ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಗಾಂಧಿ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ, ರಾಜ್ಯ ಕಬ್ಬು ಬೆಳೆಗಾರರ ವೇದಿಕೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಕ್ಕರೆ ಕಾರ್ಖಾನೆಗಳು ಕೇವಲ ಸಕ್ಕರೆಯನ್ನು ಮಾತ್ರ ಉತ್ಪಾದನೆ ಮಾಡದೆ ಉಪ ಉತ್ಪನ್ನಗಳನ್ನೂ ತಯಾರಿಸುತ್ತಿವೆ. ಸಹ ವಿದ್ಯುತ್ ಘಟಕ, ಎಥನಾಲ್, ಡಿಸ್ಟಿಲರಿಯಿಂದಲೂ ಅಧಿಕ ಲಾಭ ಗಳಿಸುತ್ತಿವೆ ಎಂದರು.
ರೈತರಿಗೆ ದರ ನೀಡುವ ಸಮಯದಲ್ಲಿ ಉಪ ಉತ್ಪನ್ನಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಸಕ್ಕರೆ ಉತ್ಪಾದನೆಯಿಂದ ಬರುವ ಹಣವನ್ನಷ್ಟೇ ಪರಿಗಣಿಸಿ ನೀಡಲಾಗುತ್ತಿದೆ. ಇದರಿಂದ ರೈತರಿಗೆ ವೈಜ್ಞಾನಿಕ ಬೆಲೆ ದೊರಕುತ್ತಿಲ್ಲ. ಹಾಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಉಪ ಉತ್ಪನ್ನಗಳಿಂದ ಬರುವಂತಹ ಲಾಭವನ್ನೂ ಪರಿಗಣಿಸಿ ರೈತರಿಗೆ ಉತ್ತಮ ದರವನ್ನು ನೀಡಬೇಕೆಂಬುದು ರೈತರ ಆಗ್ರಹವಾಗಿದ್ದರೂ ಆಳುವ ಸರ್ಕಾರಗಳು ಅದನ್ನು ಪರಿಗಣಿಸದೆ ಖಾಸಗಿ ಕಾರ್ಖಾನೆಗಳ ಪರವಾಗಿ ನಿಂತಿವೆ ಎಂದರು.ಖಾಸಗಿ ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳಿಂದ ಕೋಟಿಗಟ್ಟಲೆ ಆದಾಯ ಗಳಿಸುತ್ತಿವೆ. ರೈತರಿಗೆ ಅದರ ಲಾಭ ದೊರಕುತ್ತಿಲ್ಲ. ಈ ಲಾಭದಲ್ಲಿ ಅರ್ಧದಷ್ಟನ್ನಾದರೂ ರೈತರಿಗೆ ನೀಡುವುದು ಅಗತ್ಯವಾಗಿದೆ. ಕಬ್ಬಿನ ಇಳುವರಿಯನ್ನೂ ನಿಖರವಾಗಿ ತೋರಿಸದೆ ಕಾರ್ಖಾನೆಗಳು ವಂಚಿಸುತ್ತಿವೆ. ವೈಜ್ಞಾನಿಕ ಬೆಲೆ ನೀಡದೆ ರೈತರನ್ನು ಶೋಷಿಸುತ್ತಿರುವುದರಿಂದಲೇ ಕಬ್ಬು ಬೆಳೆಗಾರರು ಸಾಲಗಾರರಾಗಿಯೇ ಉಳಿದುಕೊಂಡಿದ್ದಾರೆ ಎಂದರು.
ಇಲ್ಲಿ ರಸಗೊಬ್ಬರಗಳನ್ನು ಮುಕ್ತವಾಗಿ ಮಾರುಕಟ್ಟೆಗೆ ಬಿಡಿ. ಕಾರ್ಖಾನೆಗಳಿಗೆ ಕಬ್ಬು ಸರಬರಾಜು ಮಾಡಿರುವ ರೈತರಿಗೆ ಪ್ರತಿ ಒಂದು ಟನ್‌ಗೆ ಸಬ್ಸಿಡಿ ಹಣದ ರೂಪದಲ್ಲಿ ಹಣ ನೀಡಿ. ಆಗ ಫರ್ಟಿಲೈಸರ್‌ಗಳಿಗೆ ಸಾವಿರಾರು ರೂಪಾಯಿ ಹಣ ಏಕೆ ನೀಡಬೇಕೆಂದು ಸಾವಯವ ಬೆಳೆ ಬೆಳೆಯಲು ರೈತರು ಮುಂದಾಗುತ್ತಾರೆ. ಆಗ ರಸಗೊಬ್ಬರದ ಮೇಲೆ ಅವಲಂಬಿತರಾಗಿರುವ ರೈತರ ಸಂಖ್ಯೆಯೂ ಕ್ರಮೇಣ ಕಡಿಮೆ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.