ಚನ್ನರಾಯಪಟ್ಟಣದ ಟಿಎಪಿಸಿಎಂಎಸ್ ನೂತನ ಅಧ್ಯಕ್ಷರಾಗಿ ಚಂದ್ರಕಲಾ ಮಂಜೇಗೌಡ ಅವಿರೋಧ ಆಯ್ಕೆ

KannadaprabhaNewsNetwork | Published : Jun 26, 2024 12:43 AM

ಸಾರಾಂಶ

ಚನ್ನರಾಯಪಟ್ಟಣದ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ನಿರ್ದೇಶಕಿ, ಉತ್ತೇನಹಳ್ಳಿ ಗ್ರಾಮದ ಚಂದ್ರಕಲಾ ಮಂಜೇಗೌಡರವರು ಅವಿರೋಧವಾಗಿ ಆಯ್ಕೆಯಾದರು.

ಕೆ.ಎಂ.ನಂಜಪ್ಪ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನ

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಶ್ರವಣಬೆಳಗೊಳ ಕ್ಷೇತ್ರದ ನಿರ್ದೇಶಕಿ, ಉತ್ತೇನಹಳ್ಳಿ ಗ್ರಾಮದ ಚಂದ್ರಕಲಾ ಮಂಜೇಗೌಡರವರು ಅವಿರೋಧವಾಗಿ ಆಯ್ಕೆಯಾದರು.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಹಿಂದಿನ ಅಧ್ಯಕ್ಷ ಕೆ.ಎಂ.ನಂಜಪ್ಪರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಕಾರಣ, ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಹಕಾರ ಇಲಾಖೆ ಶನಿವಾರ ಚುನಾವಣೆ ನಿಗದಿಗೊಳಿಸಿತ್ತು. ಅಧ್ಯಕ್ಷ ಸ್ಥಾನಕ್ಕೆ ನಿರ್ದೇಶಕಿ ಉತ್ತೇನಹಳ್ಳಿ ಗ್ರಾಮದ ಚಂದ್ರಕಲಾ ಮಂಜೇಗೌಡ ಹೊರತುಪಡಿಸಿ ಇತರರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸಹಕಾರ ಇಲಾಖೆ ಅಭಿವೃದ್ಧಿ ಅಧಿಕಾರಿ ಸುನೀಲ್‌ ಚಂದ್ರಕಲಾ ಮಂಜೇಗೌಡರವರ ಅಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ, ಉಪಾಧ್ಯಕ್ಷ ಎ.ಎಸ್.ಕೃಷ್ಣೇಗೌಡ ಉರುಪ್ ಸ್ವಾಮಿ ಸೇರಿದಂತೆ ಎಲ್ಲ ನಿರ್ದೇಶಕರು, ಅವರ ಬೆಂಬಲಿಗರು, ಹಿತೈಷಿಗಳು ಹಾರ ಹಾಕಿ, ಸಿಹಿ ತಿನ್ನಿಸಿ ಅಭಿನಂದಿಸಿದರು. ಈ ವೇಳೆ ಮಾತನಾಡಿದ ನೂತನ ಅಧ್ಯಕ್ಷೆ ಚಂದ್ರಕಲಾ ಮಂಜೇಗೌಡ, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಹಿಂದೆ ಅಧ್ಯಕ್ಷರಾಗಿದ್ದ ಎಲ್ಲರೂ ಸಂಘವನ್ನು ಅಭಿವೃದ್ಧಿಯತ್ತ ಮುನ್ನೆಡೆಸಿದ್ದಾರೆ. ಅವರೆಲ್ಲರ ಮಾರ್ಗದರ್ಶನ, ಸಲಹೆಯನ್ನು ಪಡೆದು ಅರ್ಥಿಕ ಸಂಪನ್ಮೂಲ ಕ್ರೋಢೀಕರಣದ ಜತೆಗೆ ರೈತರಿಗೆ ಹತ್ತಿರವಾದ ಕಾರ್ಯವನ್ನು ಮಾಡುವ ಮೂಲಕ ನನ್ನ ಮೇಲೆ ನಂಬಿಕೆ ಇಟ್ಟು ಅಧ್ಯಕ್ಷ ಸ್ಥಾನ ಕರುಣಿಸಿರುವ ಶಾಸಕ ಸಿ.ಎನ್.ಬಾಲಕೃಷ್ಣರವರಿಗೆ ಕೀರ್ತಿ ತರುತ್ತೇನೆ ಎಂದು ತಿಳಿಸಿದರು.

ನೂತನ ಅಧ್ಯಕ್ಷರಿಗೆ ಶುಭ ಕೋರಿ ಮಾತನಾಡಿದ ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೆಶಕ ಸಿ.ಎನ್.ಪುಟ್ಟಸ್ವಾಮೀಗೌಡ, ‘ಇಲ್ಲಿನ ಟಿಎಪಿಸಿಎಂಎಸ್ ಕಳೆದ ೧೦ ವರ್ಷದಿಂದ ಅಭಿವೃದ್ದಿಯತ್ತ ಸಾಗುತ್ತಿದ್ದು, ೧.೫ ಕೋಟಿ ರು. ಮೂಲ ಬಂಡವಾಳವನ್ನು ಹೊಂದಿದೆ. ವಾಣಿಜ್ಯ ಮಳಿಗೆಗಳಿಂದ ಪ್ರತಿ ತಿಂಗಳು ೧.೫ ಲಕ್ಷ ರು. ಬಾಡಿಗೆ ಹಣ ಕ್ರೋಢೀಕರಣವಾಗುತ್ತಿದೆ. ಇಡೀ ಜಿಲ್ಲೆಯಲ್ಲಿಯೇ ಗೊಬ್ಬರ ಮಾರಾಟದಲ್ಲಿ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ ೭ ವರ್ಷಗಳ ಅವಧಿಯಲ್ಲಿ ೧೪ ಕೋಟಿ ರು.ಗೂ ಹೆಚ್ಚಿನ ವಹಿವಾಟು ನಡೆಸಲಾಗಿದೆ. ರಾಜ್ಯ ಮಾರಾಟ ಮಹಾಮಂಡಳದಿಂದ ೨ ಬಾರಿ ಅತ್ಯುತ್ತಮ ಸಂಘವೆಂದು ಪ್ರಶಸ್ತಿ ಲಭಿಸಿದೆ. ಬಹು ಉದ್ದೇಶಿತ ಪೇಟ್ರೋಲ್ ಬಂಕ್ ಸ್ಥಾಪನೆ ಗುರಿ ಹೊಂದಿರುವ ಸಂಘಕ್ಕೆ ಸದ್ಯ ತಾಂತ್ರಿಕ ಸಮಸ್ಯೆ ತಲೆದೂರಿದ್ದು, ಜಾಗದ ವಿಚಾರದಲ್ಲಿ ಇರುವ ಸಣ್ಣ ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ಆರಂಭಿಸಲಾಗುವುದು’ ಎಂದು ತಿಳಿಸಿದರು.

ಟಿಎಪಿಸಿಎಂಎಸ್‌ನ ಉಪಾಧ್ಯಕ್ಷ ಎ.ಎಸ್.ಕೃಷ್ಣೇಗೌಡ, ನಿರ್ದೇಶಕರಾದ ವಿ.ಎನ್.ರಾಜಣ್ಣ, ಬಿ.ಎಚ್.ಶಿವಣ್ಣ, ಕೆ.ಎಂ.ನಂಜಪ್ಪ, ಪರಮ ಎನ್.ಕೃಷ್ಣೇಗೌಡ, ರಮೇಶ್ ಕುಂಬಾರಹಳ್ಳಿ, ಎಂ.ಆರ್.ಅನಿಲ್‌ಕುಮಾರ್, ಸಿ.ಜಿ.ಜಗದೀಶ್, ಬಿ.ಕೆ.ಮನು, ಬಿ.ವಿ.ಮುನಿಸ್ವಾಮಿ, ಯೋಗೇಶ್, ಯು.ವಿ.ಮಂಜುಳಾ, ಮುಖಂಡರಾದ ಉತ್ತೇನಹಳ್ಳಿ ಮಂಜೇಗೌಡ, ಹಡೇನಹಳ್ಳಿ ಲೋಕೇಶ್, ಶ್ರವಣಬೆಳಗೊಳ ರಾಘವೇಂದ್ರ, ದೊಡ್ಡೇಗೌಡ, ಪ್ರಸನ್ನ ಕುಮಾರ್, ವಡ್ಡರಹಳ್ಳಿ ಗಣೇಶ್ ಗೌಡ, ಸಾಗರ್ ಗೌಡ , ಸಿಂಹಾದ್ರಿ ಶಿಕ್ಷಣ ಸಂಸ್ಥೆ ಸಿಬ್ಬಂದಿ, ಟಿಎಪಿಸಿಎಂಎಸ್ ಕಾರ್ಯದರ್ಶಿ ಸಿ.ಎಚ್.ಮಂಜುಳಾ, ಸಿಬ್ಬಂದಿ ಸಂಧ್ಯಾ, ಜಯಪಾಲ್, ಬಿ.ಪಿ.ಸತೀಶ್, ಎಸ್.ಎನ್.ಹರೀಶ್, ಜಯಸೂರ್ಯ, ತ್ರಿವೇಣಿ ಇತರರು ಇದ್ದರು.

Share this article