ಶಿಕ್ಷಣವನ್ನು ರಾಷ್ಟ್ರೀಕರಣ ಮಾಡಬೇಕೆಂದು ಸಲಹೆ

| Published : Nov 06 2025, 02:00 AM IST

ಸಾರಾಂಶ

ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಂವಿಧಾನದಿಂದ ಇಂದು ಶತಮಾನಗಳಿಂದ ಶೋಷಿತರಾದ ಶೂದ್ರರು ಅಕ್ಷರಜ್ಞಾನ ಪಡೆಯಲು ಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಶಿಕ್ಷಣವೆಂದರೆ ಕೇವಲ ಮೇಲ್ಜಾತಿಯವರಿಗೆ ಸೀಮಿತವಾಗಿತ್ತು. ಸಂವಿಧಾನ ಬಂದ ನಂತರ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಆದರೆ ಎಲ್ಲರೂ ಘನತೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಅದಕ್ಕಾಗಿ ಸರ್ಕಾರ ಶಿಕ್ಷಣವನ್ನೇ ರಾಷ್ಟ್ರೀಕರಣ ಮಾಡಬೇಕು ಎಂದು ಹೇಳಿದರು. ಶಿಕ್ಷಣ ಎಲ್ಲರಿಗೂ ತಲುಪಬೇಕೆಂದರೆ ಇರುವ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದಂತೆ ಶಿಕ್ಷಣವನ್ನೂ ಕೂಡ ರಾಷ್ಟ್ರೀಕರಣ ಮಾಡಬೇಕೆಂದು ಹಿರಿಯ ಸಾಹಿತಿ ಮತ್ತು ಚಿಂತಕ ಕೆ. ಎಸ್. ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಈ ಸಮಾಜದಲ್ಲಿ ಶಿಕ್ಷಣ ಎಲ್ಲರಿಗೂ ತಲುಪಬೇಕೆಂದರೆ ಇರುವ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದಂತೆ ಶಿಕ್ಷಣವನ್ನೂ ಕೂಡ ರಾಷ್ಟ್ರೀಕರಣ ಮಾಡಬೇಕೆಂದು ಹಿರಿಯ ಸಾಹಿತಿ ಮತ್ತು ಚಿಂತಕ ಕೆ. ಎಸ್. ಭಗವಾನ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನದ ವತಿಯಿಂದ ನಡೆದ ರಾಜ್ಯಮಟ್ಟದ ೧೦ನೇ ಕವಿಕಾವ್ಯ ಸಂಭ್ರಮ, ಕನ್ನಡ ರಾಜ್ಯೋತ್ಸವ ಮತ್ತು ಪ್ರಕಾಶನ ಉದ್ಘಾಟಿಸಿ ಮಾತನಾಡಿದ ಅವರು, ಭಗವಾನ್ ಅವರು ತಮ್ಮ ವಿಚಾರಗರ್ಭಿತ ಭಾಷಣದಲ್ಲಿ ಶಿಕ್ಷಣ, ಭಾಷಾ ನೀತಿ, ಸಾಹಿತ್ಯದ ಪ್ರಾಮಾಣಿಕತೆ ಮತ್ತು ಸಮಾಜದ ಅಸಮಾನತೆಯ ಕುರಿತು ತೀಕ್ಷ್ಣವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. ಡಾ. ಬಿ.ಆರ್‌. ಅಂಬೇಡ್ಕರ್ ಅವರ ಸಂವಿಧಾನದಿಂದ ಇಂದು ಶತಮಾನಗಳಿಂದ ಶೋಷಿತರಾದ ಶೂದ್ರರು ಅಕ್ಷರಜ್ಞಾನ ಪಡೆಯಲು ಸಾಧ್ಯವಾಗಿದೆ. ಹಿಂದಿನ ಕಾಲದಲ್ಲಿ ಶಿಕ್ಷಣವೆಂದರೆ ಕೇವಲ ಮೇಲ್ಜಾತಿಯವರಿಗೆ ಸೀಮಿತವಾಗಿತ್ತು. ಸಂವಿಧಾನ ಬಂದ ನಂತರ ಸ್ವಲ್ಪ ಬದಲಾವಣೆ ಕಂಡುಬಂದಿದೆ. ಆದರೆ ಎಲ್ಲರೂ ಘನತೆಯ ಬದುಕು ಕಟ್ಟಿಕೊಳ್ಳಬೇಕೆಂದರೆ ಶಿಕ್ಷಣ ಎಲ್ಲರಿಗೂ ದೊರೆಯಬೇಕು. ಅದಕ್ಕಾಗಿ ಸರ್ಕಾರ ಶಿಕ್ಷಣವನ್ನೇ ರಾಷ್ಟ್ರೀಕರಣ ಮಾಡಬೇಕು ಎಂದು ಹೇಳಿದರು.

ಬ್ರಿಟಿಷರು ಭಾರತಕ್ಕೆ ಬಂದಿರದಿದ್ದರೆ ಇಂದು ಶೂದ್ರ ವರ್ಗ ಅಕ್ಷರ ಕಲಿಯುವಂತಾಗುತ್ತಿರಲಿಲ್ಲ. ಡಾ. ಅಂಬೇಡ್ಕರ್ ಅವರು ಶೋಷಿತರ ನೋವನ್ನು ಅನುಭವಿಸಿ ಭವಿಷ್ಯದ ಪೀಳಿಗೆಯ ಉಜ್ವಲ ಭವಿಷ್ಯಕ್ಕಾಗಿ ಹೋರಾಡಿದರು. ಅವರ ಹೋರಾಟದ ಫಲವೇ ನಾವು ಇಂದು ಅಕ್ಷರಜ್ಞಾನ ಪಡೆದಿರುವುದು ಎಂದು ವಿವರಿಸಿದರು. ಭಗವಾನ್ ಅವರು ರಾಜ್ಯದ ಭಾಷಾ ನೀತಿಯ ಕುರಿತಾಗಿ ಮಾತನಾಡುತ್ತಾ, “ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಯಾಗಬೇಕು. ಕನ್ನಡ ಮೊದಲ ಭಾಷೆಯಾಗಿ, ಇಂಗ್ಲಿಷ್ ಎರಡನೇ ಭಾಷೆಯಾಗಿ ಇರಬೇಕು. ಹಿಂದಿ ಕಲಿಯಲೇಬೇಕೆಂಬ ಕಡ್ಡಾಯ ನಿಯಮವನ್ನು ಕನ್ನಡಿಗರು ಒಪ್ಪಬಾರದು. ಕನ್ನಡ ನಮ್ಮ ನಾಡಿನ ಜೀವಾಳ, ಇಂಗ್ಲಿಷ್ ವ್ಯವಹಾರಿಕ ಬದುಕಿಗೆ ಅಗತ್ಯ, ಇವೆರಡೂ ಸಮನ್ವಯವಾಗಿ ಇರಬೇಕು” ಎಂದು ಹೇಳಿದರು. ಬರವಣಿಗೆಯು ಸತ್ಯ ಮತ್ತು ಮನಸ್ಸಿನಿಂದ ಬರಬೇಕು. ಯಾರನ್ನೋ ಮೆಚ್ಚಿಸಲು ಬರೆಯಬಾರದು. ಸತ್ಯದ ಪರವಾಗಿ ಬರೆಯುವವರು ವಿರೋಧಕ್ಕೂ ಗುರಿಯಾಗುತ್ತಾರೆ, ಆದರೆ ಸತ್ಯಕ್ಕಾಗಿ, ಸಮಾಜದ ಹಿತಕ್ಕಾಗಿ ನಮ್ಮ ಲೇಖನಿ ಕಾರ್ಯನಿರತವಾಗಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಅಸಮಾನತೆ ಕುರಿತು ಮಾತನಾಡಿದ ಭಗವಾನ್ , “ಈ ದೇಶದಲ್ಲಿ ಕೇವಲ ಶೇಕಡ 3ರಷ್ಟು ಮಾತ್ರ ಬ್ರಾಹ್ಮಣರಿದ್ದಾರೆ. ಉಳಿದ ೯೭ ಶೇಕಡ ಶೂದ್ರರು. ಆದರೂ ಬ್ರಾಹ್ಮಣರೇ ಶ್ರೇಷ್ಠರೆಂಬ ಮನೋಭಾವವನ್ನು ಶತಮಾನಗಳಿಂದ ನಿರ್ಮಾಣ ಮಾಡಲಾಗಿದೆ. ಅಂಬೇಡ್ಕರ್ ಅವರು ಈ ಶೋಷಣೆಗಳನ್ನು ಅನುಭವಿಸಿ ಕಣ್ಣೀರು ಹಾಕಿದರು. ಅವರ ಹೋರಾಟದಿಂದಲೇ ನಾವು ಇಂದು ಬಲಿಷ್ಠವಾಗಿ ನಿಂತಿದ್ದೇವೆ ಎಂದು ಅವರು ಹೃದಯಸ್ಪರ್ಶಿಯಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಕಸಾಪ ಮಾಜಿ ಅಧ್ಯಕ್ಷ ಎಚ್. ಬಿ. ಮದನ್‌ಗೌಡ ಮಾತನಾಡಿ, “ಮಾಣಿಕ್ಯ ಪ್ರಕಾಶನವು ಕಳೆದ ಹತ್ತು ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದೆ. ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್ ಮತ್ತು ಪ್ರಕಾಶಕಿ ದೀಪಾ ಉಪ್ಪಾರ್ ಅವರ ಸಾಹಿತ್ಯ ಸೇವೆ ಶ್ಲಾಘನೀಯ. ಹಾಸನ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತ ಸಾಹಿತಿ ಹಾಗೂ ವಿಶ್ವಪ್ರಸಿದ್ಧ ಎಸ್.ಎಲ್. ಭೈರಪ್ಪ ಇಬ್ಬರೂ ಹಾಸನದವರು ಎನ್ನುವುದು ಗೌರವದ ವಿಷಯ ಎಂದರು.

ಕಾರ್ಯಕ್ರಮದ ಸರ್ವಾಧ್ಯಕ್ಷೆ ವಾಣಿ ಶೆಟ್ಟಿ ಮಾತನಾಡಿ, ಪುಸ್ತಕ ಓದುವುದು ಮನುಷ್ಯನ ಬಾಳನ್ನು ಸಾಮರಸ್ಯದ ದಾರಿಗೆ ಕೊಂಡೊಯ್ಯುತ್ತದೆ. ಶಾಲಾ ದಿನಗಳಿಂದಲೇ ಓದು ಹಾಗೂ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡರೆ ಮನುಷ್ಯ ನೆಮ್ಮದಿಯ ಬದುಕು ಕಟ್ಟಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್‌ನ ಮಾಜಿ ಗೌರವಾಧ್ಯಕ್ಷ ರವಿ ನಾಕಲಗೂಡು ಅವರು ಮಾಣಿಕ್ಯ ಪ್ರಕಾಶನದ ಕಾರ್ಯಕ್ರಮಗಳು ಸದಾ ಅಚ್ಚುಕಟ್ಟಾಗಿದ್ದು, ಹೊಸ ಲೇಖಕರನ್ನು ಗುರುತಿಸಿ ವೇದಿಕೆ ನೀಡುವಲ್ಲಿ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕನ್ನಡ ನುಡಿ, ನಾಡು ಮತ್ತು ಸಾಹಿತ್ಯದ ಮಹತ್ವವನ್ನು ಸ್ಮರಿಸಿದ ಈ ಕಾರ್ಯಕ್ರಮ ಹಾಸನದ ಸಂಸ್ಕೃತ ಭವನದಲ್ಲಿ ಭಾವಪೂರ್ಣ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದಲ್ಲಿ ಲೇಖಕರಾದ ವಿಶ್ವೇಶ್ವರ ಮೇಟಿ, ಸತೀಶ್ ಜವರೇಗೌಡ, ನಾಗರಾಜ್ ಹೆತ್ತೂರು, ಸಾಹಿತಿ ಕೊಟ್ರೇಶ್ ಎಸ್. ಉಪ್ಪಾರ್‌, ಪ್ರಕಾಶಕಿ ದೀಪಾ ಉಪ್ಪಾರ್, ನಾಗರಾಜ್ ದೊಡ್ಡಮನಿ, ಬಸವರಾಜ್ ಇತರರು ಉಪಸ್ಥಿತರಿದ್ದರು.