ಒತ್ತಡ ಕಡಿಮೆ ಮಾಡಲು ಕೆಲಸದ ವಿಧಾನ ಬದಲಿಸಿ

KannadaprabhaNewsNetwork |  
Published : Oct 03, 2026, 02:45 AM IST
ಹುಬ್ಬಳ್ಳಿಯ ಕೆಎಲ್‌ಇ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಬಿಬಿಎನಲ್ಲಿ ತರಬೇತುದಾರ ಮನೀಷ್ ಜೈನ್ ಅವರಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. | Kannada Prabha

ಸಾರಾಂಶ

ಮೊಬೈಲ್‌ನ ನಿರಂತರ ನೋಟಿಫಿಕೇಶನ್‌, ಹಲವು ಜವಾಬ್ದಾರಿ, ಸಮಯದ ಅಭಾವ, ಭವಿಷ್ಯದ ಚಿಂತೆ ಹಾಗೂ ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆಗಳು ಒತ್ತಡಕ್ಕೆ ಕಾರಣವಾಗುತ್ತಿವೆ.

ಹುಬ್ಬಳ್ಳಿ:

ಕೆಲಸದ ಒತ್ತಡ ಕಡಿಮೆ ಮಾಡಲು ಪ್ರತಿ ಬಾರಿಯೂ ಕೆಲಸದ ಪ್ರಮಾಣ ಕಡಿಮೆ ಮಾಡಬೇಕಿಲ್ಲ. ಕೆಲಸ ಮಾಡುವ ವಿಧಾನವನ್ನು ಬದಲಿಸಿಕೊಳ್ಳುವುದರಿಂದಲೂ ಒತ್ತಡ ನಿರ್ವಹಿಸಬಹುದು ಎಂದು ವೃತ್ತಿ ಮಾರ್ಗದರ್ಶಕ ಹಾಗೂ ತರಬೇತುದಾರ ಮನೀಷ್ ಜೈನ್ ಹೇಳಿದರು.

ಅವರು ಇಲ್ಲಿನ ಕೆಎಲ್‌ಇ ಕಾಲೇಜ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಬಿಬಿಎ ವಿದ್ಯಾರ್ಥಿಗಳಿಗಾಗಿ "ಎಐ ಯುಗದಲ್ಲಿ ಕೆಲಸದ ಒತ್ತಡ ನಿರ್ವಹಣೆ ಹಾಗೂ ಬದಲಾಗುತ್ತಿರುವ ಕೆಲಸದ ಸಂಸ್ಕೃತಿಗೆ ಹೊಂದಿಕೊಳ್ಳುವುದು " ಎಂಬ ವಿಷಯದ ಕುರಿತು ಹಮ್ಮಿಕೊಳ್ಳಲಾಗಿದ್ದ ಸಂವಾದಾತ್ಮಕ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೊಬೈಲ್‌ನ ನಿರಂತರ ನೋಟಿಫಿಕೇಶನ್‌, ಹಲವು ಜವಾಬ್ದಾರಿ, ಸಮಯದ ಅಭಾವ, ಭವಿಷ್ಯದ ಚಿಂತೆ ಹಾಗೂ ತಂತ್ರಜ್ಞಾನದಲ್ಲಿನ ತ್ವರಿತ ಬದಲಾವಣೆಗಳು ಒತ್ತಡಕ್ಕೆ ಕಾರಣವಾಗುತ್ತಿವೆ. ಒಂದೇ ಸಮಯದಲ್ಲಿ ಹಲವು ವಿಷಯಗಳ ಬಗ್ಗೆ ಯೋಚಿಸುವುದರಿಂದಲೂ ಮಾನಸಿಕ ಒತ್ತಡ ಹೆಚ್ಚುತ್ತದೆ. ಹೀಗಾಗಿ ಮನಸ್ಸಿನಲ್ಲಿರುವ ಕೆಲಸ ಹಾಗೂ ಚಿಂತೆಗಳನ್ನು ಬರೆದುಕೊಂಡು, ಯಾವುದನ್ನು ತಕ್ಷಣ ಮಾಡಬೇಕು, ಯಾವುದನ್ನು ಮುಂದೂಡಬಹುದು ಅಥವಾ ಬೇರೆಯವರ ನೆರವು ಪಡೆಯಬಹುದು ಎಂಬುದನ್ನು ವಿಂಗಡಿಸಿಕೊಳ್ಳಬೇಕು ಎಂದರು.

"ನಾನು ತುಂಬಾ ಬ್ಯುಸಿ " ಎನ್ನುವುದು ಉತ್ಪಾದಕತೆಯ ಮಾನದಂಡವಲ್ಲ. ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡುವ ಬದಲು ಆದ್ಯತೆಯ ಕೆಲಸವನ್ನು ಗುರುತಿಸಿ, ಅದಕ್ಕೆ ಸಂಪೂರ್ಣ ಗಮನ ನೀಡಬೇಕು. ಕೆಲಸದ ವೇಳಾಪಟ್ಟಿಯಲ್ಲಿ ವಿರಾಮಕ್ಕೂ ಅವಕಾಶ ಇರಬೇಕು ಎಂದು ಸಲಹೆ ನೀಡಿದರು.

ಎಐ ಸಹಾಯಕ, ಪರ‍್ಯಾಯವಲ್ಲ:

ಎಐ ಉದ್ಯೋಗ ಕಸಿದುಕೊಳ್ಳುವ ಸಾಧನವೆಂಬ ಭಯಕ್ಕಿಂತ, ಕೆಲಸದ ಸಾಮರ್ಥ್ಯ ಹೆಚ್ಚಿಸುವ ಸಹಾಯಕನಾಗಿ ಬಳಸಿಕೊಳ್ಳಬೇಕು. ದೊಡ್ಡ ಕೆಲಸವನ್ನು ಸಣ್ಣ ಹಂತಗಳಾಗಿ ವಿಭಜಿಸುವುದು, ಮಾಹಿತಿಯನ್ನು ವ್ಯವಸ್ಥಿತಗೊಳಿಸುವುದು ಹಾಗೂ ನಿರ್ಧಾರಕ್ಕೆ ಅಗತ್ಯ ಮಾಹಿತಿ ಪಡೆಯಲು ಎಐ ನೆರವಾಗಬಹುದು. ಆದರೆ, ಅಂತಿಮ ನಿರ್ಧಾರ ಮತ್ತು ಜವಾಬ್ದಾರಿ ಮನುಷ್ಯನದ್ದೇ ಎಂದರು.

ಒತ್ತಡದ ಸಂದರ್ಭದಲ್ಲಿ ತಕ್ಷಣ ಪ್ರತಿಕ್ರಿಯಿಸುವ ಬದಲು ಕ್ಷಣಕಾಲ ವಿರಾಮ ಪಡೆದು, ನನ್ನ ನಿಯಂತ್ರಣದಲ್ಲಿರುವುದು ಏನು? ಎಂದು ಪ್ರಶ್ನಿಸಿಕೊಳ್ಳಬೇಕು. ನಿಧಾನವಾಗಿ ಉಸಿರಾಟ ಮಾಡುವುದು, ಪರದೆಯಿಂದ ಕೆಲಕಾಲ ದೂರವಿರುವುದು ಸೇರಿದಂತೆ ಎರಡು ನಿಮಿಷದ ಜಾಗೃತ ವಿರಾಮವೂ ಒತ್ತಡ ಕಡಿಮೆ ಮಾಡಲು ನೆರವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆಯ ಪಾದರಕ್ಷೆಗಳಿಗೆ ಹೊಸ ರೂಪ ‘ದಾನ’
ಉಡುಪಿ: ನ. 27ರಿಂದ ರಾಜ್ಯ ಮಟ್ಟದ ಆಹಾರ ಮೇಳ