ಹನುಮಾನ್ ಚಾಲೀಸ್ ಪಠಣದಿಂದ ಸಂಕಷ್ಟ ದೂರ

KannadaprabhaNewsNetwork | Published : Nov 23, 2024 12:31 AM

ಸಾರಾಂಶ

ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ಸಂಕಷ್ಟಗಳು ದೂರುವಾಗುತ್ತವೆ. ಒತ್ತಡದ ಬದುಕು ದೂರವಾಗಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ

ಗಜೇಂದ್ರಗಡ: ಭಾರತೀಯ ಸಂಸ್ಕೃತಿ ಹಾಗೂ ಧರ್ಮಾಚರಣೆ ಅತ್ಯಂತ ಸನಾತನ ಧರ್ಮವಾಗಿದ್ದು, ಭಾರತೀಯ ಪರಂಪರೆ ಅನ್ಯದೇಶಿಯರು ಅನುಸರಿಸುತ್ತಿದ್ದಾರೆ, ವೈಜ್ಞಾನಿಕತೆ ಹಿನ್ನೆಲೆ ಹೊಂದಿದ ನಮ್ಮ ಧರ್ಮ ಸಂರಕ್ಷಣೆಯ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಚೈತನ್ಯಾಶ್ರಮ ಶ್ರೀಕ್ಷೇತ್ರ ಹೆಬ್ಬಳ್ಳಿ ದತ್ತಾವಧೂತ ಮಹಾರಾಜರು ಹೇಳಿದರು.

ಪಟ್ಟಣ ಸಮೀಪದ ಸೂಡಿ ಗ್ರಾಮದಲ್ಲಿ ಶಿವಚಿದಂಬರೇಶ್ವರ ೫೪ನೇ ಜನೋತ್ಸವದ ಪ್ರಯುಕ್ತ ಗುರುವಾರ ಯಾಜ್ಞವಲ್ಯ್ಕ ಆಶ್ರಮ ಚಿದಂಬರೇಶ್ವರ ದೇವಸ್ಥಾನದಲ್ಲಿ ಲೋಕ ಕಲ್ಯಾಣರ್ಥವಾಗಿ ೩೦ ಗಂಟೆಗಳ ಕಾಲ ಅಖಂಡ ಹನುಮಾನ್ ಚಾಲೀಸ್ ಪಾರಾಯಣ ಹಾಗೂ ಚಿದಂಬರೇಶ್ವರ ರಥೋತ್ಸವ ಹಾಗೂ ಶ್ರೀಚಿದಂಬರ ಪಂಚಾಂಗ ಬಿಡುಗಡೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಹನುಮಾನ್ ಚಾಲೀಸ್ ಪಠಣ ಮಾಡುವುದರಿಂದ ಸಂಕಷ್ಟಗಳು ದೂರುವಾಗುತ್ತವೆ. ಒತ್ತಡದ ಬದುಕು ದೂರವಾಗಿ ಸಂತೋಷದ ವಾತಾವರಣ ನಿರ್ಮಾಣವಾಗುತ್ತದೆ. ರಾಮಚಂದ್ರನ ಪರಮ ಭಕ್ತ ಹನುಮಂತನನ್ನು ಸ್ತುತಿಸುವ ನಲವತ್ತು ಪದ್ಯ ಚರಣಗಳನ್ನು ಹನುಮಾನ್ ಚಾಲೀಸಾ ಎಂದು ಕರೆಯುತ್ತಾರೆ. ಗೋಸ್ವಾಮಿ ತುಳಸಿದಾರು ರಚಿಸಿದ ಹನುಮಾನ್ ಚಾಲೀಸ್ ಪಠಣದಿಂದ ಮನುಷ್ಯನು ಎಲ್ಲ ರೀತಿಯ ಸಂಕಷ್ಟಗಳಿಂದ ಪಾರಾಗಬಹುದು. ಮುಖ್ಯವಾಗಿ ಶನಿ ಕಾಟ ಹೊಂದಿರುವವರು ಹನುಮಾನ್ ಚಾಲೀಸ್ ಪಠಣದಿಂದ ಶನಿಕಾಟ ದೂರವಾಗುತ್ತದೆ. ವಿಶೇಷವಾಗಿ ಪ್ರತಿ ರಾತ್ರಿ ಪಠಿಸುವುದರಿಂದ ಜೀವನದಲ್ಲಿ ಎದುರಾಗುವ ಪೀಡೆಗಳಿಂದ ಮುಕ್ತಿ ಪಡೆಯಬಹುದು ಎಂದರು.

ಪಂ.ಭುಜಂಗಭಟ್ಟ ಜೋಶಿ ಹಾಗೂ ಚಿದಂಬರಭಟ್ಟ ಜೋಶಿ ಮಾತನಾಡಿದರು.

ಇದೇ ವೇಳೆ ಪ್ರಸಕ್ತ ವರ್ಷದ ವಿಶ್ವಾವಸುನಾಮ ಸಂವತ್ಸರದ ಶ್ರೀಚಿದಂಬರ ಪಂಚಾಂಗವನ್ನು ಗುರುಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು. ಬಳಿಕ ಶಿವಚಿದಂಬರ ಸ್ವಾಮಿಗಳ ೫೪ನೇ ಜನೋತ್ಸವ ಪ್ರಯುಕ್ತ ವೇದಘೋಷ, ಭಜನೆ ಹಾಗೂ ವಿವಿಧ ವಾದ್ಯವೈಭವಗೊಳೊಂದಿಗೆ ಚಿದಂಬರೇಶ್ವರ ರಥೋತ್ಸವ ಸಕಲ ಸದ್ಭಕ್ತರ ಮಧ್ಯೆ ವೈಭವದಿಂದ ಜರುಗಿತು.

ದಿಗಂಬರಶಾಸ್ತ್ರೀ ಕುರ್ತಕೋಟಿ, ಎ.ಜಿ. ಕುಲಕರ್ಣಿ, ಬಿ.ಆರ್. ಕುಲಕರ್ಣಿ, ವಿಶ್ವನಾಥಭಟ್ಟ ವೈದ್ಯ, ಅರುಣ ಕುಲಕರ್ಣಿ, ವಿನಾಯಕರಾವ್‌ ಗೊಂಬಿ, ನಟರಾಜ ಜೋಶಿ, ಕಿರಣ ಜೋಶಿ, ವೆಂಕಟೇಶ ಜೋಶಿ ಸೇರಿದಂತೆ ಸಕಲ ಸದ್ಭಕ್ತರು ಭಾಗವಹಿಸಿದ್ದರು.

Share this article