ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯಲ್ಲಿ ಬೇಡಿಕೆ ಕಳೆದುಕೊಂಡ ಚನ್ನಪಟ್ಟಣದ ಕರಿಕಬ್ಬು

KannadaprabhaNewsNetwork | Updated : Jan 14 2025, 11:52 AM IST

ಸಾರಾಂಶ

ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ವಿಶೇಷಗಳಲ್ಲಿ ಒಂದಾದ ಕರಿಕಬ್ಬು (ಪಟಾವಳಿ ಕಬ್ಬು) ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ. ಆದರೆ, ಈ ಬಾರಿ ಇದಕ್ಕೆ ಬೇಡಿಕೆ ಕುಸಿದಿದ್ದು, ಬೆಳೆಗಾರರು ಆತಂಕಕ್ಕಿಡಾಗುವಂತೆ ಮಾಡಿದೆ.

 ಚನ್ನಪಟ್ಟಣ : ವರ್ಷದ ಮೊದಲ ಹಬ್ಬವಾದ ಸಂಕ್ರಾಂತಿಯ ವಿಶೇಷಗಳಲ್ಲಿ ಒಂದಾದ ಕರಿಕಬ್ಬು (ಪಟಾವಳಿ ಕಬ್ಬು) ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ. ಆದರೆ, ಈ ಬಾರಿ ಇದಕ್ಕೆ ಬೇಡಿಕೆ ಕುಸಿದಿದ್ದು, ಬೆಳೆಗಾರರು ಆತಂಕಕ್ಕಿಡಾಗುವಂತೆ ಮಾಡಿದೆ. ಸುಗ್ಗಿ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಕರಿಕಬ್ಬು ಸಹ ಒಂದು. ಎಳ್ಳು-ಬೆಲ್ಲದಷ್ಟೇ ಕರಿಕಬ್ಬಿಗೂ ವಿಶಿಷ್ಟ ಸ್ಥಾನವಿದೆ. 

ವರ್ಷಪೂರ್ತಿ ಶ್ರಮವಹಿಸಿ ಬೆಳೆದ ಕಬ್ಬು ಕಟಾವಿಗೆ ಸಿದ್ಧವಾಗಿದೆಯಾದರೂ ಈ ಬಾರಿ ಬೇಡಿಕೆ ಕಡಿಮೆಯಾಗಿರುವುದು ರೈತರನ್ನು ಆತಂಕಗೊಳಿಸಿದೆ. ಸಂಕ್ರಾಂತಿ ಹಬ್ಬದಲ್ಲಿ ಹೆಣ್ಣುಮಕ್ಕಳು ಅತ್ಯಂತ ಸಂಭ್ರಮದಿಂದ ಎಳ್ಳುಬೆಲ್ಲ ಬೀರುವುದು ವಿಶೇಷ. ಎಳ್ಳು ಬೀರುವವರು ಮಾರುಕಟ್ಟೆಯಲ್ಲಿ ತಡಕಾಡುವ ಪ್ರಮುಖ ವಸ್ತುಗಳಲ್ಲಿ ಈ ಕರಿಕಬ್ಬು ಕೂಡ ಒಂದು. ಕಬ್ಬುಗಳಲ್ಲೇ ಅತ್ಯಂತ ವಿಶೇಷವಾಗಿರುವ ಕರಿಕಬ್ಬು ಬೆಳೆಯುವ ಪ್ರದೇಶಗಳು ರಾಜ್ಯದಲ್ಲಿ ತುಂಬಾ ವಿರಳ.ತಾಲೂಕಿನ ಪಟ್ಲು, ತಿಟ್ಟಮಾರನಹಳ್ಳಿ, ಅಬ್ಬೂರು, ಅಬ್ಬೂರುದೊಡ್ಡಿ, ಕಳ್ಳಿಹೊಸೂರು, ರಾಂಪುರ, ಚಿಕ್ಕನದೊಡ್ಡಿ, ಮೈಲನಾಯಕ್ಕನಹಳ್ಳಿ, ರಾಂಪುರ ಮತ್ತಿತರ ಗ್ರಾಮಗಳಲ್ಲಿ ಈ ಕರಿಕಬ್ಬನ್ನು ಹೇರಳವಾಗಿ ಬೆಳೆಯಲಾಗುತ್ತದೆ. 

ಸುಮಾರು 250 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಇದನ್ನು ಬೆಳೆಯಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ತಮಿಳುನಾಡಿನಿಂದ ಹೆಚ್ಚು ಪ್ರಮಾಣದಲ್ಲಿ ಕಬ್ಬು ಬರುತ್ತಿರುವ ಕಾರಣ ಬೇಡಿಕೆ ಕುಸಿದಿದೆ. ಕರಿಕಬ್ಬಿಗೆ ಕಠಿಣ ಪರಿಶ್ರಮ ಹಾಗೂ ಕಾರ್ಮಿಕರ ಅವಶ್ಯಕತೆ ಅಗತ್ಯ. ಕಾರ್ಮಿಕರ ಸಮಸ್ಯೆ, ಕೂಲಿ ಹೆಚ್ಚಳ, ಅಧಿಕ ಖರ್ಚಿನ ಕಾರಣ ಲಾಭಕ್ಕಿಂತ ನಷ್ಟ ಜಾಸ್ತಿಯೆಂದು ತಾಲೂಕಿನ ಬಹುತೇಕ ಕಬ್ಬು ಬೆಳೆಗಾರರು ಕಬ್ಬು ಬೆಳೆಯುವುದಿಂದ ವಿಮುಖರಾಗುತ್ತಿದ್ದು, ಇದನ್ನು ಬೆಳೆಯುವವರ ಸಂಖ್ಯೆ ಸಹ ಕಡಿಮೆಯಾಗುತ್ತಿದೆ. ರಾಜ್ಯ ಮಾತ್ರವಲ್ಲದೇ ಪಕ್ಕದ ರಾಜ್ಯಗಳಾದ ತಮಿಳುನಾಡು, ಆಂದ್ರ, ಕೇರಳದಲ್ಲೂ ಕರಿಕಬ್ಬಿಗೆ ಸಾಕಷ್ಟು ಬೇಡಿಕೆ ಇದೆ. ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಜೊತೆಗೆ ದೂರದ ಜಿಲ್ಲೆಗಳು ಹಾಗೂ ಅಕ್ಕಪಕ್ಕದ ಕೇರಳ, ತಮಿಳುನಾಡು ರಾಜ್ಯಗಳಿಗೂ ಇದು ಪೂರೈಕೆಯಾಗುತ್ತದೆ.

ಕರಿಕಬ್ಬು ನಾಟಿ ಮಾಡಿದ ದಿನದಿಂದ ಕಟಾವಿನ ಹಂತಕ್ಕೆ ಬರಲು ಸುಮಾರು ಒಂದು ವರ್ಷ ಬೇಕಿದ್ದು, ಸರಿಸುಮಾರು ೨ರಿಂದ ೭ಮೀಟರ್‌ನಷ್ಟು ಉದ್ದವಾಗಿ ಬೆಳೆಯುವ ಇದನ್ನು ರೈತರು ಜನವರಿಯಲ್ಲಿ ಬಿತ್ತನೆ ಮಾಡಿದರೆ ಡಿಸೆಂಬರ್ ಅಂತ್ಯದಲ್ಲಿ ಕಟಾವಿಗೆ ಬರುತ್ತದೆ. ಈ ಹಿಂದೆ ಕೆಲ ವ್ಯಾಪಾರಿಗಳು ರೈತರ ಹೊಲಗಳಿಗೆ ತೆರಳಿ ಬೆಳೆ ಕಟಾವಿಗೆ ಬರುವ ಮುಂಚೆಯೇ ವ್ಯಾಪಾರ ಮಾಡಿಕೊಂಡು ಅವರೆ ಕಟಾವು ಮಾಡಿಕೊಳ್ಳುತ್ತಿದ್ದರು. ಸಣ್ಣಪುಟ್ಟ ರೈತರು ಮಾತ್ರ ಮಾರುಕಟ್ಟೆಗೆ ತಂದು ಮಾರಾಟ ಮಾಡುತ್ತಿದ್ದರು. ಆದರೆ, ಇದೀಗ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಾರದ ಕಾರಣ ರೈತರೇ ಬೆಳೆಗಳನ್ನು ಕಟಾವು ಮಾಡಿ ಮಾರುವಂತಾಗಿದೆ.

Share this article