ಚನ್ನಗಿರಿ: ರಾಜ್ಯಾದ್ಯಂತ ಡೆಂಘೀ ವ್ಯಾಪಕವಾಗಿ ಹರಡುತ್ತಿದ್ದು ಚನ್ನಗಿರಿ ಪಟ್ಟಣದಲ್ಲಿ ಈ ಕಾಯಿಲೆ ಹತೋಟಿಯಲ್ಲಿಡುವ ಉದ್ದೇಶದಿಂದ ಪುರಸಭೆಯಿಂದ 23 ವಾರ್ಡ್‌ಗಳಲ್ಲಿ ಸ್ವಚ್ಛತಾ ಅಭಿಯಾನ ಪ್ರಾರಂಭಿಸಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮಾಹಿತಿ ನೀಡಿದ್ದಾರೆ.
ಖಾಸಗಿ ಖಾಲಿ ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದಿದ್ದು ತೆರವಿಗೆ ನಿವೇಶನಗಳ ಮಾಲೀಕರುಗಳಿಗೆ ಈಗಾಗಲೇ ನೋಟಿಸ್ ನೀಡಿದೆ. ಕೆಲ ಮಾಲೀಕರು ತಮ್ಮ ನಿವೇಶನ ಸ್ವಚ್ಛಗೊಳಿಸಿದ್ದಾರೆ. ಇನ್ನೂ ಕೆಲವರು ನಿವೇಶನಗಳನ್ನು ಸ್ವಚ್ಛಗೊಳಿಸದೆ ಇದ್ದು, ಪುರಸಭೆ ಸಿಬ್ಬಂದಿಯಿಂದ ಸ್ವಚ್ಛಗೊಳಿಸಿ ಅದಕ್ಕೆ ತಗುಲುವ ವೆಚ್ಚವನ್ನು ಆ ಮಾಲೀಕರಿಂದಲೇ ಬರಿಸುವ ಯೋಜನೆ ಸಿದ್ದಪಡಿಸಲಾಗಿದೆ.
ಸಾರ್ವಜನಿಕರು ಸಹಾ ತಮ್ಮ ಮನೆ ಸುತ್ತ ಮುತ್ತಲಿನಲ್ಲಿ ಮಳೆ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಪುರಸಭೆಯಿಂದ ಪ್ರತಿದಿನ ಮನೆ ಕಸ ಸಂಗ್ರಹಿಸಲು ತೆರಳುವ ಗಾಡಿಗಳಲ್ಲಿ ಧ್ವನಿವರ್ಧಕದ ಮೂಲಕ ವ್ಯಾಪಕವಾಗಿ ಪ್ರಚಾರ ನಡೆಸಲಾಗುತ್ತಿದೆ ಎಂದರು.