-ಸಚಿವ ಶರಣಬಸಪ್ಪಗೌಡ ದರ್ಶನಪುರ ಸಲಹೆ । ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ ಯಾದಗಿರಿನಾಡಿನಲ್ಲಿ ವೀರಶೈವ ಲಿಂಗಾಯತ ಸಮಾಜಕ್ಕೆ ಭವ್ಯ ಇತಿಹಾಸವಿದೆ, ಪ್ರಸಕ್ತ ದಿನಗಳಲ್ಲಿ ಸಮಾಜದಲ್ಲಿರುವ ಎಲ್ಲಾ ಒಳಪಂಗಡಗಳ ಜನರು ಎಲ್ಲಾ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ಅದರಿಂದ ಮಾತ್ರ ಸಮಾಜ ಸದೃಢ ಸಂಘಟನೆಯಾಗಿ, ಬದಲಾವಣೆ ಕಾಣಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಸಲಹೆ ನೀಡಿದರು.
ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಭಾ ಜಿಲ್ಲಾ ಹಾಗೂ ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ನಮ್ಮ ಸಮಾಜದ ಜನರು ಕೃಷಿಯನ್ನೆ ಅವಲಂಬಿಸಿ ಜೀವನ ಸಾಗಿಸುತ್ತಿದ್ದಾರೆ. ಇಂದು ನಾವು ಎಲ್ಲಾ ಕ್ಷೇತ್ರಗಳಲ್ಲಿ ಪೈಪೋಟಿ ಕಾಣುತ್ತಿದ್ದೇವೆ. ನಮ್ಮ ಮಕ್ಕಳು ಉತ್ತಮ ಶಿಕ್ಷಣ ಪಡೆದು ಉದ್ಯೋಗದಲ್ಲಿ ಸ್ವಾವಲಂಬನೆ ಬದುಕು ಕಟ್ಟಿಕೊಳ್ಳುವುದು ಅವಶ್ಯಕ. ಈ ನಿಟ್ಟಿನಲ್ಲಿ ಎಲ್ಲರೂ ಗಂಭೀರ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಜಿಲ್ಲಾ ಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿ ನಿರ್ಮಾಣ ಮಾಡುವ ಕಾರ್ಯಕ್ಕೆ ಮೊದಲು ಮುಖಂಡರು ಭೂಮಿ ಗುರುತಿಸಬೇಕು. ಸರ್ಕಾರದಿಂದ ನಾನು ಮಂಜೂರು ಮಾಡಿಸುತ್ತೇನೆ. ನಂತರ ಇತರ ಯೋಜನೆಗಳು ಆರಂಭಗೊಳ್ಳಲು ಅನುಕೂಲವಾಗುತ್ತದೆ ಎಂದರು.ನಗರದಲ್ಲಿ ಬಸವೇಶ್ವರ ಪುತ್ಥಳಿ ಸ್ಥಾಪನೆ ಮಾಡಬೇಕೆಂಬುದು ಎಲ್ಲರ ಆಶಯವಾಗಿದೆ. ಅದಕ್ಕೆ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ಸ್ಥಳೀಯ ಶಾಸಕರು ಹಾಗೂ ಮುಖಂಡರು ಈಗಾಗಲೇ ಚರ್ಚಿಸಿದ್ದಾರೆ. ಅದು ಕೂಡ ನೆರವೇರಲಿದೆ. ಸಮಾಜದಲ್ಲಿ ಮಾನವ ಸಂಪನ್ಮೂಲಕ್ಕೆ ಏನು ಕೊರತೆಯಿಲ್ಲ. ನೀವು ಎಲ್ಲರ ಸಹಕಾರ ಪಡೆದು ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ, ಎಲ್ಲರ ಮೆಚ್ಚುಗೆ ಗಳಿಸುವಂತೆ ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ, ನಿವೃತ್ತ ಐಪಿಎಸ್ ಅಧಿಕಾರಿ ಡಾ. ಶಂಕರ ಬಿದರಿ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಾಭಾದ ಅಧ್ಯಕ್ಷರಾದ ಮೇಲೆ ಸಮಾಜದಲ್ಲಿ ಹೊಸ ಉತ್ಸಾಹ ಮೂಡಿದೆ. ಇದು ಬರುವ ದಿನಗಳಲ್ಲಿ ಇನ್ನೂ ಹೆಚ್ಚು ವೇಗ ಪಡೆದು ಸಮಾಜಕ್ಕೆ ಹೊಸ ಕಾಯಕಲ್ಪ ನೀಡುವ ಕಾರ್ಯಗಳು ನಡೆಯಲಿವೆ ಎಂದರು.ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಮತ್ತು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರು ಮಾತನಾಡಿ, ಈಗಾಗಲೇ ರಾಜ್ಯ ಸರ್ಕಾರ ಮಾಡಿಸಿರುವ ಜನಗಣತಿಯಲ್ಲಿ ಲೋಪದೋಷಗಳಿವೆ. ಆ ತಂಡ ಸರಿಯಾಗಿ ಕೆಲಸ ಮಾಡಿಲ್ಲ. ಪರಿಣಾಮ ಸಮಾಜದ ಎಲ್ಲಾ ಪಕ್ಷದ ಶಾಸಕರು ಹಾಗೂ ಮುಖಂಡರು ಆಕ್ಷೇಪಿಸಿದ್ದಾರೆ ಎಂದು ತಿಳಿಸಿದರು.
ಕಲಬುರಗಿಯಲ್ಲಿ ಉಚಿತ ಮಹಿಳಾ ವಸತಿ ನಿಲಯ ನಿರ್ಮಿಸಲಾಗಿದೆ. ಇದರಿಂದ ಸಾಕಷ್ಟು ರೈತ ಕುಟುಂಬದ ಮಕ್ಕಳಿಗೆ ಉನ್ನತ ಅಭ್ಯಾಸ ದೊರಕಿಸಿಕೊಡಲು ಅನುಕೂಲವಾಗಿದೆ. ನಾವು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು ಅಗತ್ಯ. ಅದರಿಂದ ಮಾತ್ರ ಸರ್ವಾಂಗೀಣ ಪರಿವರ್ತನೆ ಸಾಧಿಸಬಹುದು ಎಂದರು.ಬಸವಣ್ಣನವರು ಬಸವಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸುವೆ ಮೂಲಕ ಪ್ರಜಾಪ್ರಭುತ್ವದ ಪರಿಕಲ್ಪನೆ ನೀಡಿದ ಪರಿಣಾಮ ನಾವು ಜನರ ಆಶೀರ್ವಾದದಿಂದ ವಿಧಾನಸೌಧದಲ್ಲಿ ನಿಮ್ಮ ಪರ ಧ್ವನಿ ಎತ್ತುತ್ತಿದ್ದೇವೆ ಎಂದರು.
ಅಬ್ಬೆತುಮಕೂರ ವಿಶ್ವಾರಾಧ್ಯ ಸಿದ್ಧಸಂಸ್ಥಾನ ಮಠದ ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮೀಜಿ, ಗುರುಮಠಕಲ್ ಖಾಸಾಮಠದ ಪೀಠದ ಶಾಂತವೀರ ಮಹಾಸ್ವಾಮೀಜಿ ಹಾಗೂ ಹೆಡಗಿಮದ್ರಾ ಶಾಂತಶಿವಯೋಗಿಶ್ವರ ಮಠದ ಪೀಠಾಧಿಪತಿ ಶಾಂತ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿನಾಯಕ ಮಾಲಿ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಚೆನ್ನಪ್ಪಗೌಡ ಮೋಸಂಬಿ, ಹಿರಿಯ ಮುಖಂಡರಾದ ಶರಣಪ್ಪಗೌಡ ಮಲ್ಹಾರ, ಎಸ್.ಬಿ. ಪಾಟೀಲ್, ರಾಚನಗೌಡ ಮುದ್ನಾಳ, ಪಾರ್ವತಿ ಕರಡ್ಡಿ ಮಲ್ಹಾರ, ಬಸವರಾಜಪ್ಪ ಜೈನ್, ಸಿದ್ಧಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ, ಆರ್. ಮಹಾದೇವಪ್ಪ ಅಬ್ಬೆತುಮಕೂರ, ಸೋಮಶೇಖರ ಮಣ್ಣೂರು, ಶಹಾಪುರ ತಾಲೂಕಾಧ್ಯಕ್ಷ ಸಿದ್ದಣ್ಣ ಆರಬೋಳ, ಸುರಪುರ ತಾಲೂಕಾಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ, ಯಾದಗಿರಿ ತಾಲೂಕಾಧ್ಯಕ್ಷ ರಾಜಶೇಖರ ಪಾಟೀಲ್ ಚಾಮನಳ್ಳಿ, ಸುರೇಶ ಜಾಕಾ ಮುಖಂಡರಿದ್ದರು.
ವೀರಶೈವ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ಸಿದ್ದರಾಜರೆಡ್ಡಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮರಯ್ಯಸ್ವಾಮಿ ಜಾಲಿಬೆಂಚಿ ನಿರೂಪಿಸಿ, ವಂದಿಸಿದರು.------
26ವೈಡಿಆರ್8: ಯಾದಗಿರಿ ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.-----
26ವೈಡಿಆರ್9: ಯಾದಗಿರಿ ನಗರದ ಸಪ್ತಪದಿ ಕಲ್ಯಾಣ ಮಂಟಪದಲ್ಲಿ ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿದರು.