ಸಿದ್ದಯ್ಯ ಹಿರೇಮಠ
ಕನ್ನಡಪ್ರಭ ವಾರ್ತೆ ಕಾಗವಾಡಕರ್ನಾಟಕ ಹಾಗೂ ಮಹಾರಾಷ್ಟ್ರದ ಅಥಣಿ ತಾಲೂಕಿನ ಗಡಿ ಭಾಗದ ಅಭಿವೃದ್ಧಿ ಅಂದ್ರೆ ಈ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಯಾಕಿಷ್ಟು ನಿರ್ಲಕ್ಷ್ಯ ಅಂತಾ ಗೊತ್ತಾಗೊತ್ತಿಲ್ಲ.ಬಡಜನರ ಕೈಗೆ ಕೆಲಸವಿಲ್ಲದೆ ಗುಳೆ ಹೊರಟಿರುವ ಜನ ಒಂದೆಡೆಯಾದರೆ, ಸರಕಾರಿ ಶಾಲೆಗಳಲ್ಲಿ ಶಿಕ್ಷಕರೇ ಇಲ್ಲದೆ ಮಕ್ಕಳು ಶಾಲೆಗೆ ಹೋಗದ ಪರಿಸ್ಥಿತಿ ಮತ್ತೊಂದೆಡೆ. ಈ ಎಲ್ಲವೂಗಳ ಮಧ್ಯ ಕನ್ನಡ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕೊಠಡಿಗಳ ಸಮಸ್ಯೆ ಎದುರಾಗಿದ್ದು ಅರಳಿ ಮರದ ಕೆಳಗೆ ಕುಳಿತು ವಿದ್ಯಾರ್ಥಿಗಳು ಪಾಠ ಕೇಳುವ ಅನಿವಾರ್ಯತೆ ಅಥಣಿ ತಾಲೂಕಿನ ಆಜೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಿರ್ಮಾಣವಾಗಿದೆ. ಗಡಿನಾಡಿನಲ್ಲಿ ಕನ್ನಡ ಶಾಲೆಗಳಿಗೆ ಬಂದೊದಗಿರುವ ದುಸ್ಥಿತಿ ಇದು ಸಾರಿ ಹೇಳುವಂತಿದೆ.
ಈ ಶಾಲೆಯಲ್ಲಿ ಮಕ್ಕಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಅಡುಗೆ ಕೋನೆ, ಕಂಪೌಂಡ್ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳ ಕೊರತೆ ಜೊತೆ ಅತಿಥಿ ಶಿಕ್ಷಕರಿಂದಲೆ ಪಾಠ ಮಾಡುವಂತಾಗಿದೆ. ಶಿಕ್ಷಣ ಇಲಾಖೆ ಗಡಿ ಭಾಗದ ಶಾಲೆಗಳ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ತೋರಿದ್ದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಗಡಿ ಭಾಗದ ಹತ್ತಾರು ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರಿಂದ ಪಾಠ ಮಾಡಲಾಗುತ್ತಿದೆ. ಇದರಿಂದ ಪಾಲಕರು ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದು, ಕನ್ನಡ ಶಾಲೆಗಳು ಮುಚ್ಚುವಂತಾಗಿದೆ. ಆದಷ್ಟು ಬೇಗ ಶಿಕ್ಷಣ ಇಲಾಖೆ ಗಡಿ ಭಾಗದ ಶಾಲೆಗಳಿಗೆ ಹೆಚ್ಚಿನ ಒತ್ತು ನೀಡಿ ಕನ್ನಡ ಶಾಲೆಗಳ ಅಭಿವೃದ್ಧಿ ಮಾಡಬೇಕಿದೆ ಎನ್ನುತ್ತಾರೆ ಶಾಲಾ ವಿದ್ಯಾರ್ಥಿ ಕಾರ್ತಿಕ.------
ಕೋಟ್...ಪೋಲಾಗಿ ಹೋಗುವ ಹಲವಾರು ಯೋಜನೆಗಳಿಗೆ ಸರಕಾರ ಕೋಟ್ಯಂತರ ರು. ವೆಚ್ಚ ಮಾಡುತ್ತಿದೆ. ಆದರೆ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲು ಹಿಂದೇಟು ಹಾಕುತ್ತಿರುವುದು ವಿಪರ್ಯಾಸ. ಈಗಲಾದರು ಸರ್ಕಾರ ಎಚ್ಚೆತ್ತುಕೊಂಡು ಕೊಠಡಿಗಳನ್ನು ನಿರ್ಮಿಸಲಿ, ಇಲ್ಲದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುವುದು.
- ಲಕ್ಷ್ಮಣ ಕೋಳಿ, ಜನಪರ ಹೋರಾಟಗಾರರು