ್ಯಾವರಣ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ಶೇ.೩೩ರಷ್ಟು ಅರಣ್ಯ ಇರಬೇಕು ಎಂಬ ನೀತಿಯಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದು ಪಾಲನೆಯಾಗುತ್ತಿಲ್ಲ. ಅರಣ್ಯ ಜೀವ ವೈವಿಧ್ಯತೆಯ ಬೀಡು. ಮನುಷ್ಯನ ಜೀವನಕ್ಕೆ ಇದು ಬಹುಮುಖ್ಯ. ಅರಣ್ಯಗಳೇ ದೊಡ್ಡ ಜೀವಮೂಲಗಳಾಗಿವೆ. ದುಡ್ಡುಕೊಟ್ಟು ಕೊಳ್ಳಲಾಗದ ಶಾಂತಿ ಪಡೆಯಲು ಅರಣ್ಯದಿಂದ ಮಾತ್ರ ಸಾಧ್ಯ. ಅರಣ್ಯದಿಂದ ಸರಕು ಸೇವೆ, ವೈವಿಧ್ಯ ಸೇವೆ ಮತ್ತು ಸಾಂಸ್ಕೃತಿಕ ಸೇವೆಗಳು ಲಭ್ಯವಾಗುತ್ತಿವೆ. ಋಷಿ ಮತ್ತು ಕೃಷಿ ಸಂಸ್ಕೃತಿ ಭಾರತದ ಜೀವಾಳವಾಗಿದೆ. ಜೇನು ನೊಣದಂತಹ ಸಣ್ಣ ಕೀಟ ಇಲ್ಲದೇ ಹೋದರೆ ಎಲ್ಲರೂ ಉಪವಾಸ ಸಾಯಬೇಕು ಎಂಬ ಎಚ್ಚರಿಕೆಯನ್ನು ನೀಡಿದರು.

ನಮ್ಮ ಧನ್ಯವಾದವನ್ನು ಅಪೇಕ್ಷಿಸದೇ ತಮ್ಮ ಸೇವೆಯನ್ನು ಮಾಡುತ್ತಿರುವ ಒಂದೇ ಒಂದು ಕ್ಷೇತ್ರವೆಂದರೆ ಅದು ಅರಣ್ಯ. ಮನುಷ್ಯ ಮತ್ತು ಪ್ರಾಣಿ, ಪಕ್ಷಿಗಳ ನಡುವೆ ಅವಿನಾಭಾವ ಸಂಬಂಧವಿರುವ ಅರಣ್ಯವನ್ನು ಸಂರಕ್ಷಿಸಬೇಕಾಗಿದ್ದು, ನಮ್ಮೆಲ್ಲರ ಕರ್ತವ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರಗಳ ಅರಣ್ಯನೀತಿಯನ್ನು ಗಮನಿಸಿದರೆ ಮರಗಳ ಹೆಣಗಳ ಬೆಲೆ ಕಟ್ಟುತ್ತೇವೆಯೇ ವಿನಃ ಜೀವಂತ ಮರಗಳ ಬೆಲೆ ಕಟ್ಟುವುದೇ ಇಲ್ಲ. ಏಕ ಜಾತಿಯ ಸಸ್ಯಗಳ ನೆಡುತೋಪುಗಳು ಕಾಡು ಅಲ್ಲವೇ ಅಲ್ಲ ಎಂದ ಅವರು, ಅರಣ್ಯ ಸಂರಕ್ಷಣೆಯ ಕಾರ್ಯಕ್ರಮಗಳಲ್ಲಿ ಎಲ್ಲರೂ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ತೀರ್ಥಹಳ್ಳಿ ತಾಲೂಕಿನಲ್ಲಿ ಕಾನು ಕಾಡು ಅತಿಕ್ರಮಣ ಹೆಚ್ಚಿನ ರೀತಿಯಲ್ಲಿ ನಡೆದಿದೆ. ಕೆಲವರು ನ್ಯಾಯಾಲಯಕ್ಕೂ ಹೋಗಿದ್ದಾರೆ. ಈಗ ಇದ್ದ ಕಾಡನ್ನಾದರೂ ಉಳಿಸಬೇಕು ಎಂಬ ಉದ್ಧೇಶದಿಂದ ಜೂನ್ ಮಾಸಾಂತ್ಯದ ಒಳಗೆ ಅಲ್ಲಿ ಬೃಹತ್ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದರು.

ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ, ಕೊಮ್ಮನಾಳು, ಕುಂಚೇನಹಳ್ಳಿ ಭಾಗದಲ್ಲಿ ೨೫ಎಕರೆ ಅರಣ್ಯ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ. ಜೂನ್ ಕೊನೆಯೊಳಗೆ ಇನ್ನೂ ೩೫ ಎಕರೆ ಅತಿಕ್ರಮಿತ ಭೂಮಿಯನ್ನು ತೆರವುಗೊಳಿಸಲಾಗುವುದು ಎಂದರು.

ಪರಿಸರ ತಜ್ಞ ಪ್ರೊ.ಎಲ್.ಕೆ. ಶ್ರೀಪತಿ ಸೊರಬ ಪರಿಸರ ಟ್ರಸ್ಟ್‌ನ ಎಂ.ಆರ್. ಪಾಟೀಲ್, ವೃಕ್ಷಲಕ್ಷ ಆಂದೋಲನದ ಸಂಚಾಲಕ ವೆಂಕಟೇಶ್ ಕವಲಗೋಡು, ಬಾಲು ನಾಯ್ಡು, ನಾಗರಾಜ್ ಶೆಟ್ಟರ್, ಓಪನ್ ಮೈಂಡ್ ಶಾಲೆಯ ಮಕ್ಕಳು, ಶಿಕ್ಷಕರು ಮೊದಲಾದವರಿದ್ದರು.

PREV
Read more Articles on

Recommended Stories

ಕೇಂದ್ರದಂತೆ ರಾಜ್ಯ ಸರ್ಕಾರ ಮಾದರಿ ಹೆಜ್ಜೆ ಇರಿಸುವುದೇ?
ಜಿಎಸ್ಟಿ ಕಡಿತದ ಲಾಭ ಜನರಿಗೆ ಸಿಗುವಂತಾಗಲಿ: ಸಿಎಂ ಆಶಯ