ರಾಜಕೀಯ ಆಡಂಬರದಲ್ಲಿ ದಾನದ ಅರ್ಥ ಕಳೆದುಕೊಂಡಿದೆ: ಪ್ರೊ.ಹೊನ್ನೂರಲಿ

KannadaprabhaNewsNetwork |  
Published : Apr 04, 2024, 01:01 AM IST
ಬಳ್ಳಾರಿ ವಿವಿಯಲ್ಲಿ ರಾಷ್ಟ್ರೀಯ ಶೌರ್ಯ ದಿನದ ಅಂಗವಾಗಿ ಜರುಗಿದ ‘ಸ್ವಚ್ಛತಾ ಅಭಿಯಾನ ಮತ್ತು ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಹೊನ್ನೂರಲಿ ಅವರು ಚಾಲನೆ ನೀಡಿ ಮಾತನಾಡಿದರು.  | Kannada Prabha

ಸಾರಾಂಶ

ಮತದಾನವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಪ್ರಜಾಪ್ರಭುತ್ವದ ಚೌಕಟ್ಟನ್ನು ನಿರ್ಮಾಣ ಮಾಡುತ್ತದೆ. ಮತದಾನ ಎನ್ನುವ ಬದಲಾಗಿ ಮತಾಧಿಕಾರ ಎನ್ನುವಂತಾಗಿದೆ.

ಬಳ್ಳಾರಿ: ಮತದಾನಕ್ಕೆ ಸಂವಿಧಾನದಲ್ಲಿ ವಿಶೇಷ ಅರ್ಥ ಹೊಂದಿದ್ದು, ರಾಜಕೀಯದ ಆಡಂಬರದಲ್ಲಿ ದಾನ ಎನ್ನುವುದು ಅರ್ಥವನ್ನು ಕಳೆದುಕೊಂಡಿದೆ ಎಂದು ಸರಳಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಹೊನ್ನೂರಲಿ ಹೇಳಿದರು.

ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಾಗೂ ಬೆಂಗಳೂರು ಪ್ರಾದೇಶಿಕ ನಿರ್ದೇಶಕರು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕಗಳು ರಾಷ್ಟ್ರೀಯ ಶೌರ್ಯ ದಿನದ ಅಂಗವಾಗಿ ಜಂಟಿಯಾಗಿ ಆಯೋಜಿಸಿದ್ದ ಸ್ವಚ್ಛತಾ ಅಭಿಯಾನ ಮತ್ತು ಮತದಾನ ಜಾಗೃತಿ ಚಾಲನೆ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮತದಾನವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗವಾಗಿದ್ದು, ಪ್ರಜಾಪ್ರಭುತ್ವದ ಚೌಕಟ್ಟನ್ನು ನಿರ್ಮಾಣ ಮಾಡುತ್ತದೆ. ಮತದಾನ ಎನ್ನುವ ಬದಲಾಗಿ ಮತಾಧಿಕಾರ ಎನ್ನುವಂತಾಗಿದೆ. ಅನಕ್ಷರಸ್ಥರು, ಬಡವರು, ಸಮಾಜದ ಕೆಳವರ್ಗದವರು ಮತದಾನ ಮಾಡಲು ಮುಂದಾಗುತ್ತಿದ್ದಾರೆ. ಅಕ್ಷರಸ್ಥರು, ಬುದ್ಧಿಜೀವಿಗಳು ಮತದಾನಕ್ಕೆ ಮುಂದಾಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜಕೀಯ ಸೇವಾ ಕ್ಷೇತ್ರವಾಗಿದೆಯಾದರೂ ಮಾಧ್ಯಮಗಳು ರಾಜಕೀಯವನ್ನು ಕೆಟ್ಟದಾಗಿ ಬಿಂಬಿಸುತ್ತಿವೆ. ರಾಜಕಾರಣಿಗಳನ್ನು ನಕಾರಾತ್ಮಕವಾಗಿ ತೋರಿಸಲಾಗುತ್ತಿದೆ. ಸರಿಯಾದ ವ್ಯಕ್ತಿ ಚುನಾಯಿತಗೊಂಡರೆ ಉತ್ತಮ ಸರ್ಕಾರ ಆಯ್ಕೆಯಾಗುತ್ತದೆ. ಇದರಿಂದ ಸ್ವಸ್ಥ ಸಮಾಜ ನಿರ್ಮಾಣವಾಗುತ್ತದೆ. ಒಳ್ಳೆ ಸರ್ಕಾರ ಆಯ್ಕೆ ಮಾಡಲು ನಾವೆಲ್ಲರೂ ಮತದಾನಕ್ಕೆ ಮುಂದಾಗೋಣ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಕೆ.ಎಂ. ಮೇತ್ರಿ ಮಾತನಾಡಿ, ದಾನ ಎನ್ನುವುದು ಪವಿತ್ರವಾದದ್ದು. ಆದರೆ ಇಂದು ಅದು ತನ್ನ ಅಸ್ತಿತ್ವ ಕಳೆದುಕೊಂಡಿದೆ. ಜನಪ್ರತಿನಿಧಿಗಳನ್ನು ನಿಯಂತ್ರಿಸಲು ಮತ್ತು ತಮ್ಮದೇ ಸರ್ಕಾರವನ್ನು ಆಯ್ಕೆಗೊಳಿಸಲು ಮತದಾನವು ಪ್ರಮುಖವಾಗಿದೆ. ಸೂಕ್ತವಾದ ಮಾನದಂಡದೊಂದಿಗೆ ಮತದಾನ ಮಾಡಿದಲ್ಲಿ ಸಮುದಾಯದಲ್ಲಿ ಬದಲಾವಣೆಯ ತರಲು ಸಾಧ್ಯವಾಗುತ್ತದೆ ಎಂದರು. ಕುಲಸಚಿವ ಎಸ್.ಎನ್ ರುದ್ರೇಶ್ ಮಾತನಾಡಿದರು.

ಕಾರ್ಯಕ್ರಮದ ಸಂಯೋಜಕರಾದ ಡಾ. ಕುಮಾರ್ ಹಾಗೂ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಸಂಯೋಜಕ ಡಾ.ಶಶಿಧರ ಕೆಲ್ಲೂರು ಕಾರ್ಯಕ್ರಮ ನಿರ್ವಹಿಸಿದರು.

ವಿವಿಯ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ, ಮತ್ತು ವಿದ್ಯಾರ್ಥಿಗಳು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ