ದೊಡ್ಡಬಳ್ಳಾಪುರ: ಹೋಳಿ ಹುಣ್ಣಿಮೆಯಂದು ಮಂಗಳವಾರ ಸಂಭವಿಸಿದ ಖಗ್ರಾಸ ಚಂದ್ರಗ್ರಹಣ ಆರಂಭಕ್ಕೂ ಮುನ್ನ ತಾಲೂಕಿನ ತೂಬಗೆರೆಯ ತೇರಿನ ಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿಯ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಭಕ್ತರು ಶ್ರದ್ಧಾ ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು, ಹಣ್ಣು, ಧವನ ಅರ್ಪಿಸಿ ಭಕ್ತಿ ಭಾವ ಮೆರೆದರು. ಮುಂಜಾನೆಯಿಂದಲೇ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿವಿಧ ಸಂಘಟನೆಗಳ ವತಿಯಿಂದ ಪಾನಕ ಮತ್ತು ಮಜ್ಜಿಗೆ ವಿತರಣೆ ನಡೆಯಿತು.
ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಸುಪ್ರಭಾತ ಸೇವೆ, ತೋಮಾಲೆ ಸೇವೆ, ನವಗ್ರಹ ಪೂಜೆ ಹಾಗೂ ರಥದ ಮುಂಭಾಗದಲ್ಲಿ ಹೋಮಗಳನ್ನು ನೆರವೇರಿಸಲಾಯಿತು. ವಿಶೇಷ ಪುಷ್ಪಗಳಿಂದ ಅಲಂಕರಿಸಲ್ಪಟ್ಟ ಸ್ವಾಮಿಗೆ ಆಗಮಿಕರ ಮಂತ್ರಪಠಣಗಳೊಂದಿಗೆ ಭಕ್ತಜನ ಸಾಗರದಿಂದ ಗೋವಿಂದ ಗೋವಿಂದ ಜಯಘೋಷ ಮೊಳಗಿತು.ಜಾತ್ರೆಯ ಪ್ರಯುಕ್ತ ದೇವಾಲಯದ ಜೀರ್ಣೋದ್ಧಾರ ಸಮಿತಿಯಿಂದ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೆ ಪಾನಕ, ಕೋಸಂಬರಿ, ನೀರು ಹಾಗೂ ಮಜ್ಜಿಗೆ ವಿತರಿಸಲಾಯಿತು. ತೂಬಗೆರೆ ರಾಶಿ ರಾಪು ಅಭಿಮಾನಿ ಸಂಘದ ವತಿಯಿಂದಲೂ ಮಜ್ಜಿಗೆ ಹಾಗೂ ಕೋಸಂಬರಿ ವಿತರಣೆ ನಡೆಯಿತು.
ಚಂದ್ರಗ್ರಹಣ ಇರುವ ಹಿನ್ನೆಲೆಯಲ್ಲಿ ದೇವಾಲಯವನ್ನು ಮಧ್ಯಾಹ್ನ 1 ಗಂಟೆಗೆ ಮುಚ್ಚಲಾಯಿತು. ಗ್ರಹಣ ದೋಷ ನಿವಾರಣೆ ಬಳಿಕ ದೇವಸ್ಥಾನದಲ್ಲಿ ಶುದ್ಧೀಕರಣ ಕಾರ್ಯ ನೆರವೇರಿಸಿ, ಸಂಜೆ 7.30ರಿಂದ ಭಕ್ತರಿಗೆ ಮತ್ತೆ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿ ವರ್ಣರಂಜಿತ ಬಾಣಬಿರುಸುಗಳ ಪ್ರದರ್ಶನದೊಂದಿಗೆ ಸ್ವಾಮಿಗೆ ಸೂರ್ಯಮಂಡಲೋತ್ಸವ ನಡೆಯಿತು.
ಬ್ರಹ್ಮರಥೋತ್ಸವದಲ್ಲಿ ಮಾಜಿ ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ತಾಲೂಕು ಆಡಳಿತದ ಸಿಬ್ಬಂದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಫೋಟೋ-
3ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ಇತಿಹಾಸ ಪ್ರಸಿದ್ದ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನಡೆಯಿತು.--
3ಕೆಡಿಬಿಪಿ2- ದೊಡ್ಡಬಳ್ಳಾಪುರದ ತೂಬಗೆರೆ ವೆಂಕಟರಮಣಸ್ವಾಮಿಗೆ ರಥೋತ್ಸವದ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.