ಚೌಲಗೆರೆ ಟೋಲ್‌ ಇಂದು ಉದ್ಘಾಟನೆ

KannadaprabhaNewsNetwork | Published : Dec 16, 2024 12:46 AM

ಸಾರಾಂಶ

ಆಲೂರು ತಾಲೂಕಿನ ಚೌಲಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರ್ಮಿಸಿರುವ ಸುಂಕ ವಸೂಲಿ ಕೇಂದ್ರ ಕಾರ್ಯಾರಂಭಕ್ಕೆ ಎಲ್ಲಾ ಸಿದ್ಧತೆ ಆರಂಭವಾಗಿದೆ. ಸೋಮವಾರ ಇದನ್ನು ಉದ್ಘಾಟಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ, ಉದ್ಘಾಟನೆಗೂ ಮುನ್ನವೇ ತೀವ್ರ ವಿರೋಧ ವ್ಯಕ್ತವಾಗಿದೆ. ಟೋಲ್‌ ಶುಲ್ಕ ವಸೂಲಿ ಮಾಡಲು ತೋರುತ್ತಿರುವ ಆಸಕ್ತಿ ರಸ್ತೆ ಗುಣಮಟ್ಟ ಕಾಪಾಡುವಲ್ಲಿ ಇಲ್ಲ. ಜತೆಗೆ ಈ ಟೋಲ್‌ನಲ್ಲಿ ಯಾವ ವಾಹನಕ್ಕೆ ಎಷ್ಟು ಸುಂಕ ಎನ್ನುವುದನ್ನು ಈವರೆಗೂ ನಾಮಫಲಕದಲ್ಲಿ ಹಾಕಿಲ್ಲ.

ಕನ್ನಡಪ್ರಭ ವಾರ್ತೆ ಹಾಸನ

ಜಿಲ್ಲೆಯ ಆಲೂರು ತಾಲೂಕಿನ ಚೌಲಗೆರೆ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಿರ್ಮಿಸಿರುವ ಸುಂಕ ವಸೂಲಿ ಕೇಂದ್ರ ಕಾರ್ಯಾರಂಭಕ್ಕೆ ಎಲ್ಲಾ ಸಿದ್ಧತೆ ಆರಂಭವಾಗಿದೆ. ಸೋಮವಾರ ಇದನ್ನು ಉದ್ಘಾಟಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ನಿರ್ಧರಿಸಿದ್ದಾರೆ. ಆದರೆ, ಉದ್ಘಾಟನೆಗೂ ಮುನ್ನವೇ ತೀವ್ರ ವಿರೋಧ ವ್ಯಕ್ತವಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ಪ್ರತಿ 60 ಕಿ.ಮೀ. ಅಂತರದಲ್ಲಿ ಸುಂಕ ವಸೂಲಿ ಕೇಂದ್ರ ಇರಬೇಕು. ಆದರೆ ಹಾಸನ ತಾಲೂಕಿನ ಶಾಂತಿಗ್ರಾಮ ಬಳಿ ಕಳೆದ ಹಲವು ವರ್ಷಗಳ ಹಿಂದೆಯೇ ಟೋಲ್ ನಿರ್ಮಿಸಿ ಎಲ್ಲಾ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಆದರೀಗ ಶಾಂತಿಗ್ರಾಮ ಕೇಂದ್ರಕ್ಕೂ ಆಲೂರು ತಾಲೂಕಿನ ಚೌಲಗೆರೆ ಟೋಲ್‌ಗೂ ಕೇವಲ 30 ಕಿ.ಮೀ ದೂರ ಇದ್ದರೂ, ಮತ್ತೊಂದು ಟೋಲ್ ನಿರ್ಮಿಸಿ ಈಗ ಎಲ್ಲಾ ವಾಹನಗಳಿಂದ ಶುಲ್ಕ ವಸೂಲಿಗೆ ಸಿದ್ಧತೆ ಮಾಡಲಾಗಿದೆ. ಟೋಲ್‌ ಶುಲ್ಕ ವಸೂಲಿ ಮಾಡಲು ತೋರುತ್ತಿರುವ ಆಸಕ್ತಿ ರಸ್ತೆ ಗುಣಮಟ್ಟ ಕಾಪಾಡುವಲ್ಲಿ ಇಲ್ಲ. ಜತೆಗೆ ಈ ಟೋಲ್‌ನಲ್ಲಿ ಯಾವ ವಾಹನಕ್ಕೆ ಎಷ್ಟು ಸುಂಕ ಎನ್ನುವುದನ್ನು ಈವರೆಗೂ ನಾಮಫಲಕದಲ್ಲಿ ಹಾಕಿಲ್ಲ.

ರಸ್ತೆ ಕಾಮಗಾರಿಯೇ ಮುಗಿದಿಲ್ಲ:

ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ ಟೋಲ್‌ ವಸೂಲಿ ಮಾಡಬೇಕೆಂದರೆ ಹೆದ್ದಾರಿಯ ಎಲ್ಲಾ ಕಾಮಗಾರಿಗಳು ಮುಗಿಯಬೇಕು. ಹಾಗೆಯೇ ಆ ರಸ್ತೆಯಲ್ಲಿ ಸಂಚರಿಸುವ ಚಾಲಕರು ಮತ್ತು ಪ್ರಯಾಣಿಕರಿಗೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಿರಬೇಕು. ಆದರೆ, ಹಾಸನದಿಂದ ಸಕಲೇಶಪುರವರೆಗೆ ಕಾಮಗಾರಿ ಮುಗಿದಿದ್ದರೂ, ಎಲ್ಲಾ ಕಡೆ ಅಗತ್ಯ ಸೂಚನಾ ಫಲಕ ಅಳವಡಿಸಿಲ್ಲ. ಹೆದ್ದಾರಿಯ ಬಹುತೇಕ ಕಡೆಗಳಲ್ಲಿ ರಸ್ತೆ ವಿಭಜಕಗಳು ತೆರೆದುಕೊಂಡಿವೆ. ಇದರಿಂದ ಹಳ್ಳಿಗಳ ಕಡೆಯಿಂದ ಬರುವ ಟ್ರ್ಯಾಕ್ಟರ್‌, ಬೈಕುಗಳು ಹಾಗೂ ಗೂಡ್ಸ್‌ ಆಟೋಗಳು ದಿಢೀರನೆ ಹೆದ್ದಾರಿಗೆ ಬರುವುದರಿಂದ ಹೆದ್ದಾರಿಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ತೀವ್ರ ಅಡಚಣೆ ಉಂಟಾಗುತ್ತಿದೆ. ಜತೆಗೆ ಈಗಾಗಲೇ ಇದೇ ಕಾರಣಕ್ಕೆ ಹಲವು ಅಪಘಾತಗಳು ಕೂಡ ಸಂಭವಿಸಿವೆ.

ಹೆದ್ದಾರಿಯಲ್ಲಿ ಪ್ರಮುಖವಾಗಿ ಸಂಚರಿಸುವುದು ಲಾರಿಗಳು. ಹಾಗಾಗಿ ಟೋಲ್‌ ರಸ್ತೆಯಲ್ಲಿ ಟ್ರಕ್‌ಗಳು ತಂಗಲು "ಟ್ರಕ್‌ ಲೇ ಬಯ್‌ " ಎನ್ನುವ ವ್ಯವಸ್ಥೆ ಕಲ್ಪಿಸಬೇಕು. ಆದರೆ, ಈ ಚೌಲಗೆರೆ ಟೋಲ್‌ ಬಳಿ ಇಂತಹ ಯಾವುದೇ ವ್ಯವಸ್ಥೆ ಇಲ್ಲ. ಟೋಲ್‌ ಪಕ್ಕದಲ್ಲಿ ಶೌಚಾಲಯಗಳು ಇರುವುದು ಬಿಟ್ಟರೆ ಮಧ್ಯದಲ್ಲಿ ಎಲ್ಲಿಯೂ ಶೌಚಾಯಗಳಾಗಲಿ ಸ್ನಾನ ಗೃಹಗಳಾಗಲಿ ಇಲ್ಲ.

ಟೋಲ್‌ ಕೇಂದ್ರ ಎಂದಮೇಲೆ ಅಲ್ಲಿ ಆ್ಯಂಬುಲೆನ್ಸ್‌ ಇರಬೇಕು. ವೈದ್ಯಕೀಯ ಸಿಬ್ಬಂದಿಗೂ ಇರಬೇಕು. ಏಕೆಂದರೆ ಈ ರಸ್ತೆಯಲ್ಲಿ ಎಲ್ಲಿಯಾದರೂ ಅಪಘಾತವಾದಲ್ಲಿ ಆಯಾ ಟೋಲ್‌ನಲ್ಲಿರುವ ಆ್ಯಂಬುಲೆನ್ಸ್‌ ಕೂಡಲೇ ಅಲ್ಲಿಗೆ ತೆರಳಿ ಪ್ರಥಮ ಚಿಕಿತ್ಸೆ ಒದಗಿಸಿ ಅಲ್ಲಿಂದ ಆಸ್ಪತ್ರೆಗೆ ಸಾಗಿಸಬೇಕು. ಆದರೆ, ಈ ಟೋಲ್‌ನಲ್ಲಿ ಆ್ಯಂಬುಲೆನ್ಸ್‌ ಇಲ್ಲ. ಅದರ ಸಿಬ್ಬಂದಿಯೂ ಇಲ್ಲ.

ಸಕಲೇಶಪುರದಿಂದ ಬಿ.ಸಿ.ರೋಡ್‌ವರೆಗೂ ಕಾಮಗಾರಿ ಅರೆಬರೆಯಾಗಿದೆ. ಹಾಸನ ಸಮೀಪವೇ ಬೂವನಹಳ್ಳಿ ಕೂಡು ಹಾಗೂ ದೇವರಾಯಪಟ್ಟಣದ ಬಳಿ ಮೇಲ್ಸೇತುವೆ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಹೀಗಿದ್ದರೂ ಹೆದ್ದಾರಿ ಪ್ರಾಧಿಕಾರದ ನಿಯಮಾವಳಿ ಪಾಲಿಸದೇ ವಾಹನ ಚಾಲಕರು ಹಾಗೂ ಮಾಲೀಕರ ಮೇಲೆ ಶುಲ್ಕದ ಬರೆ ಎಳೆಯಲಾಗುತ್ತಿದೆ ಎಂದು ಸ್ಥಳೀಯ ಶಾಸಕ ಸಿಮೆಂಟ್ ಮಂಜು ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ:

ರಾಷ್ಟ್ರೀಯ ಹೆದ್ದಾರಿ ನಿಯಮಾವಳಿ ಪ್ರಕಾರ 60 ಕಿಲೋಮೀಟರ್‌ಗೆ ಒಂದು ಟೋಲ್ ಇರಬೇಕು. ಆ ಪ್ರಕಾರ ಶಾಂತಿಗ್ರಾಮದ ಟೋಲ್‌ ನಂತರ ಬಾಳ್ಳುಪೇಟೆಯ ಆಚೆಗೆ ಟೋಲ್ ನಿರ್ಮಿಸಬೇಕಿತ್ತು. ಅದನ್ನು ಬಿಟ್ಟು ಅವೈಜ್ಞಾನಿಕವಾಗಿ 30 ಕಿ.ಮೀ ಅಂತರದಲ್ಲೇ ಇನ್ನೊಂದು ಟೋಲ್ ನಿರ್ಮಿಸಲಾಗಿದೆ. ಅದ್ದರಿಂದ ಯಾವುದೇ ಕಾರಣಕ್ಕೂ ಟೋಲ್ ಕಾರ್ಯಾರಂಭ ಮಾಡಬಾರದು ಎಂದು ಅನೇಕರು ಎಚ್ಚರಿಕೆ ನೀಡಿದ್ದಾರೆ. ನಮ್ಮ ಹೋರಾಟಕ್ಕೆ ಸ್ಥಳೀಯ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೂ ಕೈಜೋಡಿಸಬೇಕು ಎಂದು ಸಂಘಟನೆ ಮುಖಂಡರು ಮನವಿ ಮಾಡಿದ್ದಾರೆ. ಹೀಗಾಗಿ ಚೌಲಗೆರೆ ಟೋಲ್ ಉದ್ಘಾಟನೆಗೂ ಮುನ್ನವೇ ವಿರೋಧದ ಕೆಂಗಣ್ಣಿಗೆ ಗುರಿಯಾಗಿದೆ. ಒಂದು ವೇಳೆ ಸೋಮವಾರ ಟೋಲ್ ಸುಂಕ ಆರಂಭಿಸಿದರೆ, ಅಂದಿನಿಂದಲೇ ಉಗ್ರ ಹೋರಾಟ ಮಾಡಲಾಗುವುದು ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ನೀಡಿವೆ.

ಇದರ ಜತೆಗೆ ಹಾಸನದ ದೇವರಾಯ ಬೈಪಾಸ್‌ನಿಂದ ಸಕಲೇಶಪುರದವರೆಗೆ ಕಾಂಕ್ರೀಟ್‌ ರಸ್ತೆ ಆಗಿದ್ದರೂ ಅದು ಗುಣಮಟ್ಟದಿಂದ ಕೂಡಿಲ್ಲ. ಉದ್ಘಾಟನೆಗೂ ಮುನ್ನವೇ ರಸ್ತೆ ಅಲ್ಲಲ್ಲಿ ಕಿತ್ತುಹೋಗಿದ್ದು, ತೇಡೆ ಹಾಕಲಾಗಿದೆ. ದೇವರಾಯಪಟ್ಟಣ ಬಳಿ ಇರುವ ಸೆತುವೆ, ಕಂದಲಿ ಹೊಳೆಗೆ ಇರುವ ಸೇತುವೆ, ಸಿಂಗಾಪುರದ ಹೊಳೆಗೆ ಇರುವ ಸೇತುವೆ ಸೇರಿದಂತೆ ರಸ್ತೆಯುದ್ದಕ್ಕೂ ಇರುವ ಸೇತುವೆಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ್ದು, ವೇಗವಾಗಿ ಸಂಚರಿಸುವ ವಾಹನಗಳು ತೇಲಾಡುವಂತಿದ್ದು, ಚಾಲಕರು ನಿಯಂತ್ರಣ ಕಳೆದುಕೊಳ್ಳುವಷ್ಟರ ಮಟ್ಟಿಗೆ ಅವೈಜ್ಞಾನಿಕವಾಗಿವೆ. ಇಂತಹ ಹಲವು ಅವೈಜ್ಞಾನಿಕತೆಗಳಿಂದ ಕೂಡಿರುವ ಈ ರಸ್ತೆಗೆ ಇದೀಗ ಟೋಲ್‌ ಹಾಕಲು ಹೊರಟಿರುವುದು ಭಾರೀ ವಿರೋಧಕ್ಕೆ ಕಾರಣವಾಗಿದೆ.

* ಹೇಳಿಕೆ

ಟೋಲ್‌ ರಸ್ತೆ ಎನ್ನಿಸಿಕೊಳ್ಳಲು ಯೋಗ್ಯವಲ್ಲದ ರಸ್ತೆಗೆ ಟೋಲ್‌ ಹಾಕಲು ಹೊರಟಿದ್ದಾರೆ. ನಾನು ಕೂಡ ಈ ಟೋಲ್‌ ಈಗಲೇ ಕಾರ್ಯಾರಂಭ ಮಾಡಬಾರದೆಂದು ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರಿಗೂ ಕೂಡ ಪತ್ರ ವ್ಯವಹಾರ ನಡೆಸಿದ್ದೇನೆ. ಹಾಗಾಗಿ ನಿಯಮಾವಳಿ ಪ್ರಕಾರ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಆ ನಂತರ ಟೋಲ್‌ ವಸೂಲ್‌ ಮಾಡುವುದು ಸೂಕ್ತ.

- ಸಿಮೆಂಟ್‌ ಮಂಜು, ಶಾಸಕ (15ಎಚ್ಎಸ್ಎನ್10ಬಿ)

Share this article