12 ರಂದು ಶ್ರೀನಿಮಿಷಾಂಭ ದೇವಿಯ ರಥೋತ್ಸವ;ಕಾವೇರಿ ನದಿಯಲ್ಲಿ ಭಕ್ತರ ಮಾಘಸ್ನಾನ

KannadaprabhaNewsNetwork | Published : Feb 8, 2025 12:32 AM

ಸಾರಾಂಶ

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಧ್ಯರಾತ್ರಿಯಿಂದಲೇ ಸ್ನಾನ ಮಾಡಲು ಹಾಗೂ ಬಟ್ಟೆ ಬದಲಿಸಿಕೊಳ್ಳಲು ನದಿ ತೀರದಲ್ಲಿ ಬ್ಯಾರಿಕೇಡ್‌ಗಳ ನಿರ್ಮಿಸಿ ಸಿದ್ಧತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ನದಿ ಪಾತ್ರದಲ್ಲಿ ಮುಂಜಾಗ್ರತ ಕ್ರಮವಾಗಿ ನುರಿತ ಈಜುಗಾರರು ಹಾಗೂ ಅಗ್ನಿ ಶಾಮಕ ದಳ ನಿಯೋಜಿಸಲಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀ ನಿಮಿಷಾಂಭ ದೇವಾಲಯದಲ್ಲಿ ಫೆ.12ರಂದು ಮಾಘ ಶುದ್ಧ ಪೌರ್ಣಮಿ ಮಹೋತ್ಸವದ ಅಂಗವಾಗಿ ದೇವಿಗೆ ಇದೇ ಮೊದಲ ಬಾರಿಗೆ ರಥೋತ್ಸವ ನೆರವೇರಲಿದೆ.

ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಸಿ.ಜೆ.ಕೃಷ್ಣ ಕಚೇರಿಯಲ್ಲಿ ಮಾಘ ಶುದ್ಧ ಹುಣ್ಣಿಮೆ ಪೂರ್ವ ಸಿದ್ಧತೆಗಳ ಕುರಿತು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಫೆ.11ರ ಮಧ್ಯರಾತ್ರಿ 1 ಗಂಟೆಯಿಂದಲೇ ಇಲ್ಲಿನ ಕಾವೇರಿ ನದಿಯಲ್ಲಿ ಭಕ್ತರಿಗೆ ಮಾಘ ಶುದ್ಧ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಫೆ.12ರ ರಾತ್ರಿ 10 ಗಂಟೆವರೆಗೂ ಮಾಘ ಶುದ್ಧ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಮೊದಲ ಬಾರಿಗೆ ರಥೋತ್ಸವ:

ಮಾಘ ಶುದ್ಧ ಪೌರ್ಣಮಿ ಮಹೋತ್ಸವದ ಅಂಗವಾಗಿ ದೇವಾಲಯದ ಆವರಣದಲ್ಲಿ ಇದೇ ಮೊದಲ ಬಾರಿಗೆ ದೇವಿಗೆ ರಥೋತ್ಸವ ಜರುಗಲಿದೆ. ಫೆ.12ರ ಬೆಳಗ್ಗೆ 5.20 ರಿಂದ 6 ಗಂಟೆಗೆ ಸಲ್ಲುವ ಶುಭಲಗ್ನದಲ್ಲಿ ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ಇಲಾಖೆ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡುವುದಾಗಿ ಹೇಳಿದರು.

ಅಗತ್ಯ ಮುನ್ನೆಚ್ಚರಿಕೆ ಕ್ರಮ:

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಧ್ಯರಾತ್ರಿಯಿಂದಲೇ ಸ್ನಾನ ಮಾಡಲು ಹಾಗೂ ಬಟ್ಟೆ ಬದಲಿಸಿಕೊಳ್ಳಲು ನದಿ ತೀರದಲ್ಲಿ ಬ್ಯಾರಿಕೇಡ್‌ಗಳ ನಿರ್ಮಿಸಿ ಸಿದ್ಧತೆಗೆ ಅಗತ್ಯ ಕ್ರಮಕೈಗೊಳ್ಳಲಾಗಿದೆ. ನದಿ ಪಾತ್ರದಲ್ಲಿ ಮುಂಜಾಗ್ರತ ಕ್ರಮವಾಗಿ ನುರಿತ ಈಜುಗಾರರು ಹಾಗೂ ಅಗ್ನಿ ಶಾಮಕ ದಳ ನಿಯೋಜಿಸಲಾಗಿದೆ ಎಂದರು.

ದೇಗುಲದ ಸುತ್ತಮುತ್ತ ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸೂಕ್ಷ್ಮ ಸ್ಥಳಗಳಲ್ಲಿ 50ಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಅನಗತ್ಯ ನೂಕು ನುಗ್ಗಲು ತಡೆಯಲು ಬ್ಯಾರಿಕೇಡಿಂಗ್ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿಯನ್ನು ನೇಮಿಸಿ ಬಿಗಿ ಪೊಲೀಸ್ ಬಂದೋಬಸ್ತ್, ಜೊತೆಗೆ ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭಕ್ತರಿಗೆ ವಿತರಿಸಲು 50ಸಾವಿರ ಲಾಡು ತಯಾರಿಸಲಾಗಿದೆ. ಅಂದು ಪ್ರತಿ ವರ್ಷದಂತೆ ಬೆಂಗಳೂರಿನ ದಾನಿಯೊಬ್ಬರು ಊಟದ ವ್ಯವಸ್ಥೆ ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ:

ಫೆ.11ರ ಮಂಗಳವಾರ ಸಂಜೆಯಿಂದಲೇ ಸ್ಥಳೀಯ ಹಾಗೂ ನುರಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ದೇವಾಲಯದ ಮುಂಭಾಗದ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಭಕ್ತಿ ಗೀತೆ, ಸುಗಮ ಸಂಗೀತ, ಭಜನೆ, ಹರಿಕಥೆ, ಭರತನಾಟ್ಯ ಸೇರಿ ವಿವಿಧ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಾಘ ಶುದ್ಧ ಪೌರ್ಣಮಿ ಮಹೋತ್ಸವಕ್ಕೆ ಮಂಡ್ಯ, ಮೈಸೂರು, ಬೆಂಗಳೂರು ಸೇರಿ ವಿವಿಧೆಡೆಗಳಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ ಎಂದರು.

ದೇವಿಗೆ ವಿಶೇಷ ಪೂಜೆ:

ಅಂದು ರಾತ್ರಿಯಿಂದಲೇ ದೇವಿಗೆ ವಿಶೇಷ ಅಲಂಕಾರದೊಂದಿಗೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಪೂರ್ವಕ ಮಹಾಭಿಷೇಕ, ಗಣಕಹೋಮ, ನಕ್ಷತ್ರಹೋಮ, ದುರ್ಗಾಹೋಮ, ಸತ್ಯನಾರಾಯಣ ಪೂಜೆ ಸೇರಿ ವಿಶೇಷ ಪೂಜೆಗಳನ್ನು ಲೋಕ ಕಲ್ಯಾಣಾರ್ಥ ಏರ್ಪಡಿಸಲಾಗಿದೆ ಎಂದು ಹೇಳಿದರು.

ಪೂಜಾ ಕಾರ್ಯಗಳು ನಡೆದ ನಂತರ ಮಹಾ ಮಂಗಳಾರತಿ ಮಾಡಿ ಬಳಿಕ ಬರುವ ಎಲ್ಲಾ ಭಕ್ತರಿಗೂ ಪ್ರಸಾದ ವಿತರಣೆಯಾಗಲಿದೆ ಎಂದು ದೇವಾಲಯದ ಮುಖ್ಯ ಅರ್ಚಕ ಸೂರ್ಯನಾರಾಯಣ ಭಟ್ ಮಾಹಿತಿ ನೀಡಿದರು.

Share this article