ಕಾರವಾರ: ಕಲಬುರಗಿಯಲ್ಲಿ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ನೇರವಾಗಿ ಸಚಿವ ಪ್ರಿಯಾಂಕ ಖರ್ಗೆ ಕಾರಣರಾಗಿದ್ದಾರೆ. ಡೆತ್‌ನೋಟ್‌ನಲ್ಲಿ ಸಚಿವರ ಹೆಸರು ಪ್ರಸ್ತಾಪವಾಗಿದೆ. ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಎಚ್.ಎನ್. ಚಂದ್ರಶೇಖರ ಆಗ್ರಹಿಸಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಶ್ವರಪ್ಪ ಅವರ ಮೇಲೆ ಆರೋಪ ಬಂದಾಗ ಅವರು ರಾಜೀನಾಮೆಗೆ ಆಗ್ರಹಿಸಿದ್ದೀರಿ. ನಿಮಗೆ ಒಂದು ನ್ಯಾಯ, ಈಶ್ವರಪ್ಪ ಅವರಿಗೆ ಒಂದು ನ್ಯಾಯವೇ? ಭ್ರಷ್ಟಾಚಾರ, ಸುಪಾರಿ ಕಿಲ್ಲಿಂಗ್, ಹನಿಟ್ರ್ಯಾಪ್ ಆರೋಪ ಬಂದಿದೆ. ನಿಮ್ಮ ಜತೆ ಇರುವವರೇ ಕೊಲೆಗಾರರು ಎನ್ನುವುದು ಖಚಿತವಾಗಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಒತ್ತಾಯಿಸಿದರು. ಜೈಲಿನಲ್ಲಿ ಸಿ.ಟಿ. ರವಿ ಅವರಿಗೆ ಸುರಕ್ಷತೆ ಇಲ್ಲವೆಂದು ಸುತ್ತಾಡಿಸಿದ್ದಾರೆ. ಠಾಣೆಗೆ ಕರೆದೊಯ್ದರೆ ಅವರ ಮೇಲೆ ದಾಳಿ ಆಗುತ್ತಿತ್ತು ಎಂದು ಮುಖ್ಯಮಂತ್ರಿ ಅವರೇ ಹೇಳಿದ್ದಾರೆ. ಜಗತ್ತಿನಲ್ಲಿ ಸುರಕ್ಷಿತ ಸ್ಥಳವೆಂದು ಎಲ್ಲರೂ ಪೊಲೀಸರ ಬಳಿ ಅಥವಾ ಪೊಲೀಸ್ ಠಾಣೆಗೆ ಹೋಗುತ್ತಾರೆ. ಜಗತ್ತಿನಲ್ಲಿ ಯಾವ ಮುಖ್ಯಮಂತ್ರಿಯೂ ಪೊಲೀಸ್ ಠಾಣೆ ಸುರಕ್ಷಿತವಲ್ಲ ಎಂದು ಹೇಳಿಕೆ ನೀಡಿಲ್ಲ. ಆದರೆ ಕರ್ನಾಟಕದಲ್ಲಿ ಠಾಣೆಯಲ್ಲೇ ರಕ್ಷಣೆ ಇಲ್ಲವೆಂದರೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.ಹಾಸನದಲ್ಲಿ ನೂರಾರು ಹೆಣ್ಣುಮಕ್ಕಳ ಸಿಡಿ ಹಂಚುವಾಗ, ಉಡುಪಿಯಲ್ಲಿ ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ಪ್ರಕರಣದಲ್ಲಿ, ಹಾವೇರಿಯಲ್ಲಿ ಅತ್ಯಾಚಾರವಾದಾಗ ಡಿ.ಕೆ. ಶಿವಕುಮಾರ ಅವರಿಗೆ ಹೆಣ್ಣು, ಸಭ್ಯತೆ, ಸಂಸ್ಕಾರ ನೆನಪಾಗಲಿಲ್ಲವೇ? ಇಂತಹ ಸರ್ಕಾರ ಇದ್ದರೆ ಯಾರೂ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಯಾವುದೇ ಕೆಲಸಕ್ಕೂ, ಅಭಿವೃದ್ಧಿಗೂ ಹಣವಿಲ್ಲ ಎನ್ನುವ ಉತ್ತರ ಮಾತ್ರ ಬರುತ್ತಿದೆ ಎಂದರು. ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ, ನಗರ ಘಟಕದ ಅಧ್ಯಕ್ಷ ನಾಗೇಶ ಕುರುಡೇಕರ, ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಸ್ ಗುನಗಿ, ಮಾಧ್ಯಮ ಸಹ ಸಂಚಾಲಕ ಕಿಶನ ಕಾಂಬ್ಳೆ ಇದ್ದರು.ಕ್ರಿಮ್ಸ್ ನಿರ್ದೇಶಕರಾಗಿ ಡಾ. ಪೂರ್ಣಿಮಾ ಆರ್.ಟಿ. ನೇಮಕ
ನಿರ್ದೇಶಕರಾಗಿದ್ದ ಗಜಾನನ ನಾಯಕ ನಿವೃತ್ತರಾದ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಕ್ರಿಮ್ಸ್‌ನ ಜೀವರಸಾಯನ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ಪೂರ್ಣಿಮಾ ಆರ್.ಟಿ. ಅವರನ್ನು ಹೆಚ್ಚುವರಿ ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಆರ್. ಮಂಜುನಾಥ ಆದೇಶ ಹೊರಡಿಸಿದ್ದಾರೆ.