ಹಣಪಾವತಿಯ ಕೌಂಟರೇ ಇಲ್ಲದ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆ

KannadaprabhaNewsNetwork | Published : Dec 10, 2024 12:33 AM
ಶಂಕರನಾರಾಯಣದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಭಾನುವಾರ ಉದ್ಘಾಟನೆಗೊಂಡಿತು. ನಾರಾಯಣ ನೇತ್ರಾಲಯ ಇದರ ನಿರ್ವಹಣೆ ಮಾಡಲಿದೆ. ಉನ್ನತ ಗುಣಮಟ್ಟದ ಆರೈಕೆಗಾಗಿ ತಜ್ಞ ವೈದ್ಯರ ಮತ್ತು ಆರೋಗ್ಯ ವೃತ್ತಿಪರರ ಸೇವೆಯನ್ನು ಒದಗಿಸಲು ಈ ಚಾರಿಟೇಬಲ್ ಆಸ್ಪತ್ರೆ ಸಜ್ಜಾಗಿದೆ.
Follow Us

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಶಂಕರನಾರಾಯಣದಲ್ಲಿ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಯು ವಿಶ್ವದರ್ಜೆಯ ಚಿಕಿತ್ಸಾ ಸೌಲಭ್ಯಗಳನ್ನು ಉಚಿತವಾಗಿ ಚಿಕಿತ್ಸೆ ನೀಡುವ ಉದ್ದೇಶದೊಂದಿಗೆ ಭಾನುವಾರ ಉದ್ಘಾಟನೆಗೊಂಡಿತು. ನಾರಾಯಣ ನೇತ್ರಾಲಯ ಇದರ ನಿರ್ವಹಣೆ ಮಾಡಲಿದೆ. ಉನ್ನತ ಗುಣಮಟ್ಟದ ಆರೈಕೆಗಾಗಿ ತಜ್ಞ ವೈದ್ಯರ ಮತ್ತು ಆರೋಗ್ಯ ವೃತ್ತಿಪರರ ಸೇವೆಯನ್ನು ಒದಗಿಸಲು ಈ ಚಾರಿಟೇಬಲ್ ಆಸ್ಪತ್ರೆ ಸಜ್ಜಾಗಿದೆ.

ಶಂಕರನಾರಾಯಣ ಕನ್‌ಸ್ಟ್ರಕ್ಷನ್ಸ್ ಪ್ರೈ. ಲಿ.ನ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಎನ್. ಸೀತಾರಾಮ್ ಶೆಟ್ಟಿ ಅವರು ತಮ್ಮ ಸಂಸ್ಥೆಯ ಸಿಎಸ್‌ಆರ್ ಯೋಜನೆಯಡಿ ಈ ಸ್ಥಾಪನೆ ಮಾಡಿದ್ದು, ಅವರ ಹಿರಿಯ ಸಹೋದರ, ನಾರಾಯಣ ನೇತ್ರಾಲಯ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಸಂಸ್ಥಾಪಕ ದಿವಂಗತ ಡಾ.ಭುಜಂಗ ಶೆಟ್ಟಿ ಅವರು ಈ ಯೋಜನೆಯ ಬೆನ್ನೆಲುಬಾಗಿದ್ದರು. ಡಾ.ಎನ್ ಸೀತಾರಾಮ್ ಶೆಟ್ಟಿ ಅವರ ಪುತ್ರ ಭೂಮಿಪುತ್ರ ಆರ್ಕಿಟೆಕ್ಚರ್‌ನ ವ್ಯವಸ್ಥಾಪಕ ನಿರ್ದೇಶಕ ಅಲೋಕ್ ಶೆಟ್ಟಿ ಈ ಆಸ್ಪತ್ರೆಯನ್ನು ವಿಶ್ವದರ್ಜೆಯಲ್ಲಿ ವಿನ್ಯಾಸಗೊಳಿಸಿದ್ದಾರೆ.

ಹಣ ಪಾವತಿಸುವ ಕೌಂಟರ್‌ಗಳಿಲ್ಲದ ಈ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ವಾರ್ಷಿಕವಾಗಿ ೭೦,೦೦೦ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗಳನ್ನು ನಿರ್ವಹಿಸುವ ಸಾಮರ್ಥ್ಯವಿರುವ ಎರಡು ಅಲ್ಟ್ರಾ ಆಪರೇಷನ್ ಥಿಯೇಟರ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಿದೇಶದಿಂದ ಆಮದು ಮಾಡಲಾದ ಫ್ಯಾಕೊ ಯಂತ್ರಗಳನ್ನು ಬಳಸಲಾಗುತ್ತದೆ

ಉದ್ಘಾಟನೆ ಸಂದರ್ಭದಲ್ಲಿ ಮಾತನಾಡಿದ ಡಾ.ಎನ್.ಸೀತಾರಾಮ ಶೆಟ್ಟಿ ಅವರು, ದಾರ್ಶನಿಕ ಸಿ.ನಾರಾಯಣ ಶೆಟ್ಟಿ ಅವರ ೧೦೦ ನೇ ಜನ್ಮ ವಾರ್ಷಿಕೋತ್ಸವ ಅಂಗವಾಗಿ ಈ ಆಸ್ಪತ್ರೆಯನ್ನು ಜನತೆಯ ಸೇವೆಗಾಗಿ ಅರ್ಪಿಸಲಾಗಿದೆ. ಈ ಚಾರಿಟಬಲ್ ಆಸ್ಪತ್ರೆಯು ತಮ್ಮ ಸಂಸ್ಥೆ ಸಾಮಾಜಿಕ ಜವಾಬ್ದಾರಿಯ ಪರಂಪರೆಗೆ ಸಾಕ್ಷಿಯಾಗಿದೆ ಎಂದರು.

ಪ್ರಖ್ಯಾತ ವೈದ್ಯ, ನಾರಾಯಣ ಹೆಲ್ತ್‌ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ, ಮಣಿಪಾಲ್ ಹಾಸ್ಪಿಟಲ್ಸ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಇದ್ದರು.