ಕನ್ನಡಪ್ರಭ ವಾರ್ತೆ ಕಾರವಾರ
ಭಾರತೀಯ ನೌಕಾ ಸೇನೆಯಲ್ಲಿ ಸುದೀರ್ಘಕಾಲ ಸೇವೆ ಸಲ್ಲಿಸಿ ನಿವೃತ್ತಿ (ಡಿಕಮಿಷನ್) ಹೊಂದಿದ ಬಳಿಕ ಚಾಪೆಲ್ ನೌಕೆಯನ್ನು ತಂದು ಇಲ್ಲಿನ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಇರಿಸಲಾಗಿದೆ. ಪ್ರತಿನಿತ್ಯ ನೂರರು ಜನರು ಈ ನೌಕೆಯ ವೀಕ್ಷಣೆಗೆ ಬರುತ್ತಾರೆ. ಆದರೆ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.
ಡೆಕ್ಲೆಟ್ (ನೌಕೆಯ ಮೇಲ್ಭಾಗ)ಗೆ ಹಾಕಿದ್ದ ಎಫ್‌ಆರ್‌ಪಿ (ಫೈಬರ್ ರೇನ್‌ಫೋರ್ಸಡ್ ಪ್ಲಾಸ್ಟಿಕ್) ಕಿತ್ತು ಹೋಗಿದ್ದು, ಕಬ್ಬಿಣದ ಭಾಗ ತುಕ್ಕು ಹಿಡಿಯಲು ಆರಂಭಿಸಿದೆ. ಮಳೆಯಾದಲ್ಲಿ ನೌಕೆಯ ಒಳಗೂ ಮಳೆಯ ನೀರು ಸೋರಿಕೆ ಆಗುತ್ತಿದೆ. ಹೀಗಾಗಿ ತಾಡಪಲ್ ಮುಚ್ಚಲಾಗುತ್ತದೆ.ಮಳೆ ನೀರಿನ ತೋರಿಕೆ ತಡೆಯಲು ನೌಕೆಗಳಿಗೆ ಎಫ್‌ಆರ್‌ಪಿ ಹಾಗೂ ಜಿಆರ್‌ಪಿ (ಗ್ಲಾಸ್ ರೇನ್‌ಫೊರ್ಸಡ್ ಪ್ಲಾಸ್ಟಿಕ್) ಎರಡು ತರಹದ ಕೋಟಿಂಗ್ ಬರುತ್ತದೆ. ಸೇನೆಯಿಂದ ನಿವೃತ್ತಿ ಪಡೆದ ನೌಕೆಗಳಿಗೆ ಸಾಮಾನ್ಯವಾಗಿ ಎಫ್‌ಆರ್‌ಪಿ ಕೋಟಿಂಗ್ ಹಾಗೂ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಜಿಆರ್‌ಪಿ ಕೋಟಿಂಗ್ ಮಾಡಲಾಗುತ್ತದೆ. ತಾಲೂಕಿನ ಅರಗಾದ ಕದಂಬ ನೌಕಾನೆಲೆಯು ಚಾಪೆಲ್ ನೌಕೆಯ ನಿರ್ವಹಣೆ ಹೊಣೆಹೊತ್ತಿದ್ದು, ಆದರೆ ಈ ಬಗ್ಗೆ ಹೆಚ್ಚು ಗಮನ ನೀಡುತ್ತಿಲ್ಲ. ನಿರ್ವಹಣೆ ಆಗದ ಬಗ್ಗೆ ದೂರು ಬಂದ ಕಾರಣ ಡಿಸಿ ವೀಕ್ಷಣೆ ಮಾಡಿದರು.
ಮಾಧ್ಯಮದವರೊಂದಿಗೆ ಮಾತನಾಡಿ ಡಿಸಿ ಗಂಗೂಬಾಯಿ, ವಾರ್‌ಶಿಪ್ ಮ್ಯೂಸಿಯಂ ನಿರ್ವಹಣೆ ಆಗುತ್ತಿಲ್ಲ ಎನ್ನುವ ದೂರು ಬಂದಿತ್ತು. ಜತೆಗೆ ಟುಪೆಲೊ ಯುದ್ಧ ವಿಮಾನದ ಸಂಗ್ರಹಾಲಯದ ಕಾಮಗಾರಿ ನಡೆಯುತ್ತಿದ್ದು, ವೀಕ್ಷಣೆ ಮಾಡಲಾಗಿದೆ. ಯುದ್ಧದಲ್ಲಿ ಬಳಸಿದ ನೌಕೆ, ವಿಮಾನ ಎರಡೂ ಒಂದೇ ಕಡೆ ನೋಡಲು ಸಿಗುತ್ತದೆ. ವಿದ್ಯಾರ್ಥಿಗಳಿಗೆ, ಸೈನ್ಯಕ್ಕೆ ಸೇರುವವರಿಗೆ, ಯುದ್ಧದಲ್ಲಿ ಯಾವ ರೀತಿ ವಿಮಾನ, ನೌಕೆ ಕೆಲಸ ಮಾಡುತ್ತದೆ ಎನ್ನುವುದನ್ನು ಸಾರ್ವಜನಿಕರಿಗೆ ತಿಳಿದುಕೊಳ್ಳಲು ಇದು ಸಹಾಯಕಾರಿಯಾಗಿದೆ ಎಂದರು.
ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಸಮಗ್ರ ಮಾಹಿತಿ ಸಿಗಲು ಟೂರಿಸ್ಟ್ ಮಾಹಿತಿ ಕೇಂದ್ರ ಆರಂಭಿಸಲು ಚಿಂತನೆ ನಡೆದಿದೆ. ಪ್ರವಾಸಿತಾಣ, ಧಾರ್ಮಿಕ ಕ್ಷೇತ್ರ, ಪ್ರೇಕ್ಷಣೀಯ ಸ್ಥಳ ಒಳಗೊಂಡು ಸಮಗ್ರ ವಿವರ ನೀಡಲಾಗುತ್ತದೆ ಎಂದ ಅವರು, ಜಿಲ್ಲೆಯ ಕಡಲ ತೀರ, ಜಲಪಾತಗಳಿಗೆ ಆಗಮಿಸುವ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು. ಸ್ಥಳೀಯವಾಗಿ ನಿಯೋಜನೆಗೊಂಡಿರುವ ಲೈಫ್‌ಗಾರ್ಡ್ ಸಿಬ್ಬಂದಿ ಸೂಚನೆ ಪಾಲಿಸಬೇಕು ಎಂದರು. ಕನ್ನಡಪ್ರಭ ವರದಿ