ಮನುಷ್ಯನ ಬದುಕಿನಲ್ಲಿ ಬದಲಾವಣೆ ಅಗತ್ಯ: ಡಾ. ಗುರುಲಿಂಗ ಸ್ವಾಮೀಜಿ

KannadaprabhaNewsNetwork | Published : Jan 26, 2024 1:48 AM

ಸಾರಾಂಶ

ಮನುಷ್ಯನಲ್ಲಿ ಬದಲಾವಣೆ ಅಗತ್ಯವಿದೆ. ಬದುಕಿನಲ್ಲಿ ಹೊಸತನದ ಗಾಳಿ ಬೀಸಬೇಕು. ಮನುಷ್ಯನ ಜೀವನ ನಿಂತ ನೀರಾಗಬಾರದು. ನಿಂತ ನೀರು ದುರ್ನಾತ ಬೀರಿದರೆ ಹರಿಯುವ ನೀರು ಸುವಾಸನೆ ಬೀರುತ್ತಿದೆ. ಪ್ರತಿ ಮಾನವನ ಬದುಕು ಸಹ ಇದಕ್ಕೆ ಹೊರತಲ್ಲ ಎಂದು ಹಾವೇರಿ ಜಿಲ್ಲೆ ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮೀಜಿ ಹೇಳಿದರು.

ಶಿರಹಟ್ಟಿ: ಮನುಷ್ಯನಲ್ಲಿ ಬದಲಾವಣೆ ಅಗತ್ಯವಿದೆ. ಬದುಕಿನಲ್ಲಿ ಹೊಸತನದ ಗಾಳಿ ಬೀಸಬೇಕು. ಮನುಷ್ಯನ ಜೀವನ ನಿಂತ ನೀರಾಗಬಾರದು. ನಿಂತ ನೀರು ದುರ್ನಾತ ಬೀರಿದರೆ ಹರಿಯುವ ನೀರು ಸುವಾಸನೆ ಬೀರುತ್ತಿದೆ. ಪ್ರತಿ ಮಾನವನ ಬದುಕು ಸಹ ಇದಕ್ಕೆ ಹೊರತಲ್ಲ ಎಂದು ಹಾವೇರಿ ಜಿಲ್ಲೆ ಅಗಡಿ ಅಕ್ಕಿಮಠದ ಡಾ. ಗುರುಲಿಂಗ ಸ್ವಾಮೀಜಿ ಹೇಳಿದರು.

ಬುಧವಾರ ಸಂಜೆ ಪಟ್ಟಣದ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಜರುಗಿದ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು. ಜಾತ್ರೆಗಳು ಮೋಜು ಮಸ್ತಿಗಳ ಕಾರ್ಯಕ್ರಮಕ್ಕೆ ಸೀಮಿತವಾಗಬಾರದು. ಧರ್ಮದ ತಿರುಳನ್ನು ಅರಿಯುವ ಕಾರ್ಯ ಆಗಬೇಕು. ಅನಾವಶ್ಯಕ ಕಾರ್ಯಗಳಿಗೆ ಅವಕಾಶ ನೀಡುವ ಬದಲಾಗಿ ಸೈದ್ಧಾಂತಿಕ ವಿಚಾರ ಸಿದ್ಧಾತಗಳ ನೆಲೆಗಟ್ಟಿನಲ್ಲಿ ಧರ್ಮಸಭೆ ಜರುಗಬೇಕು. ಇದು ಪ್ರಸ್ತುತ ಸಂದರ್ಭದಲ್ಲಿ ಅತಿ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಅದ್ಬುತ ಜಾತ್ರೆ ಮುಖ್ಯವಲ್ಲ. ಆದರ್ಶ ಜಾತ್ರೆ ಅಗತ್ಯವಿದೆ. ಧರ್ಮಚಿಂತಕರು, ಸಾಧುಗಳು ಸತ್ಪುರುಷರ ಸಂದೇಶಗಳನ್ನು ಅರಿತುಕೊಳ್ಳಬೇಕು. ಧರ್ಮಸಭೆಗಳು ಸಮಾಜದಲ್ಲಿ ನಡೆಯುವ ವಿಕೃತ ಮಾರ್ಗ ಹಾಗೂ ಅನಾಚಾರಗಳನ್ನು ತೊಡಗಿಸುವ ನಿಟ್ಟಿನಲ್ಲಿ ಹೋರಾಡಬೇಕು. ಜೊತೆಗೆ ಪ್ರಮುಖವಾಗಿ ಮಾನವೀಯ ಮೌಲ್ಯವನ್ನು ಬಿತ್ತರಿಸುವ ಕಾರ್ಯ ಎಲ್ಲರಿಂದಾಗಬೇಕು ಎಂದು ಅಭಿಪ್ರಾಯಪಟ್ಟರು.

ಮಕ್ಕಳಿಗೆ ವಿದ್ಯೆ ಜೊತೆಗೆ ಸಂಸ್ಕಾರ ಕಲಿಸುವ ಅಗತ್ಯವಿದೆ. ಆರಂಭದ ಹಂತದಲ್ಲಿ ಶಿಕ್ಷಣ ಮತ್ತು ಸಂಸ್ಕಾರ ನೀಡದೇ ಇದ್ದರೆ ಮುಂದಿನ ದಿನಮಾನಗಳಲ್ಲಿ ಅಪಾಯ ನಿಶ್ಚಿತ ಎಂಬ ಅಂಶಗಳನ್ನು ನಾವೆಲ್ಲರೂ ಅರಿಯಬೇಕು. ನಮ್ಮ ದೇಶದ ಮೂಲ ತಳಹದಿಯೇ ಸಂಸ್ಕಾರ. ಆದ್ದರಿಂದ ದೃಷ್ಯಮಾಧ್ಯಮ ಮತ್ತು ಮೊಬೈಲ್‌ಗಳಿಂದ ಮಕ್ಕಳನ್ನು ದೂರವಿಟ್ಟು ಸನ್ಮಾರ್ಗ ಮತ್ತು ಸನ್ನಡತೆಯನ್ನು ಕಲಿಸುವ ಅಗತ್ಯವಿದೆ ಎಂದು ಹೇಳಿದರು.

ವರವಿ ಮೌನೇಶ್ವರ ಮಠದ ಮೌನೇಶ್ವರ ಶ್ರೀ ಮಾತನಾಡಿ, ನಮ್ಮ ದೇಶದಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಹಾಗೂ ವಿಶಿಷ್ಟ ಗೌರವವಿದೆ. ಬೇರೆ ಯಾವುದೇ ದೇಶದಲ್ಲಿ ಮಹಿಳೆಯರಿಗೆ ಅಂತಹ ಸ್ಥಾನ ಇಲ್ಲ ಎಂಬುದು ನಾವೆಲ್ಲರೂ ಅವಲೋಕಿಸಬೇಕಾದ ವಿಚಾರ. ಮಹಿಳೆಯರಿಗೆ ಪ್ರಾಧಾನ್ಯತೆ ಕೊಡುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕರ್ತವ್ಯನಿರ್ವಹಿಸಬೇಕು ಎಂದು ಹೇಳಿದರು.

ಹಬ್ಬ-ಹರಿದಿನಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿದ್ದು, ಇವುಗಳಿಂದ ಧರ್ಮಾಚರಣೆ ಮತ್ತು ಜ್ಞಾನಶಕ್ತಿಗೆ ಅವಕಾಶ ನೀಡುತ್ತವೆ. ಜೀವನದ ಸತ್ಯ, ಶಕ್ತಿ, ಆನಂದಗಳ ರಹಸ್ಯ ಆಧ್ಯಾತ್ಮದಿಂದಲೇ ಅರಿವಾಗುವುದು. ಆಧ್ಯಾತ್ಮದ ಜ್ಞಾನ ತಿಳಿದರೆ ನಿಜವಾದ ಭೌತಿಕ ವಿಷಯಗಳಿಂದ ಸುಖ ಶಾಂತಿ ಸಿಗುವುದೆಂದು ಹೇಳಿದರು.

ಯುವಕರು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ತೊಡಗಿಕೊಂಡು ಸಂಸ್ಕಾರಯುತ ಸಮಾಜ ನಿರ್ಮಾಣ ಮಾಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ಪಾಲಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವ ಜೊತೆ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.

ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ಗಣಪತರಾವ ಶೇಳಕೆ, ಚಂದ್ರಕಾಂತ ನೂರಶೆಟ್ಟರ, ಎನ್.ಆರ್. ಕುಲಕರ್ಣಿ, ಬಸವರಾಜ ತುಳಿ, ಬಸವರಾಜ ಹೊಸೂರ, ಬಸವಣ್ಣೆಪ್ಪ ತುಳಿ, ಎಚ್.ಎಂ. ದೇವಗಿರಿ, ಯಲ್ಲಪ್ಪಗೌಡ ಅಣ್ಣಿಗೇರಿ, ಸಿದ್ದನಗೌಡ ಪಾಟೀಲ, ಶಂಕ್ರಪ್ಪ ಕಾಳಗಿ ಮತ್ತಿತರರು ಉಪಸ್ಥಿತರಿದ್ದರು

ನಿವೃತ್ತ ಶಿಕ್ಷಕ ಕೆ.ಎ. ಬಳಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ. ಹೆಸರೂರ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಸುಧಾ ಹುಚ್ಚಣ್ಣವರ ವಂದಿಸಿದರು.

Share this article