ಚಾರುಕೀರ್ತಿ ಭಟ್ಟಾರಕರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ

KannadaprabhaNewsNetwork | Published : Dec 7, 2024 12:31 AM

ಸಾರಾಂಶ

ಶ್ರವಣಬೆಳಗೊಳದಲ್ಲಿ ಶುಕ್ರವಾರ ಸಮಾಧಿಸ್ತರಾದ ಕರ್ಮಯೋಗಿ ದಿಗಂಬರ ಜೈನ ಮಹಾಸಂಸ್ಥಾನ ಮಠದ ಚಾರುಕೀರ್ತಿ ಭಟ್ಟಾರಕರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಮಠಕ್ಕೂ ಭಟ್ಟಾರಕ ಸ್ವಾಮಿಗಳಿಗೂ ಅವಿನಾಭಾವ ಸಂಬಂಧವಿತ್ತು, ಚಾರುಕೀರ್ತಿಗಳು ಮಾನವೀಯತೆ ಗುಣ ಹೊಂದಿದ್ದರು. ಸಮಾಜದಲ್ಲಿ ಎಲ್ಲರನ್ನು ಒಂದೇ ಎಂದು ಕಾಣುತ್ತಿದ್ದ ಚಾರುಕೀರ್ತಿಗಳ ಮಾನವೀಯ ಗುಣ ಶ್ರೇಷ್ಠವಾದದ್ದು. ವಿಶೇಷವಾಗಿ ಜ್ಞಾನಾರ್ಜನೆಯಲ್ಲೆ ಕಾಲ ಕಳೆದರೂ ಅವರಿಗೆ ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಚಾರುಕೀರ್ತಿ ಮಹಾತ್ಮರಾದವರು ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ನೆಲೆಯೂರಿ ಜೈನ ಧರ್ಮದ ಕೀರ್ತಿಯನ್ನ ಹೆಚ್ಚಿಸಿದ ಭಟ್ಟಾರಕ ಮಹಾಸ್ವಾಮಿಗಳ ಕುರಿತು ಎಷ್ಟು ಹೇಳಿದರೂ ಸಾಲದು ಎಂದು ತುಮಕೂರಿನ ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ತಿಳಿಸಿದರು.

ತಾಲೂಕಿನ ಶ್ರವಣಬೆಳಗೊಳದಲ್ಲಿ ಶುಕ್ರವಾರ ಸಮಾಧಿಸ್ತರಾದ ಕರ್ಮಯೋಗಿ ದಿಗಂಬರ ಜೈನ ಮಹಾಸಂಸ್ಥಾನ ಮಠದ ಚಾರುಕೀರ್ತಿ ಭಟ್ಟಾರಕರ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದಗಂಗಾ ಮಠಕ್ಕೂ ಭಟ್ಟಾರಕ ಸ್ವಾಮಿಗಳಿಗೂ ಅವಿನಾಭಾವ ಸಂಬಂಧವಿತ್ತು, ಚಾರುಕೀರ್ತಿಗಳು ಮಾನವೀಯತೆ ಗುಣ ಹೊಂದಿದ್ದರು. ಸಮಾಜದಲ್ಲಿ ಎಲ್ಲರನ್ನು ಒಂದೇ ಎಂದು ಕಾಣುತ್ತಿದ್ದ ಚಾರುಕೀರ್ತಿಗಳ ಮಾನವೀಯ ಗುಣ ಶ್ರೇಷ್ಠವಾದದ್ದು. ವಿಶೇಷವಾಗಿ ಜ್ಞಾನಾರ್ಜನೆಯಲ್ಲೆ ಕಾಲ ಕಳೆದರೂ ಅವರಿಗೆ ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ. ಅಷ್ಟರಮಟ್ಟಿಗೆ ಚಾರುಕೀರ್ತಿ ಮಹಾತ್ಮರಾದವರು ಎಂದರು. ಭಾರತೀಯ ಪರಂಪರೆಯಲ್ಲಿ ಗುರುಗಳಿಗೆ ಮೊದಲ ಸ್ಥಾನ ಕೊಟ್ಟಿದ್ದೇವೆ. ಅದರಂತೆ ಎತ್ತರದ ಗುರುವಿನ ಸ್ಥಾನದಲ್ಲಿ ಚಾರುಕೀರ್ತಿ ಭಟ್ಟಾರಕರು ನಿಲ್ಲುತ್ತಾರೆ. ಅಂತಹ ಗುರುವಿನ ಸ್ಥಾನವನ್ನು ಚಾರುಕೀರ್ತಿಗಳು ನಿರಂತರವಾಗಿ ೫ ದಶಕಕ್ಕೂ ಹೆಚ್ಚುಕಾಲ ಸೇವೆ ನೀಡಿದರು. ತಮ್ಮ ಬದುಕನ್ನು ಸಮಾಜಕ್ಕೆ, ಸಂಸ್ಕೃತಿಗಾಗಿ, ಜೈನ ಸಮುದಾಯದ ಸೇವೆಗಾಗಿ ಮೀಸಲಿಟ್ಟ ಮಹಾನ್ ಗುರುಗಳು. ವಿಶ್ವದ ದೊಡ್ಡ ವಿದ್ವಾಂಸರನ್ನು ಕರೆಸಿ ಅನೇಕ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಜೈನ ಸಮಾಜದ ಬೆಳಕನ್ನು ವಿಶ್ವಕ್ಕೆ ಪಸರುವಂತೆ ಮಾಡಿದರು ಎಂದರು. ಎಲ್ಲಿ ಹಿಂಸೆ ನಡೆಯುತ್ತಿದೆ ಅದು ನಡೆಯದಂತೆ ನೋಡಿಕೊಳ್ಳಬೇಕು ಅದೇ ಅಹಿಂಸೆ. ದೇವರು ಕಂಡಂತೆ ಯಾರಿಗೂ ಹಿಂಸೆಯಾಗದ ರೀತಿ ಬದುಕು ಸಾಗಿಸಿದರೆ ಅದೇ ಶ್ರೇಷ್ಠ ಎಂದರು.ಉಡುಪಿಯ ಪೇಜಾವರ ಶ್ರೀ ವಿಶ್ವ ಪ್ರಸನ್ನತೀರ್ಥ ಸ್ವಾಮಿಗಳು ಮಾತನಾಡಿ, ಸಮಾಜದ ಉದ್ಧಾರಕ್ಕೆ ಅವರು ಮಾಡಿದ ಸೇವೆ ಅನನ್ಯ, ವಿಶೇಷವಾಗಿ ಜೈನ ಸಮಾಜದ ಉದ್ಧಾರಕ್ಕೆ ನೀಡಿದ ಕೊಡುಗೆ ಮರೆಯುವಂತಿಲ್ಲ. ಅಹಿಂಸಾ ತತ್ವದ ಬದುಕು ದೇವರಿಗೆ ಪುಷ್ಪ ಸಮರ್ಪಣೆಯಂತೆ ಎಲ್ಲಿ ಹಿಂಸೆ ನಡೆಯುತ್ತಿದೆ. ನಡೆಯದಂತೆ ನೋಡಿಕೊಳ್ಳಬೇಕು ಅದೇ ಅಹಿಂಸೆ. ದೇವರು ಕಂಡಂತೆ, ಯಾರಿಗೂ ಹಿಂಸೆಯಾಗದ ರೀತಿ ಬದುಕು ಸಾಗಿಸಿದರೆ ಅದೇ ಶ್ರೇಷ್ಠ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್ ರಾಜಣ್ಣ ಮಾತನಾಡಿ, ಐತಿಹಾಸಿಕ ಕಾರ್ಯಕ್ರಮ ಇದಾಗಿದ್ದು ಜನರ ಶ್ರೇಯಸ್ಸಿಗೆ ಶ್ರಮಿಸಿದ ಗುರುಗಳು ಇಂದು ನಮ್ಮೊಂದಿಗೆ ಇರದಿರಬಹುದು. ಆದರೆ ಅವರ ಕೊಡುಗೆ ಮುಂದಿನ ಪೀಳಿಗೆಗೂ ಮಾದರಿಯಾಗಿದೆ. ಶ್ರೀಗಳನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಅವರ ಮಾರ್ಗದರ್ಶನದಲ್ಲಿ ಈ ಭಾಗದ ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸೋಣ. ಕಿರಿಯ ಶ್ರೀಗಳ ಮನವಿಗೆ ಸರ್ಕಾರ ಸ್ಪಂದನೆ ಮಾಡಲಿದ್ದು ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಕಾರ್ಯಕ್ರಮದಲ್ಲಿ ಭಾಗವಹಿಸುವುದು ಸೌಭಾಗ್ಯ ಎಂದು ಭಾವಿಸುತ್ತೇನೆ. ಲೋಕಸಭಾ ಸದಸ್ಯನಾಗಿ ಶ್ರೀಮಠಕ್ಕೆ ಜವಾಬ್ದಾರಿಯುತವಾಗಿ ಸೇವೆ ನೀಡುತ್ತೇನೆ ಎಂದರು. ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮಾತನಾಡಿ, ಚಾರುಕೀರ್ತಿ ಭಟ್ಟಾರಕ ಸ್ವಾಮೀಗಳು ನಮ್ಮೊಂದಿಗೆ ಇಲ್ಲ. ಆದರೆ ಅವರ ಆಶೀರ್ವಾದ ಸದಾ ನಮ್ಮೆಲ್ಲರಿಗೂ ಇರಲಿದೆ. ಪೂಜ್ಯರೊಂದಿಗಿನ ಆತ್ಮೀಯತೆ ಕುರಿತು ವಾಚನ ಮಾಡಿದರು.ಮಾಜಿ ಸಚಿವ ಅಭಯಚಂದ್ರ ಜೈನ್, ಸಚಿವ ಸುಧಾಕರ್, ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿದರು. ರಾಜ್ಯದಿಂದ ಆಗಮಿಸಿದ್ದ ಭಟ್ಟಾರಕ ಸ್ವಾಮೀಜಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಪಂಡಿತಾಚಾರ್ಯವರ್ಯರು ಆಶೀರ್ವಚನ ನೀಡಿದರು.ನಿವೃತ್ತ ನ್ಯಾಯಾಧೀಶ ದೇಸಾಯಿ, ಜಿಲ್ಲಾಧಿಕಾರಿ ಸತ್ಯಭಾಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಜಿಲ್ಲಾ ಪಂಚಾಯತಿ ಸಿಇಒ ಬಿ. ಆರ್‌. ಪೂರ್ಣಿಮಾ, ಮಾಜಿ ವಿಧಾನಪರಿಷತ್ ಸದಸ್ಯ ಎಂ. ಎ. ಗೋಪಾಲಸ್ವಾಮಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಫ್ತಾರ್‌ ಪಾಷ, ಇತರರು ಪಾಲ್ಗೊಂಡಿದ್ದರು.

Share this article