ಧಾರವಾಡ : ಸಮಾಜದಲ್ಲಿ ನಡೆಯುವ ವಿವಿಧ ಕ್ಷೇತ್ರಗಳ ಜನಪರ ಸೇವೆಗಳನ್ನು ಮುಕ್ತವಾಗಿ ಗುರುತಿಸಿ ಪ್ರೋತ್ಸಾಹಿಸಬೇಕೆಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕರೆನೀಡಿದರು.
ಮಹಾಶಿವರಾತ್ರಿ ಆಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭ
ಅವರು ಉತ್ತರ ಪ್ರದೇಶದ ವಾರಾಣಾಸಿ ನಗರದಲ್ಲಿರುವ ತಮ್ಮ ಶ್ರೀಪೀಠದಲ್ಲಿ ಮಹಾಶಿವರಾತ್ರಿ ಆಚರಣೆಯ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಬಾರ್ಶಿಯ ವಿಶ್ವಮಾತಾ ವಾರಕರೀ ಆಧ್ಯಾತ್ಮಿಕ ಬಾಲಿಕಾ ಸಂಸ್ಥೆಯ ಸಂಸ್ಥಾಪಕಿ ಶಿವಭಕ್ತಿ ಪರಾಯಣಿ ಶಿವಲೀಲಾ ಪಾಟೀಲ ಅವರಿಗೆ 2026ನೆಯ ಸಾಲಿನ ‘ಸೌಭಾಗ್ಯವತಿ ಸಿಂಧು ಸುಭಾಷ ಮ್ಹಮಾಣೆ ಮಾತೃಶಕ್ತಿ ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡುತ್ತಿದ್ದರು. ಮನುಷ್ಯನ ವ್ಯಕ್ತಿತ್ವವನ್ನು ಲಿಂಗ, ಜಾತಿ, ವರ್ಗಗಳ ಆಧಾರದ ಮೇಲೆ ವಿಂಗಡಿಸದೇ ಸಾಧನೆಯ ವಿಶಿಷ್ಟ ಪ್ರತಿಭೆಯಿಂದ ಗುರುತಿಸಿದಾಗ ವ್ಯಕ್ತಿತ್ವಕ್ಕೆ ವ್ಯಾಪಕ ಗೌರವ ಪ್ರಾಪ್ತವಾಗುತ್ತದೆ ಎಂದರು.
ಶಿವಲೀಲಾ ಪಾಟೀಲರು ಶಿವ ಕೀರ್ತನಕಾರರ ಪುತ್ರಿ
ಶಿವಲೀಲಾ ಪಾಟೀಲರು ಶಿವ ಕೀರ್ತನಕಾರರ ಪುತ್ರಿ. ಕೇವಲ 5ನೆಯ ವಯಸ್ಸಿನಿಂದಲೇ ಕೀರ್ತನೆ ಹೇಳಲು ಆರಂಭಿಸಿದ್ದು, ಕಳೆದ 20ವರ್ಷಗಳಿಂದ ಮಹಾರಾಷ್ಟ್ರದಾದ್ಯಂತ ಹಿಂದೂ ಸಂಸ್ಕೃತಿಯ ಸಂರಕ್ಷಣೆಗಾಗಿ ಕೀರ್ತನೆ ಮಾಡುತ್ತಿದ್ದಾರೆ. ತಮ್ಮ ಕೀರ್ತನ ಕಲೆಯ ಅಭಿವ್ಯಕ್ತಿಗೆ ಪ್ರಾಪ್ತವಾಗುವ ಸಂಭಾವನೆಯ ಸಂಪೂರ್ಣ ಹಣದಲ್ಲಿ ಸುಮಾರು 150 ಬಡ ಬಾಲಕಿಯರಿಗೆ ಉಚಿತವಾಗಿ ವಸತಿ, ಊಟ, ಬಟ್ಟೆಗಳನ್ನು ನೀಡಿ, ಶಾಲಾ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ವಿದ್ಯೆಯ ತರಬೇತಿ ನೀಡುತ್ತಿದ್ದಾರೆ. ಶಿವಲೀಲಾ ಪಾಟೀಲರ ಈ ಜನಸ್ನೇಹಿ ಕೈಂಕರ್ಯವನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದೂ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.
ಕಾಶಿಪೀಠದ ಕಿರಿಯ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾನಂದ ರಾಜೇಂದ್ರ ಸ್ವಾಮೀಜಿ, ಚೆನ್ನಗಿರಿಯ ಶ್ರೀ ಬಸವ ಜಯಚಂದ್ರ ಸ್ವಾಮೀಜಿ, ಶಹಾಪುರದ ಶ್ರೀ ಸುಗುರೆಶ್ವರ ಶಿವಾಚಾರ್ಯ ಸ್ವಾಮೀಜಿ, ಪ್ರಶಸ್ತಿಯ ಪ್ರಾಯೋಜಕ ಪಂಢರಪುರದ ದಾನಚಿಂತಾಮಣಿ ಸುಭಾಷ್ ಮ್ಹಮಾಣೆ, ಶಿವಲೀಲಾ ಪಾಟೀಲರ ತಾಯಿ ವರ್ಷಾ ಪಾಟೀಲ, ಪೀಠದ ವ್ಯವಸ್ಥಾಪಕ ಆರ್. ಕೆ. ಸ್ವಾಮಿ, ಶಿವಾನಂದ ಹಿರೇಮಠ, ಪರೀಕ್ಷಾ ವಿಭಾಗದ ಮುಖ್ಯಸ್ಥ ಸೊಲಾಪುರದ ರಾಜೇಂದ್ರ ಬಲಸೂರೇ, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ತೆಲಂಗಾಣ ರಾಜ್ಯಗಳಿಂದ ಆಗಮಿಸಿದ್ದ ಭಕ್ತಗಣ ಇದ್ದರು. ಶಿವಲೀಲಾ ಪಾಟೀಲ ಅವರ ವಿದ್ಯಾಲಯದ ನೂರಕ್ಕೂ ಹೆಚ್ಚು ಬಾಲಕಿಯರು ಭಜನೆ-ಕೀರ್ತನೆಯನ್ನು ಪ್ರಸ್ತುತಪಡಿಸಿದರು.
