ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಬುಧವಾರ 50ನೇ ವರ್ಷಕ್ಕೆ ಕಾಲಿಟ್ಟಿದ್ದು, ರಾಜ್ಯಾದಂತ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಿದರು.ಮಂಡ್ಯದ ಕಾಳಿಕಾಂಬೆ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತ ಶಿವಕುಮಾರ ಆರಾಧ್ಯ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಿ, ವಿಜಯೇಂದ್ರರ ರಾಜಕೀಯ ಭವಿಷ್ಯಕ್ಕಾಗಿ ಉರುಳು ಸೇವೆ ನಡೆಸಲಾಯಿತು. ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ನಡೆಸಿ, ಗೋ ಶಾಲೆಯಲ್ಲಿನ ಗೋವುಗಳಿಗೆ ಮೇವು ವಿತರಿಸಲಾಯಿತು. ನಗರದ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ಬಳಿ ಮಮತೆಯ ಮಡಿಲು ನಿತ್ಯದಾಸೋಹ ಕೇಂದ್ರದಲ್ಲಿ ಬಿ.ವೈ.ವಿಜಯೇಂದ್ರ ಅಭಿಮಾನಿಗಳಿಂದ ಗರ್ಭಿಣಿ- ಬಾಣಂತಿಯರು ಮತ್ತು ಅಗತ್ಯಯುಳ್ಳವರಿಗೆ ಪೌಷ್ಟಿಕಾಹಾರ ವಿತರಣೆ ಮಾಡಲಾಯಿತು.
ಉಡುಪಿಯಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ವತಿಯಿಂದ ಶ್ರೀ ಕೃಷ್ಣಮಠದಲ್ಲಿ ಬಡಕುಟುಂಬವೊಂದಕ್ಕೆ ಗೋದಾನ ಮಾಡಲಾಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಗೋವು ಮತ್ತು ಕರುವಿಗೆ ಬಾಳೆಹಣ್ಣು ಪ್ರಸಾದವನ್ನು ತಿನ್ನಿಸಿ ಬಡ ಗೋಪಾಲಕಿಗೆ ಹಸ್ತಾಂತರಿಸಿದರು.ಈ ಮಧ್ಯೆ, ವಿಜಯೇಂದ್ರ ಅವರ ಕಾರು ಚಾಲಕ ಸಿದ್ದು ಅವರು, ವಿಜಯೇಂದ್ರ ಅವರ ಮನೆ ದೇವರು ‘ಯಡಿಯೂರು ಸಿದ್ಧಲಿಂಗೇಶ್ವರ ದೇವಾಲಯ’ಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆಯೇ ದೇವಾಲಯಕ್ಕೆ ತೆರಳಿ, ಪೂಜೆ ಸಲ್ಲಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಾಯಕ ವಿಜಯೇಂದ್ರಗೆ ಆಯುರಾರೋಗ್ಯ, ಸಂಪತ್ತು, ಯಶಸ್ಸು ನೀಡಲಿ ಎಂದು ಕೋರಿಕೊಂಡರು. ಇದೇ ವೇಳೆ, ಬೆಂಗಳೂರು, ಶಿವಮೊಗ್ಗ ಸೇರಿ ರಾಜ್ಯದ ಇತರೆಡೆಯೂ ವಿಜಯೇಂದ್ರ ಅವರ ಹುಟ್ಟುಹಬ್ಬ ಆಚರಿಸಲಾಯಿತು.
(ಬಾಕ್ಸ್):ಅನ್ನದಾತರ ನಡುವೆ ಬಿವೈವಿ ಜನ್ಮ ದಿನಾಚರಣೆ
ಈ ಮಧ್ಯೆ, ವಿಜಯೇಂದ್ರ ಅವರು ಮಂಗಳವಾರ ರಾತ್ರಿಯೇ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರೊಂದಿಗೆ ಕಳೆದರು. ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗಿಯಾಗಿ, ರೈತರ ಮಧ್ಯೆಯೇ ತಮ್ಮ 50ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ರೈತರು ವಿಜಯೇಂದ್ರಗೆ ಮಧ್ಯರಾತ್ರಿಯೇ ಜನ್ಮದಿನದ ಶುಭಾಶಯ ಕೋರಿದರು.;Resize=(128,128))
;Resize=(128,128))