ಚನ್ನವೀರ ಶರಣರು ಅದ್ಭುತ ಪವಾಡ ಪುರುಷರು: ದಿಂಗಾಲೇಶ್ವರ ಶ್ರೀಗಳು

KannadaprabhaNewsNetwork |  
Published : Feb 17, 2024, 01:17 AM IST
ಕಾರ್ಯಕ್ರಮದಲ್ಲಿ ಜ.ಫಕೀರ ದಿಂಗಾಲೇಶ್ವರ ಶ್ರೀಗಳು ಮಾತನಾಡಿದರು. | Kannada Prabha

ಸಾರಾಂಶ

೧೨ನೇ ಶತಮಾನದ ನಂತರ ನಲತ್ವಾಡಮಠ ಶರಣರಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರು ಅಗ್ರಗಣ್ಯ ಸ್ವಾಮೀಜಿಗಳಾಗಿದ್ದರು ಎಂದು ಶಿರಹಟ್ಟಿ-ಬಾಲೆಹೊಸೂರ ಸಂಸ್ಥಾನಮಠದ ಜ. ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ಗದಗ: ೧೨ನೇ ಶತಮಾನದ ನಂತರ ನಲತ್ವಾಡಮಠ ಶರಣರಲ್ಲಿ ಚಿಕೇನಕೊಪ್ಪದ ಚನ್ನವೀರ ಶರಣರು ಅಗ್ರಗಣ್ಯ ಸ್ವಾಮೀಜಿಗಳಾಗಿದ್ದರು ಎಂದು ಶಿರಹಟ್ಟಿ-ಬಾಲೆಹೊಸೂರ ಸಂಸ್ಥಾನಮಠದ ಜ. ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದರು.

ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಶುಕ್ರವಾರ ಜರುಗಿದ ಮೌನಯೋಗಿ ಚಿಕೇನಕೊಪ್ಪ ಚನ್ನವೀರ ಶರಣರ ೨೯ನೇ ಪುಣ್ಯಸ್ಮರಣೋತ್ಸವ, ಸಾಮೂಹಿಕ ವಿವಾಹ ಹಾಗೂ ಜಾತ್ರಾಮಹೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಅವರು ಮಾತನಾಡಿದರು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಠಗಳು ಸಾಕಷ್ಟಿವೆ. ಆದರೆ, ತಮ್ಮದೆ ದಾರಿಯಲ್ಲಿ ಮಠಗಳನ್ನು ಕಟ್ಟಿ ಶಿಕ್ಷಣ, ದಾಸೋಹ ಹಾಗೂ ಸಾಮೂಹಿಕ ವಿವಾಹಗಳನ್ನು ಮಾಡುವ ಮೂಲಕ ಅಂದಿನ ಹಾಗೂ ಇಂದಿನ ಸ್ವಾಮಿಗಳು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.

ಮದುವೆ ಎನ್ನುವುದು ಭಾರತ ಬಿಟ್ಟು ಬೇರೆ ದೇಶದಲ್ಲಿ ಎರಡು ದೇಹಗಳನ್ನು ಕೂಡಿಸುವುದಾಗಿದೆ. ಆದರೆ, ಭಾರತದ ಶರಣರ ದೃಷ್ಟಿಯಲ್ಲಿ ಎರಡು ಜೀವಿಗಳನ್ನು ಕೂಡಿಸುವುದು ಆಗಿದೆ. ಅಂತಹ ಕಾರ್ಯವನ್ನು ಬಳಗಾನೂರಿನ ಶ್ರೀಮಠದಿಂದ ನಿರಂತರವಾಗಿ ಮಾಡುತ್ತಿದ್ದಾರೆ. ಗಂಡಸರಾದವರು ವರದಕ್ಷಿಣೆ ತೆಗೆದುಕೊಳ್ಳದೆ ಮದುವೆ ಆಗಬೇಕು. ತಂದೆ-ತಾಯಿ ಆಸ್ತಿಯಲ್ಲಿ ಪಾಲು ಕೇಳುವವನು ಗಂಡಸು ಅಲ್ಲ, ತಾನೇ ದುಡಿದದ್ದನ್ನು ತಿನ್ನುವನು ಗಂಡಸು. ಗಂಡಸರು ಮನಸ್ಸಿನ ನೆಮ್ಮದಿಗಾಗಿ ದುಡಿಯಬೇಕು ಎಂದು ತಿಳಿಸಿದರು.

ಚಿಕ್ಕಮಲ್ಲಿಗವಾಡದ ಶ್ರೀಆಶ್ರಮದ ಎ.ಪಿ. ಪಾಟೀಲ ಗುರೂಜಿ ಮಾತನಾಡಿ, ಗೃಹಸ್ಥಾಶ್ರಮ ಬಹಳ ಸೂಕ್ಷ್ಮಜೀವನವಾಗಿದೆ. ಪೂಜ್ಯರ ನುಡಿಯೊಳಗೆ ಶಬ್ದದ ಅರ್ಥವಿರುತ್ತದೆ. ಅದನ್ನು ಬರಿ ಕಿವಿಯಿಂದ ಕೇಳಿದರೆ ಸಾಲದು. ಸತ್ಸಂಗವನ್ನು ಅನುಭವ ಪಡೆದು, ಅನುಷ್ಠಾನಕ್ಕೆ ತರಬೇಕು. ದೇಹ ಹಾಗೂ ಮನಸ್ಸನ್ನು ಅರ್ಥ ಮಾಡಿಕೊಳ್ಳದವರು ಜೀವನದಲ್ಲಿ ಏನು ಅರ್ಥ ಮಾಡಿಕೊಳ್ಳವದಿಲ್ಲ, ಮಠಾಧೀಶರಾಧಿಯಾಗಿ ಎಲ್ಲರೂ ಗೃಹಸ್ಥಾಶ್ರಮದಿಂದ ಬಂದವರಾಗಿದ್ದಾರೆ ಎಂದರು.

ಗದುಗಿನ ವೀರೇಶ್ವರ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜನವರು ಮಾತನಾಡಿ, ಕಲ್ಲಿಗೆ ಸಂಸ್ಕಾರ ಕೊಟ್ಟು ನೀರು ಹಾಕಿದಾಗ ಹೂವಾಗಿ ಅರಳುವಂತೆ ಚನ್ನವೀರ ಶರಣರು ಭಕ್ತರಿಗೆ ಜೀವನದ ಮಾರ್ಗದರ್ಶನವನ್ನು ಮಾಡಿದ್ದಾರೆ. ದಾನಿಗಳು ಕೊಟ್ಟ ದೇಣಿಗೆಯಿಂದ ಶಿಕ್ಷಣ, ದಾಸೋಹ ಹಾಗೂ ಸಾಮೂಹಿಕ ಮದುವೆಗಳನ್ನು ಮಾಡಿ ಸಮಾಜದ ಹಣವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ೪೨ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರಟಗಿಯ ಕುಮಾರ ಸಂಜಯ ಜೆ.ಸಿ. ಹಾಗೂ ಬಳ್ಳಾರಿಯ ದಿ.ಎಸ್.ಕೆ.ಆರ್. ಜಿಲಾನಿ ಭಾಷಾ ಅವರಿಗೆ ಶರಣಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಭಕ್ತರಿಂದ ಶಿವಶಾಂತವೀರ ಶರಣರಿಗೆ ತುಲಾಭಾರ ಸೇವೆ ನಡೆಯಿತು. ರಕ್ತದಾನ ಶಿಬಿರ ಜರುಗಿದವು.

ಈ ವೇಳೆ ಬಳಗಾನೂರಿನ ಶಿವಶಾಂತವೀರ ಶರಣರು, ಹೊಸಹಳ್ಳಿಯ ಅಭಿನವ ಬೂದೀಶ್ವರ ಶ್ರೀಗಳು, ಕುಂದಗೋಳ ಕಲ್ಯಾಣಮಠದ ಶ್ರೀಅಭಿನವ ಬಸವಣ್ಣನವರು, ಯುವ ಮುಖಂಡ ಉಮೇಶಗೌಡ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬೆಂಗಳೂರಿನ ಮಹೇಶಕುಮಾರ ಹೇರೂರ ಸಂಗೀತ ಕಾರ್ಯಕ್ರಮ ನೀಡಿದರು. ಶಿವಲಿಂಗಯ್ಯಶಾಸ್ತ್ರಿ ಹಿರೇಮಠ ಸಿದ್ದಾಪೂರ ನಿರೂಪಿಸಿದರು. ಬಿ.ವೈ.ಡೊಳ್ಳಿನ ವಂದಿಸಿದರು. ನಂತರ ಸಂಜೆ ಹರಗುರು ಚರಮೂರ್ತಿಗಳ ನೇತೃತ್ವದಲ್ಲಿ ಮಹಾರಥೋತ್ಸವ ಅದ್ಧೂರಿಯಾಗಿ ಜರುಗಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!