ಚನ್ನಗಿರಿ ಪಟ್ಟಣಕ್ಕೆ ತುರ್ತು ಬೇಕಿದೆ ಟ್ರಾಫಿಕ್‌ ಸಿಗ್ನಲ್‌ ವ್ಯವಸ್ಥೆ

KannadaprabhaNewsNetwork |  
Published : Jul 25, 2026, 02:00 AM IST
ಯಾವುದೇ ವಾಹನ ಸಂಚಾರದ ನಿಯಮಗಳಿಲ್ಲದೆ ಸಂಚರಿಸುತ್ತೀರುವ ವಾಹನಗಳು | Kannada Prabha

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-13 ಹಾದುಹೋಗಿದ್ದು ಪ್ರತಿದಿನವು ಬಸ್ಸು, ಕಾರು, ಲಾರಿ, ದ್ವಿಚಕ್ರ ವಾಹನ ಹೀಗೆ ಎಲ್ಲ ಪ್ರಕಾರಗಳ 10ರಿಂದ 15 ಸಾವಿರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಪಟ್ಟಣದ ತರಳಬಾಳು ವೃತ್ತದ ಕೈಮರದಿಂದ ಮತ್ತು ಗರಗ ಕ್ರಾಸ್ ಕಡೆಗಳಿಂದ ವೇಗದ ಮಿತಿಗಳಿಲ್ಲದೇ ರಭಸವಾಗಿ ಬರುವ ವಾಹನಗಳಿಂದ ಪಟ್ಟಣ ಪ್ರದೇಶಗಳ ವ್ಯಾಪ್ತಿಗಳಲ್ಲಿಯೇ ಹಲವಾರು ಅಪಘಾತಗಳಿಗೂ ಕಾರಣವಾಗುತ್ತಿವೆ. ಈ ಹಿನ್ನೆಲೆ ವಾಹನಗಳ ಸಂಚಾರದ ನಿಯಮಗಳನ್ನು ಪಾಲಿಸುವಂತೆ ಪೂರಕವಾಗಿ ರಸ್ತೆಯಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆ ಅಳವಡಿಸಬೇಕಾಗಿದೆ.

- ಅತಿ ವೇಗದಿಂದ ನುಗ್ಗುವ ವಾಹನಗಳು । ಪಾದಾಚಾರಿಗಳಿಗೆ ತಪ್ಪದ ಆತಂಕ । ಅಪಘಾತಗಳ ಕಡಿವಾಣ ಸಾಧ್ಯವೇ?

- - -

ಬಾ.ರಾ.ಮಹೇಶ್, ಚನ್ನಗಿರಿ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ-13 ಹಾದುಹೋಗಿದ್ದು ಪ್ರತಿದಿನವು ಬಸ್ಸು, ಕಾರು, ಲಾರಿ, ದ್ವಿಚಕ್ರ ವಾಹನ ಹೀಗೆ ಎಲ್ಲ ಪ್ರಕಾರಗಳ 10ರಿಂದ 15 ಸಾವಿರ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಪಟ್ಟಣದ ತರಳಬಾಳು ವೃತ್ತದ ಕೈಮರದಿಂದ ಮತ್ತು ಗರಗ ಕ್ರಾಸ್ ಕಡೆಗಳಿಂದ ವೇಗದ ಮಿತಿಗಳಿಲ್ಲದೇ ರಭಸವಾಗಿ ಬರುವ ವಾಹನಗಳಿಂದ ಪಟ್ಟಣ ಪ್ರದೇಶಗಳ ವ್ಯಾಪ್ತಿಗಳಲ್ಲಿಯೇ ಹಲವಾರು ಅಪಘಾತಗಳಿಗೂ ಕಾರಣವಾಗುತ್ತಿವೆ. ಈ ಹಿನ್ನೆಲೆ ವಾಹನಗಳ ಸಂಚಾರದ ನಿಯಮಗಳನ್ನು ಪಾಲಿಸುವಂತೆ ಪೂರಕವಾಗಿ ರಸ್ತೆಯಲ್ಲಿ ಸಿಗ್ನಲ್ ಲೈಟ್ ವ್ಯವಸ್ಥೆ ಅಳವಡಿಸಬೇಕಾಗಿದೆ.

ಚನ್ನಗಿರಿಯ ಕೆನರಾ ಬ್ಯಾಂಕ್, ಎಸ್.ಬಿ.ಐ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿಯೇ ಇವೆ. ಈ ಬ್ಯಾಂಕುಗಳಿಗೆ ಮತ್ತು ಬ್ಯಾಂಕುಗಳ ಬಳಿಯೇ ಇರುವ ತಾಲೂಕು ಪಂಚಾಯಿತಿ, ತಾಲೂಕು ಕಚೇರಿ, ಕೃಷಿ ಇಲಾಖೆ, ಪಶು ಆಸ್ಪತ್ರೆಗಳಿಗೆ ಬರುವಂತಹ ನಾಗರಿಕರು ತಮ್ಮ ಕಾರು, ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸುತ್ತಿದ್ದಾರೆ. ಪರಿಣಾಮ ಪಾದಚಾರಿಗಳು ನಿರಾತಂಕವಾಗಿ ಸಾಗಲು ಅಡಚಣೆಯಾಗುತ್ತಿದೆ. ಜೀವ ಭಯಗಳಿಂದಲೇ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಂದ ಸರ್ಕಾರಿ ಆಸ್ಫತ್ರೆ, ಅಂಚೆ ಕಚೇರಿ, ವಿದ್ಯಾರ್ಥಿ ನಿಲಯಗಳು, ಶಾಲಾ, ಕಾಲೇಜುಗಳಿಗೆ ಬರುವಂತಹ ವಿದ್ಯಾರ್ಥಿಗಳು ವೃದ್ಧರು, ಮಕ್ಕಳು, ಸಾರ್ವಜನಿಕರು ಈ ಹೆದ್ದಾರಿಯನ್ನು ಭಯದಿಂದಲೇ ದಾಟಿಹೋಗಬೇಕು. ಇಲ್ಲಿ ಯಾವುದೇ ವಾಹನ ಸಂಚಾರ ನಿಯಮಗಳು ಕಾಯ್ದೆಗಳು ಜಾರಿಯಾಗುತ್ತಿಲ್ಲ. ಈ ಕಾರಣ ಏಕ ಮುಖ ರಸ್ತೆಯ ಸಂಚಾರಕ್ಕೆ ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಸುಸಜ್ಜಿತವಾಗಿದೆ.

ಯೂ ಟರ್ನ್‌ ವ್ಯವಸ್ಥೆಯು ನಿಯಮಗಳಂತೆ ಮಾಡಲಾಗಿದೆ. ಆದರೆ ಸಂಚರಿಸುವ ಹಲವು ವಾಹನಗಳ ಸವಾರರು ಏಕ ಮುಖ ರಸ್ತೆಯ ಸಂಚಾರದ ವ್ಯವಸ್ಥೆಯಲ್ಲಿ ಎದುರು ಬದುರಿನಲ್ಲಿ ಓಡಾಡುತ್ತಿವೆ. ಪರಿಣಾಮ ಅಪಘಾತಗಳು ಘಟಿಸುತ್ತವೆ. ಪ್ರಮುಖ ಪ್ರದೇಶಗಳಾದ ಗರಗ ಕ್ರಾಸ್, ಮಹಾತ್ಮ ಗಾಂಧಿ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಇನ್ನು ಕೆಲವು ಪ್ರಮುಖ ಕಡೆಗಳಲ್ಲಿ ಸಿಗ್ನಲ್ ಲೈಟ್‌ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕಾಗಿದೆ. ಸುಗಮ ವಾಹನ ಸಂಚಾರ, ರಸ್ತೆ ನಿಯಮ ಪಾಲನೆ ಮಾಡಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

- - -

(ಕೋಟ್‌) ಚನ್ನಗಿರಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಎದುರು ಹೆದ್ದಾರಿಯ ಪಕ್ಕದಲ್ಲಿಯೇ ದ್ವಿಚಕ್ರ ವಾಹನಗಳು ಮತ್ತು ಕಾರುಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ಪಾದಚಾರಿಗಳ ಸಂಚಾರವೇ ಕಷ್ಟವಾಗಿದೆ. ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ವಾಹನ ಕಾಯ್ದೆಗಳ ನಿಯಮ ಅನುಸಾರ ವೇಗದ ಮಿತಿ ನಿಗದಿ ಪಡಿಸಬೇಕು.

- ಜಿ.ಎಸ್.ನಿಖಿಲ್, ಎಸ್.ಎಚ್.ಚೌಡಪ್ಪ, ಬೈಕ್‌ ಸವಾರರು.

- - -

(ಬಾಕ್ಸ್‌)* ನಿಂತು ಹೊರಡಿ ಸಿಗ್ನಲ್ ಲೈಟ್‌ಗಳು ಅಳವಡಿಸಬೇಕು

ಚನ್ನಗಿರಿ ಪಟ್ಟಣ ವ್ಯಾಪ್ತಿಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರ 20 ಕಿ.ಮೀ. ವೇಗದಲ್ಲಿ ಬರುತ್ತಿರುತ್ತಾನೆ. ಆತನ ಹಿಂದೆ ತುಸು ಸಮೀಪದಲ್ಲಿಯೇ ಮತ್ತೊಬ್ಬ 40 ಕಿ.ಮೀ. ವೇಗದಲ್ಲಿ ಬರುತ್ತಾನೆ. ಆತನ ಹಿಂದೆ ಇನ್ನೊಬ್ಬ 80- 100 ಕಿ.ಮೀ. ವೇಗದಲ್ಲಿ ಬರುತ್ತಾನೆ. ರಸ್ತೆ ದಾಟುವಂತಹ ಪಾದಚಾರಿಗಳು 20 ಕಿ.ಮೀ. ವೇಗದ ವಾಹನ ಸವಾರನನ್ನು ನೋಡಿ ರಸ್ತೆ ದಾಟಲು ಪ್ರಯತ್ನಿಸಿದರೆ ಹಿಂದಿನಿಂದ ವೇಗಗಳಲ್ಲಿ ಬರುವ ವಾಹನ ಸವಾರರು ನಾಯಿಗಳು, ಬಿಡಾಡಿ ದನಗಳು ಮತ್ತು ಮನುಷ್ಯರಿಗೆ ಗುದ್ದಿಕೊಳ್ಳುತ್ತಾರೆ. ಇಂಥ ಹಲವಾರು ಘಟನೆಗಳಿಂದ ಪ್ರಾಣಿಗಳು, ಮನುಷ್ಯರು ಮೃತಪಟ್ಟಿದ್ದಾರೆ. 10ರಿಂದ 15 ವರ್ಷಗಳ ಬಾಲಕ-ಬಾಲಕಿಯರು ದ್ವಿಚಕ್ರ ವಾಹನ ಚಲಾಯಿಸುವುದನ್ನು ನಿರ್ಬಂಧಿಸಬೇಕು. ನಿಂತು ಹೊರಡಿ ಎಂಬ ಸೂಚನೆಯ ಸಿಗ್ನಲ್ ಲೈಟ್‌ಗಳು ಚನ್ನಗಿರಿ ಪಟ್ಟಣಕ್ಕೆ ಅವಶ್ಯಕವಾಗಿ ಬೇಕಾಗಿದೆ ಎನ್ನುತ್ತಾರೆ ರಾಕೇಶ್ ದೇವರಹಳ್ಳಿ, ನಟರಾಜ್, ವಾಗೀಶ್.

- - -

-21ಕೆಸಿಎನ್ಜಿ2: ಯಾವುದೇ ವಾಹನ ಸಂಚಾರದ ನಿಯಮಗಳಿಲ್ಲದೇ ಸಂಚರಿಸುತ್ತೀರುವ ವಾಹನಗಳು.

-21ಕೆಸಿಎನ್ಜಿ3: ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಮಲಗಿರುವ ಬಿಡಾಡಿ ದನಗಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾಸ್ಟೆಲ್‌ ವಂಚಿತ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಸಮಾಜಘಾತುಕ ಶಕ್ತಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು-ಮಾಜಿ ಸಚಿವ ಪಾಟೀಲ