ಗದಗ: 19ನೇ ಶತಮಾನದ ಉತ್ತರಾರ್ಧವು ಮುಂಬೈ ಕರ್ನಾಟಕದಲ್ಲಿ ಮರಾಠಿಯ ಪ್ರಾಬಲ್ಯದ ಹಾಗೂ ಇಂಗ್ಲೀಷಿನ ಪ್ರಾರಂಭದ ಕಾಲ ಆಗ ಕನ್ನಡ ಭಾಷೆ ಶಿಕ್ಷಣ ಸಾಹಿತ್ಯ ಮತ್ತು ಸಂಸ್ಕೃತಿ ಉಳಿಸಿ ಬೆಳೆಸುವ ಮಹಾ ಕಾರ್ಯಕ್ಕೆ ನಾಂದಿ ಹಾಡಿದವರು ಡೆಪ್ಯುಟಿ ಚನ್ನಬಸಪ್ಪನವರು ಎಂದು ಸರ್ಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಸ್.ಬಿ. ಬಾಗೇವಾಡಿ ಹೇಳಿದರು.
ಇಲ್ಲಿಯ ರಾಜೀವಗಾಂಧಿ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ ಸಂಘದಿಂದ ನಡೆದ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನ್ನಡದ ಕುಲ-ನೆಲಗಳ ಉಜ್ವಲ ಅಭಿಮಾನಿಗಳಾಗಿ ಖ್ಯಾತಿವೆತ್ತ ಶಿಕ್ಷಣ ತಜ್ಞರಾಗಿ, ಗಣಿತ ಶಾಸ್ತ್ರಜ್ಞರಾಗಿ, ಶ್ರೇಷ್ಠ ವಾಗ್ಮಿಗಳಾಗಿ ಶೇಕ್ಷಪಿಯರನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ ಕರ್ನಾಟಕದ ಪ್ರಥಮ ಮತ್ತು ಪ್ರಮುಖ ಶಿಕ್ಷಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ, ಶತಮಾನೋತ್ಸವ ಅಚರಿಸಿದ ಕನ್ನಡದ ಏಕಮೇವ ಶೈಕ್ಷಣಿಕ ಜೀವನ ಶಿಕ್ಷಣ ಪತ್ರಿಕೆಯ ಸ್ಥಾಪಕರಾಗಿ ದಕ್ಷ ಡೆಪುಟಿ ಎಜ್ಯುಕೇಶನ್ ಇನ್ಸ್ಪಕ್ಟರ್ ಆಗಿ ಅನೇಕ ಕನ್ನಡ ಶಾಲೆ ಪ್ರಾರಂಭಿಸಿ ಕನ್ನಡ ಪ್ರಾಥಮಿಕ ಶಿಕ್ಷಣದ ಪಿತಾಮಹರಾಗಿ ಉಚಿತ ಪ್ರಸಾದ ನಿಲಯಗಳ ಸ್ಥಾಪನೆಗೆ ಮೂಲ ಪ್ರೇರಕರಾಗಿ ಕನ್ನಡ ಪುರುಜ್ಜೀವನ ಕಾರ್ಯದ ಕಾರಣ ಪುರುಷರಾಗಿ ಬೆಳಗಿದ ಪುಣ್ಯಜೀವಿ ಚನ್ನಬಸಪ್ಪನವರು ಕನ್ನಡದ ದೀಪ ನಮಗೆಲ್ಲ ಸ್ಪೂರ್ತಿದಾಯಕರು ಎಂದರು.ಶಿವಾನಂದ ಗಿಡ್ನಂದಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರೌಢಶಾಲೆಯಲ್ಲಿ ನವಂಬರ್ ತಿಂಗಳಾಂತ್ಯದವರೆಗೆ ವಿದ್ಯಾರ್ಥಿಗಳಿಗಾಗಿ ಕನ್ನಡ ನಾಡು-ನುಡಿ-ಸಂಸ್ಕೃತಿ ಕುರಿತು ಅಭಿಮಾನ ಮೂಡಿಸುವುದು ಮತ್ತು ಕರ್ನಾಟಕದ ಹಿರಿಮೆ ಗರಿಮೆ ತಿಳಿಸುವ ಭಾಷಣ, ಪ್ರಬಂಧ, ಕನ್ನಡ ರಸಪ್ರಶ್ನೆ ಕಾರ್ಯಕ್ರಮ, ಕನ್ನಡ ನಾಡ ಗೀತೆಗಳನ್ನು ಹಾಡುವ ಸ್ಪರ್ಧೆಗಳನ್ನು ಮಕ್ಕಳಿಗೆ ಏರ್ಪಡಿಸಲಾಗಿದೆ. ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಪ್ರೌಢಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಕರ್ನಾಟಕ ನಾಮಕರಣ ವಿಷಯ ಕುರಿತು ಭಾಷಣ ಸ್ಪರ್ಧೆ ಏರ್ಪಟ್ಟಿತು. ಹದಿನೈದು ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡದ ಪ್ರಾಚೀನತೆ ಹಾಗೂ ಕರ್ನಾಟಕದ ಇತಿಹಾಸ ಕುರಿತು ಮಾತನಾಡಿದರು.ಈ ವೇಳೆ ಎಸ್.ಬಿ. ಬಾಗೇವಾಡಿ, ವೈ.ಎಸ್. ಬಮ್ಮನಾಳ, ಎಂ.ಎಸ್. ಕುಚಬಾಳ, ಎಲ್.ಬಿ.ಕಾಲವಾಡ, ವಿ.ಎಸ್. ಚೂರಿ, ವೈ.ಎಸ್. ಬಮ್ಮನಾಳ, ಎಂ.ಎಸ್. ಕುಚಬಾಳ ಸೇರಿದಂತೆ ಇತರರು ಇದ್ದರು. ನಂದಿತಾ ಚನ್ನದಾಸರ ಸ್ವಾಗತಿಸಿದರು. ಯಶೋಧಾ ಡಕ್ಕಣ್ಣವರ ನಿರೂಪಿಸಿದರು. ಅಕ್ಷತಾ ರಾಲದೊಡ್ಡಿ ವಂದಿಸಿದರು.