ಜುಲೈ 10ರಿಂದ ರಾಘವೇಶ್ವರ ಭಾರತೀ ಶ್ರೀಗಳ ಚಾತುರ್ಮಾಸ್ಯ: ರಾಘವೇಶ್ವರ ಭಾರತಿ ಶ್ರೀ

KannadaprabhaNewsNetwork |  
Published : Jul 03, 2025, 11:49 PM IST
ಶ್ರೀಗಳು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸುತ್ತಿರುವುದು  | Kannada Prabha

ಸಾರಾಂಶ

ನಮ್ಮ ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಸಿಕೊಂಡಂತೆ.

ಗೋಕರ್ಣ: ನಮ್ಮ ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಸಿಕೊಂಡಂತೆ. ಮಾತೃ ಭಾಷೆ ಕನ್ನಡ ಉಳಿಸಿ ಬೆಳೆಸುವ ಉದ್ದೇಶದಿಂದ ಈ ವರ್ಷದ ಚಾರ್ತುಮಾಸ ವ್ರತವನ್ನು ಸ್ವಭಾಷಾ ಚಾರ್ತುಮಾಸ್ಯ ಆಗಿ ಆಚರಿಸಲಾಗುತ್ತದೆ ಎಂದು ರಾಘವೇಶ್ವರ ಭಾರತಿ ಶ್ರೀ ನುಡಿದರು.

ಗುರುವಾರ ಅಶೋಕೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಾತುರ್ಮಾಸ್ಯ ವೈಶಿಷ್ಟ್ಯಗಳ ಬಗ್ಗೆ ವಿವರ ನೀಡಿದ ಶ್ರೀಗಳು, ಭಾಷೆ ಸಂವಹನದ ಸಾಧನ ಮಾತ್ರವಲ್ಲ; ಅದು ಸಂಸ್ಕೃತಿ ವಾಹಕವೂ ಹೌದು. ಭಾಷೆಯೊಡನೆ ಪರಂಪರೆ ಸಾಗಿ ಬಂದಿದೆ. ಹಾಗಾಗಿ ಸ್ವಭಾಷೆಯನ್ನು ಸಂರಕ್ಷಿಸಿಕೊಳ್ಳಬೇಕು. ಅದರಿಂದ ಸ್ವಸಂಸ್ಕೃತಿಯ ಸಂರಕ್ಷಣೆಯಾಗುತ್ತದೆ. ಭಾಷೆಯನ್ನು ರಕ್ಷಿಸುವುದೆಂದರೆ ಅದರಲ್ಲಿ ಮಾತನಾಡುವುದು; ಶುದ್ಧವಾಗಿ ಮಾತನಾಡುವುದು. ಮರೆತುಹೋದ ಮನೆಮಾತನ್ನು ಮರಳಿ ನೆನಪಿಸುವ ಉದ್ದೇಶದಿಂದ ಈ ಬಾರಿಯ ಚಾತುರ್ಮಾಸ್ಯವನ್ನು ಸ್ವಭಾಷಾ ಚಾತುರ್ಮಾಸ್ಯ ಎಂಬ ಅಭಿದಾನದೊಂದಿಗೆ ಆಚರಿಸಲಾಗುತ್ತಿದೆ. ಈ ಚಾತುರ್ಮಾಸ್ಯ ಸ್ವಭಾಷೆಯನ್ನು ಪರಿಶುದ್ಧವಾಗಿ ಮಾತನಾಡಲು ಪ್ರೇರೇಪಿಸುತ್ತದೆ ಎಂದು ಬಣ್ಣಿಸಿದರು.

ನಾವು ನಮ್ಮ ಭಾಷೆಯನ್ನು ಮಾತನಾಡುವುದು ದೇಶ, ಸಂಸ್ಕೃತಿ, ಭಾಷೆ, ಪರಂಪರೆಗೆ ನಾವು ಸಲ್ಲಿಸುವ ಅತಿದೊಡ್ಡ ಸೇವೆ. ಇದು ಜೀವನಕ್ಕೆ ಸ್ವಾರಸ್ಯವನ್ನೂ ತರುತ್ತದೆ. ಶುದ್ಧವಾದ ಮಾತೃಭಾಷೆಯನ್ನು ಮಾತನಾಡುವ ಪ್ರಯತ್ನ ಸ್ವಭಾಷಾ ಚಾತುರ್ಮಾಸ್ಯದ ತಿರುಳು. ಮರೆತ ಪದಗಳನ್ನು ನೆನಪಿಸಿಕೊಳ್ಳೋಣ. ಪರಕೀಯತೆ ನಮ್ಮ ನಾಲಿಗೆಯಲ್ಲೇ ಇದೆ. ನಮ್ಮ ನಾಲಿಗೆ ಕೆಡಿಸಿಕೊಳ್ಳದಿರೋಣ. ಸಂಸ್ಕಾರದಿಂದ ಶಬ್ದ. ಶಬ್ದದಿಂದ ವಾಕ್ಯ; ಅದು ಭಾಷೆಯ ಮೂಲ. ಪ್ರತಿ ಪದವೂ ತನ್ನೊಂದಿಗೆ ಆ ಭಾಷೆಯ ಸಂಸ್ಕಾರವನ್ನು ತರುತ್ತದೆ ಎಂದು ವಿವರಿಸಿದರು.

ಇದೇ ಮೊಟ್ಟಮೊದಲ ಬಾರಿಗೆ ಇಂಥ ಸೂತ್ರ ಇಟ್ಟುಕೊಂಡು ಚಾತುರ್ಮಾಸ್ಯ ಆಚರಿಸಲಾಗುತ್ತಿದೆ. ಚಾತುರ್ಮಾಸ್ಯ ಧರ್ಮಕ್ಕೆ ಸೀಮಿತ ಎಂದು ವಾದಿಸುವವರಿದ್ದಾರೆ. ಭಾಷೆಯನ್ನು ಉಳಿಸುವುದು ಕೂಡ ಧರ್ಮದ ಒಂದು ಅಂಗ. ಉರಿಯುವುದು ಬೆಂಕಿಯ ಧರ್ಮ; ಹರಿಯುವುದು ನೀರಿನ ಧರ್ಮ; ಅಂತೆಯೇ ನಮ್ಮ ಭಾಷೆ ಮಾತನಾಡುವುದು ನಮ್ಮ ಧರ್ಮ ಎಂದು ವಿಶ್ಲೇಷಿಸಿದರು.

ಪರಿಸ್ಥಿತಿಗೆ ಅನುಗುಣವಾಗಿ ಆಂಗ್ಲಭಾಷೆ ಮಾತನಾಡಿದರೆ ತಪ್ಪಲ್ಲ; ಆದರೆ ಕನ್ನಡದ ಜತೆ ಅದನ್ನು ಬೆರೆಸುವುದು ಬೇಡ. ಹಾಗೆ ಮಾಡಿದರೆ ಇಡೀ ಸಮಾಜವೇ ಭಾಷೆ ಇಲ್ಲದ ಸಮಾಜವಾಗಿ ಮಾರ್ಪಾಡಾಗುತ್ತದೆ. ಈ ಸಮಾಜವನ್ನು ಬದಲಾಯಿಸುವ ಕಾರ್ಯ ಇಂದಿನಿಂದಲೇ ಆರಂಭವಾಗಲಿ. ಮನೆಗಳಲ್ಲಿ ಕನ್ನಡ ಅಭ್ಯಸಿಸೋಣ. ಮರೆತು ಹೋದ ಹಳೆ ಪದಗಳ ಮರು ಅನ್ವೇಷಣೆ ನಡೆಯಲಿದೆ. ಮತ್ತೆ ಕೆಲ ಪದಗಳನ್ನು ಸೃಷ್ಟಿ ಮಾಡುವ ಪ್ರಮೇಯವೂ ಬರುತ್ತದೆ. ಅದನ್ನು ಮಾಡಲು ಈ ಚಾತುರ್ಮಾಸ್ಯ ಪ್ರೇರೇಪಿಸುತ್ತದೆ. ಮೊದಲ ಹಂತದಲ್ಲಿ ಪರಕೀಯ ಶಬ್ದಗಳನ್ನು ಕಡಿಮೆ ಮಾಡೋಣ; ಅಂತಿಮವಾಗಿ ಶುದ್ಧ ಭಾಷೆಯನ್ನು ಉಳಿಸಿ ಬೆಳೆಸೋಣ. ಚಾತುರ್ಮಾಸ್ಯದಲ್ಲಿ ನಾಲಿಗೆ ಶುದ್ಧೀಕರಣದ ಕಾರ್ಯ ಮಾಡೋಣ ಎಂದರು.

ಜುಲೈ ೧೦ರಂದು ಶ್ರೀವ್ಯಾಸಪೂಜೆಯೊಂದಿಗೆ ಚಾತುರ್ಮಾಸ ವ್ರತ ಆರಂಭವಾಗಲಿದೆ. ಚಾತುರ್ಮಾಸ್ಯದಲ್ಲಿ ೧೩ರಂದು ಶ್ರೀವರ್ಧಂತಿ ಕಾರ್ಯಕ್ರಮ ನಡೆಯಲಿದೆ. ಜುಲೈ ೨೧ ಮತ್ತು ಆಗಸ್ಟ್ ೧೯ರಂದು ಎರಡು ಸ್ವಭಾಷಾ ಗೋಷ್ಠಿ ನಡೆಯಲಿದೆ. ಆಗಸ್ಟ್ ೧೬ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ೨೭ರಂದು ಗಣೇಶ ಚತುರ್ಥಿ ಆಚರಿಸಲಾಗುತ್ತದೆ. ಸೆಪ್ಟೆಂಬರ್ ೭ರಂದು ಸೀಮೋಲ್ಲಂಘನದೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ ಎಂದು ವಿವರಿಸಿದರು.

ಚಾತುರ್ಮಾಸ್ಯ ಸೇವಾಬಿಂದುಗಳಾದ ಮಂಜುನಾಥ ಸುವರ್ಣಗದ್ದೆ, ಪ್ರಸನ್ನ ಕುಮಾರ್ ಟಿ.ಜಿ, ಜಿ.ಕೆ. ಹೆಗಡೆ, ಶ್ರೀಕಾಂತ್ ಪಂಡಿತ್, ಉದಯಶಂಕರ ಭಟ್, ಮಧು ಜಿ.ಕೆ, ಜಿ.ಎಸ್.ಹೆಗಡೆ, ಸುಬ್ರಾಯ ಭಟ್, ಆರ್.ಜಿ.ಹೆಗಡೆ, ಕೆ.ಎಲ್.ಹೆಗಡೆ, ರಾಜು ಹೆಬ್ಬಾರ್, ಉದಯ ಭಟ್, ರಾಜಾರಾಂ ಭಟ್, ಜಿ.ವಿ.ಹೆಗಡೆ, ಮಹೇಶ್ ಹೆಗಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ