ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿ ಆದ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ : ಶಾಸಕ ಎಚ್.ಸಿ.ಬಾಲಕೃಷ್ಣ

KannadaprabhaNewsNetwork |  
Published : Jan 19, 2025, 02:18 AM ISTUpdated : Jan 19, 2025, 01:07 PM IST
Dk Shivakumar

ಸಾರಾಂಶ

 ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿ ಆದ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ. ಪಕ್ಷದ ಹೈ ಕಮಾಂಡ್ ಶಕ್ತಿಯುತವಾಗಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

ರಾಮನಗರ: ಉಪಮುಖ್ಯಮಂತ್ರಿಗಳು ಮುಖ್ಯಮಂತ್ರಿ ಆದ ನಂತರ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಲಿದೆ. ಪಕ್ಷದ ಹೈ ಕಮಾಂಡ್ ಶಕ್ತಿಯುತವಾಗಿದ್ದು, ಸೂಕ್ತ ಸಮಯದಲ್ಲಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಬಿಡದಿಯಲ್ಲಿ ನಡೆದ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 80ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಮ್ಮದು ಬೇರೆ ಪಕ್ಷಗಳ ರೀತಿ ಕುಟುಂಬದ ಪಕ್ಷ ಅಲ್ಲ. ನಾಯಕತ್ವ ಬದಲಾವಣೆ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಷಯ ಮಾಧ್ಯಮಗಳ ಊಹಾಪೋಹಗಳಷ್ಟೇ. ನಮ್ಮಲ್ಲಿ ಸಾಕಷ್ಟು ಜನಕ್ಕೆ ಸಿಎಂ ಆಗುವ ಅರ್ಹತೆ ಇದೆ. ಐದಾರು ಬಾರಿ ಗೆದ್ದಿರುವ ಸಾಕಷ್ಟು ಜನ ಹಿರಿಯರಿದ್ದಾರೆ, ಪಕ್ಷ ಅಧಿಕಾರದಲ್ಲಿದ್ದಾಗ ನಾಯಕತ್ವ ಪೈಪೋಟಿ ಇರುತ್ತೆ. ಆದರೆ ಇದನ್ನ ನಿಯಂತ್ರಣ ಮಾಡೋದಕ್ಕೆ ಹೈಕಮಾಂಡ್‌ಗೆ ಶಕ್ತಿ ಇದೆ ಎಂದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗಿರುವ ಮಾಹಿತಿ ಪ್ರಕಾರ ಬಜೆಟ್ ಬಳಿಕ ಸಂಪುಟ ವಿಸ್ತರಣೆ ಆಗಬಹುದು. ಆ ಸಂದರ್ಭದಲ್ಲಿ ನಮ್ಮ ಹಿರಿತನವನ್ನು ಕನ್ಸಿಡರ್ ಮಾಡ್ತಾರೆ ಅನ್ಕೊಂಡಿದ್ದೀನಿ. ಸಿಎಂ, ಡಿಸಿಎಂ ಅವರು ನನ್ನನ್ನ ಪರಿಗಣಿಸುವ ವಿಶ್ವಾಸ ಇದೆ. ಆದರೆ ನಾವು ಎಷ್ಟೇ ಮಾತನಾಡಿದರೂ ಹೈಕಮಾಂಡ್ ಅಂತಿಮ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಪಕ್ಷಕ್ಕೆ ಅನಾಹುತ ಆಗುವಂತಹ ಯಾವುದೇ ಚರ್ಚೆ ಮಾಡದಂತೆ ಹೈಕಮಾಂಡ್ ಸೂಚಿಸಿದೆ. ಏನಾದ್ರೂ ಗೊಂದಲ ಇದ್ದರೆ ಹೈಕಮಾಂಡ್ ಗಮನಕ್ಕೆ ತರಲು ಹೇಳಿದೆ. ಒಂದಿಬ್ಬರು ಸಚಿವರು ಮಾತ್ರ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೆ ಯಾವ ಸಚಿವರು ಹೇಳಿಕೆಗಳನ್ನು ಕೊಡುತ್ತಿಲ್ಲ. ಕೆಲವರು ಅವರ ವೈಯಕ್ತಿಕ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಅಂತಿಮವಾಗಿ ಹೈಕಮಾಂಡ್ ಗೊಂದಲ ಬಗೆಹರಿಸಲಿದ್ದಾರೆ ಎಂದು ತಿಳಿಸಿದರು.

ಏಕ ಚಕ್ರಾಧಿಪತಿ ಎನ್ನುವ ಬಿಜೆಪಿಯಲ್ಲೂ ಇಂತಹ ಗೊಂದಲ ಇದೆ. ರಾಷ್ಟ್ರೀಯ ಪಕ್ಷ ಅಂದಮೇಲೆ ಇದೆಲ್ಲ ಸರ್ವೇ ಸಾಮಾನ್ಯ. ಡಿನ್ನರ್ ಪಾರ್ಟಿ ಮಾಡೋದು ತಪ್ಪಲ್ಲ, ಅವರವರ ವೈಯಕ್ತಿಕ. ನಮ್ಮ ಪಕ್ಷ ವಾಕ್ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವಂತಹ ಪಕ್ಷ ಅಲ್ಲ ಎಂದರು. ಇಡಿಯಿಂದ ಮುಡಾ ಆಸ್ತಿ ಮುಟ್ಟುಗೋಲು ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಮುಖ್ಯಮಂತ್ರಿಗಳು ಪ್ರಾಮಾಣಿಕರಿದ್ದಾರೆ. ಹಣಕಾಸಿನ ವ್ಯವಹಾರ ಇದ್ದಾಗ ಮಾತ್ರ ಇಡಿ ಎಂಟ್ರಿ ಆಗಬೇಕು. ತನಿಖೆ ಮಾಡಬೇಕು. ಮುಡಾ ವಿಚಾರದಲ್ಲಿ ಇಡಿ ತನಿಖೆ ಅಗತ್ಯ ಇರಲಿಲ್ಲ. ಆದ್ರೆ ಕೇಂದ್ರ ಸರ್ಕಾರ ನಮ್ಮ ಮುಖ್ಯಮಂತ್ರಿಗಳನ್ನ ಅಣಿಯಲು ಇಡಿ ಮೇಲೆ ಒತ್ತಡ ಹಾಕ್ತಿದೆ. ಇದರಲ್ಲಿ ಬಿಜೆಪಿ ಸಫಲ ಆಗಲ್ಲ ಎಂದು ಬಾಲಕೃಷ್ಣ ಹೇಳಿದರು.

ಬಾಲಗಂಗಾಧರನಾಥ ಸ್ವಾಮೀಜಿ 80ನೇ ಜಯಂತ್ಯುತ್ಸವ

ರಾಮನಗರ: ಬಿಡದಿ ಬಿಜಿಎಸ್ ಸೇವಾ ಸಮಿತಿ ವತಿಯಿಂದ ಭೈರವೈಕ್ಯ ಡಾ.ಬಾಲಗಂಗಾಧರನಾಥ ಸ್ವಾಮೀಜಿಯ 12ನೇ ವರ್ಷದ ಸಂಸ್ಮರಣಾ ಮಹೋತ್ಸವ ಹಾಗೂ 80ನೇ ಜಯಂತ್ಯುತ್ಸವ ಕಾರ್ಯಕ್ರಮ ಬಿಡದಿ ಬಿಜಿಎಸ್ ವೃತ್ತದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ಬಾಲಗಂಗಾಧರನಾಥ ಸ್ವಾಮಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ ಜಯಂತ್ಯುತ್ಸವ ಬಿಡದಿಯ ಬಿಜಿಎಸ್ ಸೇವಾ ಸಮಿತಿ ಹಲವು ವರ್ಷಗಳಿಂದ ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಅನ್ನಸಂತರ್ಪಣೆ, ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಶಾಸಕ ಬಾಲಕೃಷ್ಣ ಹೇಳಿದರು.

ಬಿಜಿಎಸ್ ಸೇವಾ ಸಮಿತಿ ಅಧ್ಯಕ್ಷ ಸಿ.ಉಮೇಶ್ ಮಾತನಾಡಿ, ಡಾ.ಬಾಲಗಂಗಾಧರನಾಥ ಸ್ವಾಮೀಜಿ ನಮ್ಮ ಜಿಲ್ಲೆಯ ಬಿಡದಿ ಬಾನಂದೂರು ಗ್ರಾಮದ ಮಣ್ಣಿನಲ್ಲಿ ಜನಿಸಿದ ಮಹಾ ಪುರುಷರಾಗಿದ್ದು, ಸ್ವಾಮೀಜಿ ಅವರ ಸ್ಮರಣೆ ಕಾರ್ಯವನ್ನು ಕಳೆದ 11 ವರ್ಷಗಳಿಂದ ಯಶಸ್ವಿಯಾಗಿ ಮಾಡುತ್ತಿದ್ದು ಸ್ಮರಿಸುತ್ತಿದ್ದೇವೆ ಎಂದರು.

ಆದಿಚುಂಚನಗಿರಿಯನ್ನು ಚಿನ್ನದ ಗಿರಿಯನ್ನಾಗಿಸಿ ವಿಶ್ವಮಟ್ಟದಲ್ಲಿ ಗುರ್ತಿಸುವಂತೆ ಮಾಡಿದ ಮಹಾನ್ ಪುರುಷರಾಗಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಅಂದರಿಗೆ ಬೆಳಕಾಗಿ, ಅನ್ನದಾಸೋಹ, ಪರಿಸರ, ಕ್ಷೇತ್ರಗಳಿಗೆ ಅವರು ನೀಡಿರುವ ಕೊಡುಗೆಗಳು ಅಪಾರವಾಗಿದೆ. ಅಂತಹ ಮಹಾನ್ ಪುರುಷರ ಸ್ಮರಣೆಯನ್ನು ಮಾಡುವ ಅವಕಾಶ ನಮಗೆ ಸಿಕ್ಕಿರುವುದು ನಮ್ಮೆಲ್ಲರ ಪುಣ್ಯ ಎಂದು ಹೇಳಿದರು.

ಬಿಜಿಎಸ್ ವೃತ್ತದಲ್ಲಿರುವ ಪೂಜ್ಯಶ್ರೀಗಳ ಪುತ್ಥಳಿಗೆ ಹೂವಿನ ಅಲಂಕಾರ, ವಿಶೇಷಪೂಜೆ, ಅನ್ನ ದಾಸೋಹ ನಡೆಯಿತು. ಕಾರ್ಯಕ್ರಮ ಅಂಗವಾಗಿ ಕಡಬಗೆರೆ ಮುನಿರಾಜು ಅವರಿಂದ ಗೀತಗಾಯನ, ರಕ್ತದಾನ ಶಿಬಿರವನ್ನು ಸಹ ಆಯೋಜಿಸಲಾಗಿತ್ತು.

ಬಿಡದಿ ಬಿಜಿಎಸ್ ಸೇವಾ ಸಮಿತಿ ಖಜಾಂಚಿ ಶೆಟ್ಟಿಗೌಡನದೊಡ್ಡಿ ನರಸಿಂಹಯ್ಯ, ಪ್ರಧಾನ ಕಾರ್ಯದರ್ಶಿ ಬಿ.ಎಂ.ರಾಜಶೇಖರ್, ಶಿವಕುಮಾರ್, ನಿರ್ದೇಶಕರಾದ ರಾಜಶೇಖರ್, ಸುರೇಶ್ ಬಾಬು, ಭಾನುಪ್ರಕಾಶ್, ಶ್ರೀನಿವಾಸ್ (ಜಾಮು), ಶಿವಲಿಂಗಯ್ಯ, ಪುರಸಭಾ ಸದಸ್ಯರಾದ ಹೊಂಬಯ್ಯ, ನವೀನ್‌ಕುಮಾರ್, ಕರ್ನಾಟಕ ರೈತ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್, ಮುಖಂಡರಾದ ಎಲ್.ಚಂದ್ರಶೇಖರ್, ಶಿವರಾಜು, ರೇಣುಕಪ್ಪ, ಮಹೇಶ್, ನಾಗೇಶ್ ಸೇರಿದಂತೆ ಬಿಜಿಎಸ್ ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ