ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಿಶಿಷ್ಟರ ಮೇಲಿನ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಾಧಿತರಿಗೆ ಶೀಘ್ರ ಪರಿಹಾರ ನೀಡಬೇಕು. ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿತರು ಪ್ರಕರಣಗಳಿಂದ ಮುಕ್ತರಾಗುತ್ತಿದ್ದಾರೆ. ದಾಖಲಾದ ಪ್ರಕರಣಗಳಿಗೆ ಹೊಲಿಸಿದರೆ ಶಿಕ್ಷೆಗೆ ಗುರಿಯಾದವರ ಪ್ರಮಾಣ ಅತ್ಯಂತ ಕಡಿಮೆ ಇರುವುದು ಕಳವಳಕಾರಿಯಾಗಿದೆ. ಇದರಿಂದ ಕಾಯ್ದೆ ಉದ್ದೇಶ ಈಡೇರಿದಂತೆ ಆಗುವುದಿಲ್ಲ ಎಂದು ಹೇಳಿದರು.
ಕಳೆದ ಜೂನ್ ತಿಂಗಳಿಂದ ಇಲ್ಲಿಯವರೆಗೆ ಜಿಲ್ಲೆಯಾದ್ಯಂತ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ 32 ಹೊಸ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪೈಕಿ 3 ಪ್ರಕರಣಗಳಲ್ಲಿ ಸುಳ್ಳು ಆರೋಪ ಮಾಡಿರುವುದು ತನಿಖೆಯಿಂದ ಧೃಡಪಟ್ಟಿದೆ. ಈ ಕುರಿತು ವಿಶೇಷ ಜಿಲ್ಲಾ ನ್ಯಾಯಾಲಯದಲ್ಲಿ ದೌರ್ಜನ್ಯ ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ ಹೇಳಿದರು.ಜಿಲ್ಲೆಯಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ದಾಖಲಾದ 32 ಪ್ರಕರಣಗಳಲ್ಲಿ 42 ಜನ ಸಂತ್ರಸ್ತರಿದ್ದು, ಇವರೆಗೆ ಒಟ್ಟು ₹29.77 ಲಕ್ಷ ಪರಿಹಾರ ಧನವನ್ನು ಸಂತ್ರಸ್ತರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ಆಗಸ್ಟ್ ಅಂತ್ಯದ ವೇಳೆ 116 ದೌರ್ಜನ್ಯ ಪಕ್ರರಣಗಳು ದಾಖಲಾಗಿದ್ದು, ಈ ಪೈಕಿ ಜನವರಿಯಲ್ಲಿ 6, ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ 2 ಹಾಗೂ ಏಪ್ರಿಲ್‍ನಲ್ಲಿ 1 ಪ್ರಕರಣಗಳಲ್ಲಿ ಆರೋಪಿಗಳು ನ್ಯಾಯಾಲಯದಿಂದ ಬಿಡುಗಡೆ ಹೊಂದಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಸಭೆಯಲ್ಲಿ ಮಾಹಿತಿ ನೀಡಿದರು.
ಚಳ್ಳಕೆರೆ ತಾಲೂಕಿನಲ್ಲಿ ಒಟ್ಟು 74 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದು, ಈ ಪೈಕಿ 69 ಮಕ್ಕಳನ್ನು ಮುಖ್ಯವಾಹಿನಿಗೆ ತರಲಾಗಿದೆ. ಬೇರೆ ಜಿಲ್ಲೆಯಿಂದ ಜಿಲ್ಲೆಗೆ ವಲಸೆ ಬಂದು, ಇಲ್ಲಿ ನೆಲೆಸಿರುವವರ ಮಕ್ಕಳ ವಿವರಗಳನ್ನು ಪಡೆದು, ಆಯಾ ಉಪ ನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಅವರು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಪೆಟ್ಟಿಗೆ ಹಾಗೂ ತರಕಾರಿ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಖೇಧಕರ. ಅಬಕಾರಿ ಇಲಾಖೆಯಿಂದ ಹೆಚ್ಚಿನ ದಾಳಿ ನಡೆಸಿ, ಅಕ್ರಮ ಮದ್ಯ ಮಾರಾಟಗಾರರ ಹೆಡೆಮುರಿ ಕಟ್ಟಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳು ಸಹ ಇಂತಹ ಸ್ಥಳಗಲ್ಲಿ ಮದ್ಯ ಖರೀದಿಸಿ ಸೇವನೆ ಮಾಡಿರುವ ಪ್ರಕರಣಗಳು ಜಿಲ್ಲೆಯಲ್ಲಿ ಬೆಳಕಿಗೆ ಬಂದಿವೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಹೆಚ್ಚಾಗಿ ಕಂಡುಬರುತ್ತಿದೆ ಇವುಗಳ ತಡೆಗೆ ಅಬಕಾರಿ ಇಲಾಖೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶನ ನೀಡಿದರು.