ಗ್ಯಾರಂಟಿ ಮೂಲಕ ರಾಜ್ಯದಲ್ಲಿ ಬದಲಾವಣೆ ಪರ್ವ

KannadaprabhaNewsNetwork | Published : Mar 14, 2024 2:00 AM

ಸಾರಾಂಶ

ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಜನಧನ್ ಖಾತೆ ತೆರೆಯಿರಿ ₹ ೧೫ ಲಕ್ಷ ಹಾಕುತ್ತೇವೆ ಎಂದು ಹೇಳಿದರು. ಆದರೆ 15 ಪೈಸೆ ಸಹ ಬರಲಿಲ್ಲ

ಗದಗ: ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ರಾಜ್ಯದ 1.10 ಕೋಟಿ ಜನರನ್ನು ಬಡತನ ರೇಖೆಯಿಂದ ಮೆಲೇತ್ತುವ ಕ್ರಾಂತಿಕಾರಕ ಕ್ರಮ ಕೈಗೊಳ್ಳಲಾಗಿದ್ದು, ಇದು ಕಾಂಗ್ರೆಸ್‌ ಸರ್ಕಾರದ ಸಾಧನೆಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಹೇಳಿದರು.

ಪಟ್ಟಣದ ಆರ್.ಎನ್. ದೇಶಪಾಂಡೆ ಅವರ ಜಮೀನನಲ್ಲಿ ಬುಧವಾರ ಗದಗ ತಾಲೂಕಾಡಳಿತದಿಂದ ಬುಧವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿಯವರು ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ಜನಧನ್ ಖಾತೆ ತೆರೆಯಿರಿ ₹ ೧೫ ಲಕ್ಷ ಹಾಕುತ್ತೇವೆ ಎಂದು ಹೇಳಿದರು. ಆದರೆ 15 ಪೈಸೆ ಸಹ ಬರಲಿಲ್ಲ. ಇಲ್ಲ ಸಲ್ಲದ ಆಸೆಯೊಡ್ಡಿ ಅಧಿಕಾರಕ್ಕೆ ಬಂದು ಬಡ ಜನತೆಗೆ ಶ್ರೀಸಾಮಾನ್ಯರಿಗೆ ಮೋಸ ಮಾಡಿ ಚುನಾವಣೆ ಸಂದರ್ಭದಲ್ಲಿ ಯಾವ ನಾಯಕರು ಭರವಸೆ ನೀಡಿದರೂ ನಂಬಲಾರದಂತಹ ವಾತಾವರಣ ಸೃಷ್ಟಿ ಮಾಡಿದರು. ಅಂತಹ ವಾತಾವರಣದಲ್ಲೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಮೇಲೆ ಭರವಸೆ ಇಟ್ಟು ದೊಡ್ಡ ಮಟ್ಟದಲ್ಲಿ ಆರ್ಶೀವಾದ ಮಾಡಿದ್ದಾರೆ ಎಂದರು.

ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನಡೆದುಕೊಂಡಿದ್ದಾರೆ. ಅಧಿಕಾರ ಸ್ವೀಕರಿಸಿದ ತಿಂಗಳೊಳಗೆ ಶಕ್ತಿ ಯೋಜನೆಗೆ ಚಾಲನೆ ನೀಡಿ ಹಂತ ಹಂತವಾಗಿ ಪಂಚ್ ಯೋಜನೆಗಳನ್ನು ಅನುಷ್ಠಾನ ಮಾಡುವ ಮೂಲಕ ರಾಜ್ಯದ 1.10ಕೋಟಿ ಬಡತನ ರೇಖೆಯಿಂದ ಮೇಲೆತ್ತುವ ಕ್ರಾಂತಿಕಾರಕ ಕೆಲಸ ಕಾಂಗ್ರೆಸ್ ಮಾಡಿದೆ. ಸಾಮಾಜಿಕ ಹಿನ್ನೆಲೆಯಿಂದ ಬಂದಂತಹ ನಾವು ಪಂಚ ಯೋಜನೆಗಳ ಮೂಲಕ ತಿಂಗಳಿಗೆ ಪ್ರತಿ ಕುಟುಂಬಕ್ಕೆ ₹ 5 ಸಾವಿರ ನೀಡಲಾಗುತ್ತಿದೆ. ಯಾವುದೇ ದಲ್ಲಾಳಿಗಳ ಹಾವಳಿ ಇಲ್ಲದೆ ಭ್ರಷ್ಟಾಚಾರವಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ಈ ಪಂಚ್ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿದ್ದೇವೆ ಎಂದರು.

ಇಂದು ಮುಳಗುಂದ ಪಟ್ಟಣದಲ್ಲಿ ೮ ಅಭಿವೃದ್ಧಿ ಯೋಜನೆ ಅನುಷ್ಠಾನ ಮಾಡಿದ್ದೇವೆ. ಈ ಸಮಾವೇಶದಲ್ಲಿ ದೊಡ್ಡ ಮಟ್ಟದಲ್ಲಿ ಮಹಿಳೆಯರು ಸೇರಿದ್ದು ಸಂತಸ ತಂದಿದೆ. ಸರ್ಕಾರದ ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಶಕ್ತಿ ಬಂದಿದೆ. ಮಹಿಳೆಯರಲ್ಲಿ ಮನೆ ನಡೆಸಿಕೊಂಡು ಹೋಗುವ ಆತ್ಮವಿಶ್ವಾಸ ಮೂಡಿದ್ದು ಗ್ಯಾರಂಟಿ ಯೋಜನೆಯಿಂದ ಎಂದರು.

ಗ್ಯಾರಂಟಿ ಯೋಜನೆಯಿಂದ ಸರ್ಕಾರ ದಿವಾಳಿಯಾಗುತ್ತದೆ ಎಂದು ಹಲವರು ಬೊಬ್ಬೆ ಹೊಡೆದರು. ಲೋಕಸಭಾ ಚುನಾವಣೆ ನಂತರ ಗ್ಯಾರಂಟಿ ನಿಲ್ಲುತ್ತದೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಬೇಕಾದ ಅನುದಾನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಮೀಸಲಿಟ್ಟಿದ್ದಾರೆ ಎಂದರು.

ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಗಗನಕ್ಕೇರಿ ಸಾಮಾನ್ಯ ಜನರಿಗೆ ಜೀವನ ನಡೆಸುವದು ಕಷ್ಟವಾಗಿತ್ತು. ಅದನ್ನು ಅರಿತ ಕಾಂಗ್ರೆಸ್ ವರಿಷ್ಠರು ಈ ಬಗ್ಗೆ ಯೋಚಿಸಿ, ಜನರು ನಮಗೆ ವಿಧಾನಸಭಾ ಚುನಾವಣೆಯಲ್ಲಿ ಆಶೀರ್ವದಿಸಿದರೆ ಗ್ಯಾರಂಟಿ ಯೋಜನೆ ನೀಡೋಣ ಎಂದು ಗ್ಯಾರಂಟಿ ಕಾರ್ಡಗಳನ್ನು ಪಕ್ಷದ ಮುಖಂಡರು, ಯುವಕರು ಮನೆ ಮನೆಗೆ ತೆರಳಿ ನೀಡಿ ಭರವಸೆ ಕೊಟ್ಟಿದ್ದರು. ಅದರಂತೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಸಚಿವ ಎಚ್.ಕೆ. ಪಾಟೀಲರು ಸೇರಿದಂತೆ ಸಂಪುಟ ಸದಸ್ಯರೆಲ್ಲ ಸರ್ಕಾರ ರಚನೆಯಾದ ತಿಂಗಳೊಳಗೆ ಪಂಚ್ ಗ್ಯಾರಂಟಿ ಯೋಜನೆ ಜಾರಿಗೆ ತಂದು ರಾಜ್ಯದ ಜನತೆಯ ವಿಶ್ವಾಸ ಉಳಿಸಿಕೊಂಡು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.

ಮತ್ತೇ ನಮಗೆ ನಿಮ್ಮ ಆಶೀರ್ವಾದ ಬೇಕು, ಈ ಎಲ್ಲ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಊಹಾಪೋಹಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಸಿಎಂ ಸಿದ್ದರಾಮಯ್ಯ ಬಡವರ ಬಗ್ಗೆ ವಿಶೇಷ ಕಾಳಜಿವುಳ್ಳವರಾಗಿದ್ದಾರೆ. ಗ್ಯಾರಂಟಿ ಯೋಜನೆಗಳು ನಿರಂತರವಾಗಿ ನಡೆಯಲಿವೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಡಿ.ಆರ್. ಪಾಟೀಲ, ಎಸ್.ಎಂ.ನೀಲಗುಂದ, ಜಿ.ವಿ. ಬಳಗಾನೂರ, ಎಂ.ಡಿ. ಬಟ್ಟೂರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ವಿ. ಸುಂಕಾಪುರ, ಶಹರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಅಸೂಟಿ, ಬಸವರಾಜ ಕಡೆಮನಿ, ನೀಲಮ್ಮ ಭೋಳನವರ, ಹನುಮಂತಪ್ಪ ಪೂಜಾರ, ಶಕುಂತಲಾ ಅಕ್ಕಿ, ಅಶೋಕ್ ಮಂದಾಲಿ, ಶ್ರೀನಿವಾಸ ಹುಯಿಲಗೋಳ ಹಾಗೂ ಪಪಂ ಸದಸ್ಯರು, ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ತಾಪಂ ಇಒ ಡಾ. ಹೀರಲಾಲ ಜಿನಗಿ, ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಫಲಾನುಭವಿಗಳು ಇದ್ದರು.

Share this article