ಹುಬ್ಬಳ್ಳಿ:
ಇಲ್ಲಿನ ಉಣಕಲ್‌ನಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ಚಂದ್ರಮೌಳೇಶ್ವರ ದೇವಸ್ಥಾನದ ಕಾರಿಡಾರ್ ನಿರ್ಮಾಣ ಕುರಿತು ನ. 6ರಂದು ಬೆಳಗ್ಗೆ 11.30ಕ್ಕೆ ಹು-ಧಾ ಮಹಾನಗರ ಪಾಲಿಕೆಯ ಸಭಾ ಭವನದಲ್ಲಿ ಅರ್ಜಿ ಸಮಿತಿ (ಪಿಟಿಷನ್ ಕಮಿಟಿ) ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 12ನೇ ಶತಮಾನದ ಐತಿಹಾಸಿಕ ಚಂದ್ರಮೌಳೇಶ್ವರ ದೇವಸ್ಥಾನಕ್ಕೆ ಕಾಯಕಲ್ಪ ಕಲ್ಪಿಸುವ ಉದೇಶದಿಂದ ಹಲವು ಅಧಿವೇಶನಗಳಲ್ಲಿ ಧ್ವನಿ ಎತ್ತಲಾಗಿತ್ತು. ಬಳಿಕ ಅದನ್ನು ಅರ್ಜಿ ಸಮಿತಿಗೆ ಒಪ್ಪಿಸಲಾಯಿತು. ನಂತರ ಅರ್ಜಿ ಸಮಿತಿ ಅಧ್ಯಕ್ಷ ಹಾಗೂ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಈಗ ದೇವಸ್ಥಾನ ಅಭಿವೃದ್ಧಿಯ ಸಂಬಂಧ ಸಭೆ ನಡೆಯಬೇಕಿದ್ದು, ಆ ಸಭೆ ಹುಬ್ಬಳ್ಳಿಯಲ್ಲೇ ನಡೆಯುತ್ತಿರುವುದು ವಿಶೇಷ ಎಂದರು.
₹25.50 ಕೋಟಿ ವೆಚ್ಚ:ಅಂದಾಜು 1271.24 ಚದರ ಮೀ. ಜಾಗದಲ್ಲಿ ಇರುವ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಭೂಸ್ವಾಧೀನ ಸೇರಿ ₹25.50 ಕೋಟಿ ವೆಚ್ಚವಾಗಲಿದೆ. ದೇವಸ್ಥಾನದ ಸುತ್ತ ಮೂಲಸೌಕರ್ಯ ಕಲ್ಪಿಸಲು ಮೊದಲ ಹಂತದಲ್ಲಿ 7,656.89 ಚ.ಮೀ ಜಾಗ ಭೂಸ್ವಾಧೀನಕ್ಕೆ ಗುರುತಿಸಲಾಗಿದೆ. ಅದರಲ್ಲಿ 53 ಮನೆ, 15 ಖಾಲಿ ಜಾಗ ಸೇರಿ ಒಟ್ಟು 68 ಆಸ್ತಿಗಳಿವೆ. ಭೂಸ್ವಾಧೀನ ಮಾಡಿಕೊಳ್ಳಬೇಕಿರುವ ಜಾಗದ ಮೌಲ್ಯ ಉಪನೋಂದಣಾಧಿಕಾರಿಗಳ ಮಾರ್ಗಸೂಚಿ ದರಪಟ್ಟಿ- 2019ರ ಅನ್ವಯ ₹18 ಕೋಟಿ ಆಗುತ್ತದೆ. ಇನ್ನುಳಿದ ₹7.50 ಕೋಟಿ ವೆಚ್ಚದಲ್ಲಿ ದೇವಸ್ಥಾನ ಆವರಣದಲ್ಲಿ ಕಾಂಪೌಂಡ್, ರಸ್ತೆ, ಕುಡಿಯುವ ನೀರು ಹಾಗೂ ಸುಸಜ್ಜಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಐದು ವಿಷಯಗಳ ಚರ್ಚೆ:ಚಂದ್ರಮೌಳೇಶ್ವರ ದೇವಸ್ಥಾನದ ಅಭಿವೃದ್ಧಿ ಸೇರಿದಂತೆ ಹು-ಧಾ ಮಹಾನಗರದ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ, ಜೈ ಹನುಮಾನ ನಗರದಲ್ಲಿ ಆಶ್ರಯ ಮನೆಗಳ ನಿರ್ಮಾಣ, ರಸ್ತೆಗಳ ಅಗಲೀಕರಣ ಹಾಗೂ ಅತಿಕ್ರಮಣ ತೆರವು, ನಗರದ 6 ಕೆರೆಗಳಿಗೆ ಕಾಯಕಲ್ಪ ಹಾಗೂ ಸಂರಕ್ಷಣೆ ಸೇರಿದಂತೆ ಹುಬ್ಬಳ್ಳಿಗೆ ಸಂಬಂಧಪಟ್ಟ 5 ಪ್ರಮುಖ ವಿಷಯಗಳು ಸಭೆಯಲ್ಲಿ ಚರ್ಚೆಯಾಗಲಿವೆ. ಸಭೆಗೂ ಮೊದಲು ಸಮಿತಿಯ ಸದಸ್ಯರು ಚಂದ್ರಮೌಳೇಶ್ವರ ದೇವಸ್ಥಾನ ಹಾಗೂ ಉಣಕಲ್ಲ ಕೆರೆಗೆ ಭೇಟಿ ನೀಡಲಿದ್ದಾರೆ ಎಂದರು.
ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಕಂದಾಯ, ಪ್ರವಾಸೋದ್ಯಮ, ನಗರಾಭಿವೃದ್ಧಿ ಹಾಗೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಸುದ್ದಿಗೋಷ್ಠಿಯಲ್ಲಿ ಮೇಯರ್ ಜ್ಯೋತಿ ಪಾಟೀಲ, ಉಪ ಮೇಯರ್ ಸಂತೋಷ ಚೌಹಾಣ, ಪಾಲಿಕೆಯ ಸದಸ್ಯ ಉಮೇಶಗೌಡ ಕೌಜಗೇರಿ ಹಾಗೂ ಈಶ್ವರಗೌಡ ಪಾಟೀಲ, ರವಿ ನಾಯಕ ಸೇರಿದಂತೆ ಹಲವರಿದ್ದರು.
ನೃಪತುಂಗ ಬೆಟ್ಟ ಅಭಿವೃದ್ಧಿಗೆ ₹ 5ಕೋಟಿ ಬಿಡುಗಡೆಇಲ್ಲಿನ ನೃಪತುಂಗ ಬೆಟ್ಟದಲ್ಲಿ ರೋಪ್ ವೇ ನಿರ್ಮಾಣ ಮಾಡುವ ಉದ್ದೇಶದಿಂದ ದೆಹಲಿಯಿಂದ ವಿಶೇಷ ತಜ್ಞರನ್ನು ಕರೆಯಿಸಿ ಪರಶೀಲನೆ ಮಾಡಲಾಗಿತ್ತು. ಬೆಟ್ಟದ ಮೇಲಿಂದ ಪತ್ರಕರ್ತರ ನಗರದ ವರೆಗೂ ರೋಪ್ ವೇ ನಿರ್ಮಾಣಕ್ಕೆ ದೆಹಲಿಯಿಂದ ಆಗಮಿಸಿದ್ದ ವಿಶೇಷ ತಜ್ಞರು ಹಸಿರು ನಿಶಾನೆ ತೋರಿದ್ದಾರೆ. ಈ ಸಂಬಂಧ ಬೆಟ್ಟದ ಅಭಿವೃದ್ಧಿಗೆ ₹ 5 ಕೋಟಿ ಅನುದಾನವೂ ಬಿಡುಗಡೆಯಾಗಿದೆ. ಡಿಪಿಆರ್ ಸಿದ್ಧವಾಗುವ ಹಂತದಲ್ಲಿದ್ದು, ರೋಪ್ ವೇ ಜತೆಗೆ ಗ್ಲಾಸ್ ವೇ ವಾಕ್, ಜಿಪ್ ಲೈನ್, ಬೈನಾಕೂಲರ್ ಪಾಯಿಂಟ್, ಚಿಲ್ರನ್ ಪಾರ್ಕ್ ಹಾಗೂ ಮ್ಯೂಜಿಕಲ್ ಫೌಂಟೇನ್ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಮಾಹಿತಿ ನೀಡಿದರು.