ಹೊಸಪೇಟೆ: ವಿಶ್ವವಿಖ್ಯಾತ ಹಂಪಿಯಲ್ಲಿ ಪಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಹಂಪಿ ವಿರೂಪಾಕ್ಷ ಪೀಠಾಧೀಶ್ವರರ ಸಹಿತವಾದ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥೋತ್ಸವ ಅತ್ಯಂತ ವೈಭವದಿಂದ ಶ್ರದ್ಧಾಭಕ್ತಿ ಮತ್ತು ಸಂಡಗರ ಸಂಭ್ರದೊಂದಿಗೆ ಗುರುವಾರ ಸಂಜೆ ನಡೆಯಿತು.ರಥೋತ್ಸವ ಅಂಗವಾಗಿ ವಿರೂಪಾಕ್ಷೇಶ್ವರ ಸ್ವಾಮಿ ಹಾಗೂ ಚಂದ್ರಮೌಳೇಶ್ವರ ಸ್ವಾಮಿ, ಹಂಪಿಯ ಇತರ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ವಿರೂಪಾಕ್ಷೇಶ್ವರ ಸ್ವಾಮಿಗೆ ಕೃಷ್ಣದೇವರಾಯ ಸಮರ್ಪಿಸಿರುವ ನವರತ್ನ ಖಚಿತ ಸುವರ್ಣಮುಖ ಕಿರೀಟದೊಂದಿಗೆ ಅಲಂಕರಿಸಲಾಗಿತ್ತು. ಪಂಪಾದೇವಿಗೆ ಮತ್ತು ತಾಯಿ ಭುವನೇಶ್ವರಿ ದೇವಿಯನ್ನು ಬಂಗಾರದ ಕಿರೀಟಗಳು, ಹಸ್ತಗಳು, ಕರ್ಣ ಕುಂಡಲ, ಇತರ ಬಂಗಾರದ ಆಭರಣಗಳಿಂದ ಅಂಕರಿಸಲಾಗಿತ್ತು.
ಬೆಳಗ್ಗೆ 10-35ಕ್ಕೆಹಂಪಾ ವಿರೂಪಾಕ್ಷೇಶ್ವರಸ್ವಾಮಿ ಹಾಗೂ ವಿರೂಪಾಕ್ಷ ವಿದ್ಯಾರಣ್ಯ ಪೀಠಾಧೀಶ್ವರರ ನವರತ್ನ ಖಚಿತ ಕಿರೀಟದೊಂದಿಗೆ ಅವರ ಆರಾಧ್ಯ ದೈವವಾದ ಚಂದ್ರಮೌಳೇಶ್ವರ ಸ್ವಾಮಿಯ ಬ್ರಹ್ಮರಥೋತ್ಸವದ ಮಡಿ ತೇರು ಎಳೆಯಲಾಯಿತು.
ಸಂಜೆ 4:45ರ ಸುಮಾರಿಗೆ ಲಕ್ಷಾಂತರ ಭಕ್ತರು ಹಾಗೂ ಸಾರ್ವಜನಿಕರು ವಿರೂಪಾಕ್ಷೇಶ್ವರ ಸ್ವಾಮಿಗೆ ಹಾಗೂ ಚಂದ್ರಮೌಳೇಶ್ವರ ಸ್ವಾಮಿ ಜೋಡಿ ರಥ ಎಳೆದರು.ಭಕ್ತರು ಭಕ್ತಿಯಿಂದ ರಥೋತ್ಸವನ್ನು ಎಳೆಯುತಿದ್ದಂತೆ ರಥೋತ್ಸವದ ಗಾಲಿಗಳು ಮುಂದಕ್ಕೆ ಸಾಗುತ್ತಿದ್ದಂತೆ ಸುಮಾರು ಲಕ್ಷಾಂತರ ಜನರು ಸೇರಿದ್ದ ಭಕ್ತರು ವಿರೂಪಾಕ್ಷೇಶ್ವರಸ್ವಾಮಿ ಹಾಗೂ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವಕ್ಕೆ ಸರವೇಗದಲ್ಲಿ ಹೂವು, ಬಾಳೆ ಹಣ್ಣು, ಉತ್ತಿತ್ತಿ ಎಸೆದು ದೇವರಗೆ ಕೈ ಮುಗಿದರು.
ಹಂಪಿ ವಿರೂಪಾಕ್ಷ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು ಹಕ್ಕಬುಕ್ಕರು ನೀಡಿರುವ ಬಂಗಾರದ ಕಿರೀಟ ಧರಿಸಿ, ರಥೋತ್ಸವದಲ್ಲಿ ಭಾಗವಹಿಸಿದ್ದರು. ರಥೋತ್ಸವದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ರಾಜ್ಯದ ಜನರು ಸೇರಿದಂತೆ ಸ್ಥಳೀಯವಾಗಿ ಹಂಪಿ, ಹೊಸಪೇಟೆ ಸೇರಿದಂತೆ ವಿಜಯನಗರ ಜಿಲ್ಲೆಯ ಭಕ್ತರು ಮತ್ತು ಅಕ್ಕಪಕ್ಕದ ಜಿಲ್ಲೆಗಳ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.