ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ ಅದ್ವಿತೀಯ ಸಾಧನೆ ಮಾಡಿದ ತಾಲೂಕಿನ ಮೂವರು ಕ್ರೀಡಾಪಟುಗಳು ಭೂತಾನ್‌ನಲ್ಲಿ ಇ್ತತೀಚೆಗೆ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟ ಇಂಡೋ-ಭೂತಾನ್ ಗೇಮ್ಸ್‌ನಲ್ಲಿ ತಾಲೂಕಿನ ಮೂವರು ವಿದ್ಯಾರ್ಥಿಗಳು ಅಥ್ಲೆಟಿಕ್ಸ್ ವಿಭಾಗದಲ್ಲಿ ಭಾಗವಹಿಸಿ, ಮೂವರು ವಿದ್ಯಾರ್ಥಿಗಳು ಚಿನ್ನದ ಪದಕ ಗೆದ್ದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ್ಣ ಅಭಿನಂದಿಸಿದರು. ಪಟ್ಟಣದ ಕ್ರೈಸ್ಟ್ ಕಾಲೇಜಿನ ಪಿಯ ವಿದ್ಯಾರ್ಥಿ ಪಿ.ಎಂ.ಮೌರ್ಯ ಜಾವಲಿನ್ ಎಸೆತದಲ್ಲಿ, ಶ್ರವಣಬೆಳಗೊಳದ ಸರ್ಕಾರಿ ಪಿಯು ಕಾಲೇಜಿನ ಎಂ.ಎನ್.ನೂತನ್ ಶಾಟ್‌ಪುಟ್ ಎಸೆತದಲ್ಲಿಯೂ ಮತ್ತು ಶ್ರವಣಬೆಳಗೊಳದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಎಸ್.ಎಂ.ಗೌತಮ್ ೮೦೦ ಮೀ. ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ, ತಮ್ಮ ತರಬೇತುದಾರ ಬೆಂಗಳೂರಿನ ರವಿಕಿರಣ್ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿ, ಇಂಡೋ ಭೂತಾನ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಸೌತ್ ಏಷಿಯನ್ ಫೆಡರೇಶನ್ ಆಫ್ ಆಲ್ ಸ್ಪೋರ್ಟ್ಸ್ ನಡೆಸಿದ ಕ್ರೀಡಾಕೂಟವು ಭೂತಾನ್‌ನ ಜೈಗೋನ್ ನಗರದಲ್ಲಿ ಆಯೋಜನೆಗೊಂಡಿತ್ತು. ಭಾಗವಹಿಸಿದ ಮೂರು ಮಕ್ಕಳ ಸಾಧನೆಯನ್ನು ಗೌರವಿಸುವ ನಿಟ್ಟಿನಲ್ಲಿ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣರವರು ಅವರನ್ನು ಅಭಿನಂದಿಸಿ, ಬೆನ್ನುತಟ್ಟುವ ಕೆಲಸ ಮಾಡಿದರು. ಈ ವೇಳೆ ಮಾತನಾಡಿದ ಶಾಸಕರು, ಗಣನೀಯ ಸಾಧನೆ ಮಾಡಿದ ಮೂವರು, ಕ್ರೀಡೆಯಲ್ಲಿ ಭಾಗವಹಿಸುವ ಮುಂಚೆಯೂ ಅವರನ್ನು ಶುಭ ಹಾರೈಸಿ ಕಳಿಸಿಕೊಡಲಾಗಿತ್ತು. ಇವರ ಸಾಧನೆ ಇಷ್ಟಕ್ಕೆ ನಿಲ್ಲದೇ, ಕಾಮನ್‌ವೆಲ್ತ್, ಏಷಿಯನ್ ಗೇಮ್ಸ್‌ಗಳಲ್ಲಿಯೂ ಸಾಧಕರಾಗಿ ಹೊರಹೊಮ್ಮಬೇಕು. ಕ್ರೀಡೆಗೆ ಸರ್ಕಾರವು ಹೆಚ್ಚಿನ ನೆರವು ನೀಡಬೇಕು, ಕ್ರೀಡಾ ಹಾಸ್ಟೆಲ್‌ಗಳು ಇಂತಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ದೇಶ ಇತ್ತೀಚೆಗೆ ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಏಷಿಯನ್ ಕ್ರೀಡಾಕೂಟದಲ್ಲಿ ೧೦೭ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿರುವುದೆ ನಿದರ್ಶನ ಎಂದರು.