ಜನರ ಬದುಕಿಗೆ ಕಾಂಗ್ರೆಸ್‌ ಸರ್ಕಾರ ಶಾಪ: ಕೋಟ ಶ್ರೀನಿವಾಸ ಪೂಜಾರಿ

KannadaprabhaNewsNetwork |  
Published : May 22, 2025, 01:28 AM IST
ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆಗೊಳಿಸಿದ ಸಂಸದ ಕೋಟ ಶ್ರೀನಿವಾಸ ಪೂಜಾರಿ | Kannada Prabha

ಸಾರಾಂಶ

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ನ್ನು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು.

ಮಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಜ್ಯದ ಜನರ ಬದುಕಿಗೆ ಕಾಂಗ್ರೆಸ್‌ ಸರ್ಕಾರ ಶಾಪವಾಗಿದ್ದು, ದ್ವೇಷ, ಅಸೂಯೆ, ಅಪಪ್ರಚಾರದ ಸರ್ಕಾರ ಬಹಳ ದಿನ ನಡೆಯುವುದಿಲ್ಲ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೂಡಾ ಹಗರಣ, ವಾಲ್ಮೀಕಿ ಹಗರಣ, ರೈತರಿಗೆ ಮೋಸ, ಬಾಣಂತಿಯರ ಸಾವು, ವಕ್ಫ್‌ ಭೂಗಳ್ಳತನ, ಹಾಲಿನ ದರ ಏರಿಕೆ, ಶೇ.60 ಕಮಿಷನ್‌, ದಲಿತರ ಹಣ ಲೂಟಿ, ಹನಿ ಟ್ರ್ಯಾಪ್‌ ಪ್ರಕರಣಗಳು ನಡೆದಿವೆ. ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ಕೃಷಿ ಕ್ಷೇತ್ರವನ್ನು ನಿರ್ಲಕ್ಷಿಸಲಾಗಿದೆ. ಇಷ್ಟೆಲ್ಲ ವೈಫಲ್ಯಗಳಿದ್ದರೂ ಸರ್ಕಾರ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಮಾಡಿ ಜನರನ್ನು ಮೋಸ ಮಾಡಿದೆ. ಬಿಜೆಪಿ ಬಿಡುಗಡೆ ಮಾಡಿರುವ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ ನಿಜವಾದ ಸಾಧನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕಿಸಿದರು.

ಪ್ರಧಾನಿ ಕಿಸಾನ್‌ ಸನ್ಮಾನ್‌ ಯೋಜನೆಯಡಿ ಕೇಂದ್ರದಿಂದ ವಾರ್ಷಿಕ 6 ಸಾವಿರ ರು. ಹಾಗೂ ರಾಜ್ಯ ಸರ್ಕಾರದಿಂದ 4 ಸಾವಿರ ರು. ಸೇರಿಸಿ ಒಟ್ಟು 10 ಸಾವಿರ ರು. ಕೃಷಿಕರ ಖಾತೆಗೆ ಜಮೆ ಆಗುತ್ತಿತ್ತು. ಸರ್ಕಾರ ಅದನ್ನು ಸ್ಥಗಿತಗೊಳಿಸಿದೆ. ಎಸ್‌ಸಿ ಎಸ್‌ಟಿಗೆ ಮೀಸಲಿರಿಸಲಾದ 34,500 ರು. ಮೊತ್ತವನ್ನು ಗ್ಯಾರಂಟಿ ಯೋಜನೆಗೆ ವರ್ಗಾಯಿಸಲಾಗಿದೆ ಎಂದರು.

ರಾಜ್ಯ ಸರ್ಕಾರದ ವೈಫಲ್ಯವನ್ನು ಮರೆ ಮಾಚಲು ವಿನಾ ಕಾರಣ ಪ್ರಧಾನಿ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್‌ ನಾಯಕರು ಕೇವಲವಾಗಿ ಮಾತನಾಡುತ್ತಿದ್ದಾರೆ. ಅಪರೇಷನ್‌ ಸಿಂದೂರ ಭದ್ರತಾ ವೈಫಲ್ಯ ಎನ್ನುವ ಕಾಂಗ್ರೆಸಿಗರು, ಅವರದೇ ಪ್ರಧಾನಿಗಳಾಗಿದ್ದ ಸಂದರ್ಭ ಭದ್ರತೆ ಹೊರತೂ ನಡೆದ ಉಗ್ರ ದಾಳಿ, ಇಂದಿರಾ, ರಾಜೀವ್‌ಗಾಂಧಿ ಹತ್ಯೆ ಬಗ್ಗೆ ಏನೆನ್ನಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ. ಮಂಗಳೂರಲ್ಲೂ ಪಾಲಿಕೆ ಮಾಜಿ ಸದಸ್ಯರು, ಶಾಸಕರು, ಹಿಂದು ಮುಖಂಡರು ಹೀಗೆ ಹಲವರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಆರೋಪಿಸಿದರು.

ಶಾಸಕರಾದ ಡಾ.ಭರತ್‌ ಶೆಟ್ಟಿ, ರಾಜೇಶ್‌ ನಾಯ್ಕ್‌, ಪ್ರತಾಪ್‌ಸಿಂಹ ನಾಯಕ್‌, ಕಿಶೋರ್‌ ಕುಮಾರ್‌, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಪ್ರೇಮಾನಂದ ಶೆಟ್ಟಿ ಇದ್ದರು. .......

ರೌಡಿಶೀಟರ್‌ ಮಾಹಿತಿ ಸಚಿವರಿಗೆ ಬರಲ್ಲ

ರೌಡಿಶೀಟರ್‌ ಯಾರ ಮೇಲೆಲ್ಲ ತೆರೆದಿದ್ದಾರೆ ಎಂಬ ಮಾಹಿತಿ ಸಚಿವರಿಗೆ ಬರುವುದಿಲ್ಲ. ಅದು ಪೊಲೀಸ್‌ ಇಲಾಖೆಯ ನಿಯಮ. ನಾನು ಇಲ್ಲಿನ ಉಸ್ತುವಾರಿ ಸಚಿವನಾಗಿದ್ದಾಗ ಸುಹಾಸ್‌ ಮೇಲೆ ರೌಡಿಶೀಟರ್‌ ತೆರೆದಿರಬಹುದು. ಆ ಮಾಹಿತಿಯನ್ನು ಪೊಲೀಸರು ಉಸ್ತುವಾರಿ ಸಚಿವರಿಗೆ ಹೇಳುವ ಕ್ರಮ ಇಲ್ಲ. ಅದೆಲ್ಲ ಇಲಾಖಾ ಮಟ್ಟದಲ್ಲಿ ತೀರ್ಮಾನವಾಗುತ್ತದೆ. ನೈಜ ಅಥವಾ ವ್ಯಕ್ತಿಗತ ಕಾರಣಕ್ಕಾಗಿ ರೌಡಿಶೀಟರ್‌ ತೆರೆದಿದ್ದರೂ ಆತನ ಸಾವಿನ ಬಳಿಕ ಅದನ್ನೇ ದುರ್ಬಳಕೆ ಮಾಡುವುದು ಸರಿಯಲ್ಲ ಎಂದು ಈ ಕುರಿತ ಪ್ರಶ್ನೆಗೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉತ್ತರಿಸಿದರು.

.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೀದಿ ನಾಯಿ ಮರಿ ದತ್ತು ಪಡೆದು ಮಾನವೀಯತೆ ತೋರಿ
5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಕಡ್ಡಾಯ